ಕೃಷಿಸಖಿಯರು ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸಲು ಸಂಪರ್ಕ ಸೇತುವೆಯಾಗಿ: ಡಾ.ಹರಿಣಿಕುಮಾರ್

| Published : Aug 22 2025, 12:00 AM IST

ಕೃಷಿಸಖಿಯರು ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸಲು ಸಂಪರ್ಕ ಸೇತುವೆಯಾಗಿ: ಡಾ.ಹರಿಣಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಸಖಿಯರು ಸಂಸಾರದ ಜೊತೆಗೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿದ್ದಾರೆ. ನಾವು ಬದಲಾವಣೆಯ ವ್ಯವಸ್ಥೆಗೆ ಹೊಂದಿಕೊಳ್ಳಬೇಕು ಹಾಗೆಯೇ ಜ್ಞಾನವನ್ನು ಅಭಿವೃದ್ಧಿಪಡಿಸದ ಹೊರತು ಕೃಷಿ ಅಭಿವೃದ್ದಿ ಸಾಧ್ಯವಿಲ್ಲ. ಆದ್ದರಿಂದ ಕೃಷಿಸಖಿಯರು ತರಬೇತಿ ಕೇಂದ್ರಗಳಲ್ಲಿ ಪಡೆದ ಜ್ಞಾನ ಮತ್ತು ತಾಂತ್ರಿಕತೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ತಮ್ಮ ಗ್ರಾಮಗಳಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ ಭಾಗವಹಿಸಿ.

ಕನ್ನಡಪ್ರಭ ವಾರ್ತೆ ಮೈಸೂರು

ಕೃಷಿಸಖಿಯರು ವಿವಿಧ ಯೋಜನೆಗಳನ್ನು ರೈತರಿಗೆ ತಲುಪಿಸಲು ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುವಂತೆ ಮಂಡ್ಯ ಕೃಷಿ ವಿಜ್ಞಾನಗಳ ವಿವಿ ವಿಶೇಷಾಧಿಕಾರಿ ಡಾ.ಕೆ.ಎಂ. ಹರಿಣಿಕುಮಾರ್ ತಿಳಿಸಿದರು.

ಸಂಜೀವಿನಿ- ಕೆ.ಎಸ್.ಆರ್.ಎಲ್.ಪಿ.ಎಸ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೃಷಿ ವಿವಿ ಮೈಸೂರಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದಲ್ಲಿ ಆಯೋಜಿಸಿರುವ ಕೃಷಿ ಪರಿಸರ ವಿಧಾನಗಳು ಕುರಿತು ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ (ಕೃಷಿಸಖಿ) 3ನೇ ಮಾಡ್ಯುಲ್‌ ನ 6 ದಿನಗಳ ತರಬೇತಿಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕೃಷಿಸಖಿಯರು ಸಂಸಾರದ ಜೊತೆಗೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿದ್ದಾರೆ. ನಾವು ಬದಲಾವಣೆಯ ವ್ಯವಸ್ಥೆಗೆ ಹೊಂದಿಕೊಳ್ಳಬೇಕು ಹಾಗೆಯೇ ಜ್ಞಾನವನ್ನು ಅಭಿವೃದ್ಧಿಪಡಿಸದ ಹೊರತು ಕೃಷಿ ಅಭಿವೃದ್ದಿ ಸಾಧ್ಯವಿಲ್ಲ. ಆದ್ದರಿಂದ ಕೃಷಿಸಖಿಯರು ತರಬೇತಿ ಕೇಂದ್ರಗಳಲ್ಲಿ ಪಡೆದ ಜ್ಞಾನ ಮತ್ತು ತಾಂತ್ರಿಕತೆಗಳನ್ನು ಯಾವುದೇ ಹಿಂಜರಿಕೆಯಿಲ್ಲದೆ ತಮ್ಮ ತಮ್ಮ ಗ್ರಾಮಗಳಲ್ಲಿ ನಡೆಯುವ ಗ್ರಾಮಸಭೆಗಳಲ್ಲಿ ಭಾಗವಹಿಸಿ, ರೈತರಿಗೆ ತಲುಪಿಸಬೇಕು ಎಂದರು.

ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದ್ದು, ಇದನ್ನು ಹೆಚ್ಚಿಸಲು ಮಣ್ಣು ಪರೀಕ್ಷೆಯನ್ನು ಮಾಡಿಸಲು ರೈತರಿಗೆ ಸೂಕ್ತ ಮಾಹಿತಿ ನೀಡಬೇಕು. ಕೃಷಿಸಖಿಯರು ರೈತರಿಗೆ ವ್ಯವಸಾಯದ ಖರ್ಚು ವೆಚ್ಚ, ಹಣಕಾಸಿನ ನಿರ್ವಹಣೆ, ಕೃಷಿಯಲ್ಲಿ ಹೊಸ ಹೊಸ ವಿಧಾನಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಸ್ತರಣಾ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ಡಾ.ಸಿ. ರಾಮಚಂದ್ರ ಮಾತನಾಡಿ, ಕೃಷಿಸಖಿಯರು ಕೇವಲ ಕೃಷಿ ಮಾತ್ರವಲ್ಲದೆ ಮೌಲ್ಯವರ್ಧನೆ, ಕೃಷಿ ಮಾರುಕಟ್ಟೆ, ಕೃಷಿ ತಂತ್ರಜ್ಞಾನಗಳ ಬಗ್ಗೆ ತರಬೇತಿಯನ್ನು ಪಡೆದು ಉದ್ಯೋಗವಕಾಶ ಮತ್ತು ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದರು.

ಸಂಶೋಧನಾ ನಿರ್ದೇಶಕ ಡಾ.ಎಂ. ದೇವಗಿರಿ ಮಾತನಾಡಿ, ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬ ರೈತರ ಮನೋಭಾವನೆಯನ್ನು ಅಳಿಸಿ, ಕೃಷಿಯು ಒಂದು ಲಾಭದಾಯಕ ಎಂಬ ಆತ್ಮ ವಿಶ್ವಾಸ ತುಂಬುವಂತಹ ಕೆಲಸವನ್ನು ಕೃಷಿಸಖಿಯರು ನಿರ್ವಹಿಸಬೇಕು ಎಂದರು.

ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕಿ ಎಚ್.ಬಿ. ಮಧುಲತಾ, ಜಿಪಂ ಜಿಲ್ಲಾ ವ್ಯವಸ್ಥಾಪಕ ಬಸವರಾಜು, ಸಹ ಸಂಶೋಧನಾ ನಿರ್ದೇಶಕ ಡಾ.ಕೆ.ವಿ. ಕೇಶವಯ್ಯ, ಪ್ರಾಧ್ಯಾಪಕ ಡಾ.ಎಲ್. ವಿಜಯಕುಮಾರ್, ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಎನ್. ಉಮಾಶಂಕರ್ ಕುಮಾರ್, ಸಹಾಯಕ ಪ್ರಾಧ್ಯಾಪಕಾದ ಡಾ. ಗಣೇಶ್ ಪ್ರಸಾದ್, ಡಾ.ಆರ್. ವಿನಯ್ ಕುಮಾರ್, ಡಾ.ಎಂ.ಆರ್. ಮೌಲ್ಯಾ, ಡಾ. ಶಿವಕುಮಾರ್ ಇದ್ದರು.