ಕೃಷ್ಣ ಬಿ-ಸ್ಕೀಮ್ ಪೈಪ್‌ಲೈನ್‌ನಲ್ಲಿ ಸೋರಿಕೆ, ಜಮೀನಿಗೆ ನುಗ್ಗಿದ ನೀರು

| Published : Jul 26 2025, 01:30 AM IST

ಕೃಷ್ಣ ಬಿ-ಸ್ಕೀಮ್ ಪೈಪ್‌ಲೈನ್‌ನಲ್ಲಿ ಸೋರಿಕೆ, ಜಮೀನಿಗೆ ನುಗ್ಗಿದ ನೀರು
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣ ಬಿ-ಸ್ಕೀಮ್ ಪೈಪ್‌ಲೈನ್ ಕಾಮಗಾರಿ ಪ್ರಯೋಗಾರ್ಥವಾಗಿ ಪ್ರಯೋಗಾರ್ಥವಾಗಿ ಬಿಟ್ಟಿದ್ದ ನೀರು ೨೦ ಅಡಿ ಎತ್ತರಕ್ಕೆ ಚಿಮ್ಮಿದ್ದು, ರೈತರು ಬೆಳೆದ ಬೆಳೆ ಹಾಳಾಗಿವೆ. ಬೀಜೋತ್ಪಾದನೆಗಾಗಿ ಬೆಳೆದಿದ್ದ ಹತ್ತಿ ಬೆಳೆಯೂ ನೀರು ಪಾಲಾಗಿದೆ.

ಕನಕಗಿರಿ:

ಕೃಷ್ಣ ಬಿ-ಸ್ಕೀಮ್ ಪೈಪ್‌ಲೈನ್ ಕಾಮಗಾರಿ ಪ್ರಯೋಗಾರ್ಥವಾಗಿ ನೀರು ಸರಬರಾಜು ಪ್ರಕ್ರಿಯೆ ವೇಳೆ ಭಾರಿ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದ್ದರಿಂದ ಅಡವಿಭಾವಿ ಸೀಮಾ ವ್ಯಾಪ್ತಿಯ ರೈತರ ಹೊಲಗಳಿಗೆ ಗುರುವಾರ ನುಗ್ಗಿ ಅಪಾರ ಬೆಳೆ ಹಾನಿಯಾಗಿದೆ.

ತಾಲೂಕಿನ ಚಿಕ್ಕ ವಡ್ರಕಲ್, ಗೌರಿಪುರ, ದೇವಲಾಪುರ, ಲಾಯದುಣಸಿ ಕೆರೆಗೆ ಕೃಷ್ಣ ಬಿ-ಸ್ಕೀಮ್ ಯೋಜನೆಯಡಿ ಅಳವಡಿಸಲಾಗಿರುವ ಪೈಪ್‌ಲೈನ್‌ನಲ್ಲಿ ಪ್ರಯೋಗಾರ್ಥವಾಗಿ ಈಚೆಗೆ ನೀರು ಸರಬರಾಜು ಮಾಡಲಾಗಿದೆ. ಅಡವಿಬಾವಿ ಸೀಮಾ ವ್ಯಾಪ್ತಿಯ ಸರ್ವೇ ನಂ. ೬೦ರಲ್ಲಿ ನೀರು ಸೋರಿಕೆಯಾಗಿದ್ದರಿಂದ ಹತ್ತಿ, ಸಜ್ಜೆ ಹಾಗೂ ಮೆಕ್ಕೆಜೋಳ ಸೇರಿದಂತೆ ಸುಮಾರು ೧೫ ಎಕರೆ ಭೂ ಪ್ರದೇಶದಲ್ಲಿ ಬೆಳೆದ ಬೆಳೆ ನೀರಿನಿಂದ ಆವೃತವಾಗಿದೆ. ಇದೀಗ ತೇವಾಂಶ ಹೆಚ್ಚಾದ ಪರಿಣಾಮ ಹಾಗೂ ನೀರು ರಭಸವಾಗಿ ಹರಿಯುತ್ತಿರುವುದರಿಂದ ಬೆಳೆ ನೆಲಕಚ್ಚಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಪರಿಹಾರದ ನಿರೀಕ್ಷೆ:

ಪ್ರಯೋಗಾರ್ಥವಾಗಿ ಬಿಟ್ಟಿದ್ದ ನೀರು ೨೦ ಅಡಿ ಎತ್ತರಕ್ಕೆ ಚಿಮ್ಮಿದ್ದು, ರೈತರು ಬೆಳೆದ ಬೆಳೆ ಹಾಳಾಗಿವೆ. ಬೀಜೋತ್ಪಾದನೆಗಾಗಿ ಬೆಳೆದಿದ್ದ ಹತ್ತಿ ಬೆಳೆಯೂ ನೀರು ಪಾಲಾಗಿದ್ದು ರೈತರು ಪರಿಹಾರದ ನೀರಿಕ್ಷೆಯಲ್ಲಿದ್ದಾರೆ. ಸಾಲ ಶೂಲ ಮಾಡಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದೇವೆ. ಇಷ್ಟು ಮಳೆ ಇಲ್ಲದೆ ಬೆಳೆ ನಾಶವಾಗಿದ್ದವು. ಕಳೆದ ವಾರದಿಂದ ಅಲ್ಪ ಸ್ವಲ್ಪ ಮಳೆಯಾಗಿದ್ದು ಬೆಳೆ ಬದುಕಿವೆ. ಇದೀಗ ಪೈಪ್‌ಲೈನ್‌ ಒಡೆದು ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿದ್ದರಿಂದ ನಷ್ಟವಾಗಿದೆ. ಅಧಿಕಾರಿಗಳು ಬೆಳೆ ಹಾನಿ ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಅಧಿಕಾರಿ ಭೇಟಿ, ಪರಿಶೀಲನೆ:

ಪೈಪ್‌ಲೈನ್‌ನಲ್ಲಿ ನೀರು ಸೋರಿಕೆಯಾಗಿರುವ ಕುರಿತು ಮಾಹಿತಿ ಪಡೆದು ಕೆಬಿಜಿಎನ್‌ಎಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವೀಕ್ಷಿಸಿದ್ದಾರೆ. ಇನ್ನೂ ಬೆಳೆ ಹಾನಿಯಾದ ಸ್ಥಳಕ್ಕೂ ಹೋಗಿ ಬೆಳೆ ನೆಲಕಚ್ಚಿರುವುದನ್ನು ಪರಿಶೀಲಿಸಿ ಬೆಳೆಹಾನಿಯ ವರದಿ ದೃಢಪಡಿಸಿಕೊಂಡಿದ್ದಾರೆ.

ಮಹಿಳೆ ಪ್ರತಿಭಟನೆ:

ನೀರು ಸೋರಿಕೆಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿರುವ ನಮಗೆ ಪರಿಹಾರ ನೀಡದಿದ್ದರೆ ಏರ್ ವಾಲ್ ಕ್ಯಾಪ್ ಅಳವಡಿಸಲು ಬಿಡುವುದಿಲ್ಲ ಎಂದು ಅಧಿಕಾರಿಗಳು ಭೇಟಿ ನೀಡಿದ ವೇಳೆ ರೈತ ಮಹಿಳೆಯೊಬ್ಬರು ಏರ್ ಸ್ಟನ್ ಮೇಲೆ ಕುಳಿತು ಪ್ರತಿಭಟಿಸಿದ್ದಾರೆ. ಆಗ ಅಧಿಕಾರಿಗಳು ಸ್ಥಳದಿಂದ ವಾಪಸ್ ಹೋಗಿದ್ದಾರೆನ್ನುವ ಮಾಹಿತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ. ಅಲ್ಪ ಪರಿಹಾರ...

ಕೃಷ್ಣ ಬಿ-ಸ್ಕೀಮ್ ಪೈಪ್‌ಲೈನ್‌ನಲ್ಲಿ ಸೋರಿಕೆಯಿಂದ ಬೆಳೆ ನಷ್ಟವಾದ ಮೂವರು ರೈತರಿಗೆ ಕೆಬಿಜೆಎನ್ಎಲ್‌ನಿಂದ ಪರಿಹಾರ ನೀಡಲಾಗಿದೆ. ರೈತರಾದ ಭೀಮಣ್ಣಗೆ ₹ 10 ಸಾವಿರ, ಮಂಜುಳಾ ಹಾಗೂ ಈಶಪ್ಪ ಚವ್ಹಾಣಗೆ ತಲಾ ₹ 15 ಸಾವಿರ ಪರಿಹಾರ ನೀಡಲಾಗಿದೆ ಎಂದು ತಿಳಿದು ಬಂದಿದೆ.ಕೃಷ್ಣ ಬಿ-ಸ್ಕೀಮ್ ಯೋಜನೆಯಡಿ ಕೆಬಿಜಿಎನ್‌ಎಲ್ ಅಧಿಕಾರಿಗಳು ಪ್ರಯೋಗಾರ್ಥವಾಗಿ ನಡೆಸಿದ ವೇಳೆ ಪೈಪ್‌ಲೈನ್‌ನ ಏರ್‌ವಾಲ್‌ನಲ್ಲಿ ಸೋರಿಕೆಯಾಗಿದ್ದು, ನಾಲ್ಕೈದು ರೈತರ ಹೊಲಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಸರ್ಕಾರ ಪರಿಶೀಲಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು.

ಭೀಮಣ್ಣ, ಗ್ರಾಪಂ ಮಾಜಿ ಸದಸ್ಯ

ಕೃಷ್ಣ ಬಿ-ಸ್ಕೀಮ್ ಪೈಪ್‌ಲೈನ್ ಕಾಮಗಾರಿ ಯಶಸ್ವಿಯಾಗಿದೆ. ಪೈಪ್‌ಲೈನ್ ಎಲ್ಲಿಯೂ ಒಡೆದಿಲ್ಲ. ಏರ್‌ವಾಲ್‌ನಿಂದ ನೀರು ಹೊರ ಬಂದಿದ್ದರಿಂದ ಬೆಳೆ ಹಾನಿಯಾಗಿದೆ. ರೈತರಿಗೆ ಪರಿಹಾರ ನೀಡಿ ಸಮಸ್ಯೆ ಪರಿಹರಿಸುತ್ತೇನೆ. ಜು. ೨೬ರಿಂದ ಯೋಜನಾ ವ್ಯಾಪ್ತಿಯ ನಾಲ್ಕು ಕೆರೆಗಳಿಗೆ ನೀರು ಸರಬರಾಜು ಮಾಡಲಾಗುವುದು.

ರಮೇಶ, ಎಇಇ ಕೆಬಿಜೆಎನ್‌ಎಲ್