ಸಾರಾಂಶ
ಯಡ್ರಾಮಿ : ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಇರುವ ಶಹಾಪುರ-ಸಿಂದಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕೋಟ್ಯಂತರ ರು. ಬೆಲೆಬಾಳುವ ಕೃಷ್ಣಾ ಭಾಗ್ಯ ಜಲ ನಿಗಮದ ಆಸ್ತಿ ಒತ್ತುವರಿಗೆ ಒಳಗಾಗಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಜಾಣ ವೌನಕ್ಕೆ ಶರಣಾಗಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಕೃಷ್ಣಾ ಭಾಗ್ಯ ಜಲ ನಿಗಮದ ಆಸ್ತಿ ಕಂಡ ಕಂಡವರ ಪಾಲಾಗುತ್ತಿದ್ದರೂ ಕೂಡ ಹೇಳುವರು, ಕೇಳುವರು ಇಲ್ಲದಂತಾಗಿದೆ..! ಇಲ್ಲಿನ ನಿಗಮದ ಜಮೀನು ಹಾಗೂ ನಿವೇಶನಗಳು ಕಟ್ಟಡಗಳು ನಾಶಗೊಳಿಸಿ ಪ್ರಭಾವಿಗಳಿಂದ ಒತ್ತುವರಿಗೆ ಒಳಗಾಗಿವೆ.
ಇಲ್ಲಿನ ಹೋರಾಟಗಾರರು ಆಗೊಮ್ಮೆ-ಈಗೊಮ್ಮೆ ಒತ್ತುವರಿ ಕುರಿತು ಧ್ವನಿ ಕೇಳಿ ಬರುತ್ತಿದೆ ಯಾದರೂ ಕೆಲವೇ ದಿನಗಳು ಆ ಧ್ವನಿ ಅಡಗಿ ಹೋಗುತ್ತಿದೆ. ನಿಗಮದ ಜಮೀನು, ನಿವೇಶನಗಳನ್ನು ಗುರುತಿಸಿ, ಅವುಗಳನ್ನು ಅಳತೆ ಮಾಡಿ ರಕ್ಷಣಾ ಬೇಲಿ ಅಳವಡಿಸುವ ಪ್ರಾಮಾಣಿಕ ಕಾರ್ಯ ಇದುವರೆಗೂ ನಡೆಯದಿರುವುದರಿಂದ ಪ್ರತಿ ಬಾರಿಯೂ ಕೂಡ ಭೂಗಳ್ಳರ ಕೈ ಮೇಲಾಗುವಂತೆ ಮಾಡಿದೆ.
ಎಲ್ಲಿ ಒತ್ತುವರಿ?: ನಾಗರಹಳ್ಳಿ ಗ್ರಾಮದಲಿ ಹಾಯ್ದು ಹೋಗಿರುವ ಶಹಾಪುರ-ಸಿಂದಗಿ ರಾಜ್ಯ ಹೆದ್ದಾರಿಯ ಅಂಬೇಡ್ಕರ್ ಸರ್ಕಲ್ ಬಳಿ ಜಲ ನಿಗಮಕ್ಕೆ ಸೇರಿರುವ ಸರ್ವೇ ನಂ.9 ರಲ್ಲಿನ 4ಎಕರೆ 32ಗುಂಟೆ ಜಮೀನು 1985-86ರಲ್ಲಿ ಜಲ ನಿಗಮ ಭೂಸ್ವಾಧೀನವಾಗಿದ್ದು, ಈ ಪೈಕಿ ಎರಡು ಎಕರೆಯಷ್ಟು ಪ್ರದೇಶದಲ್ಲಿ ನಿಗಮದ ಕಟ್ಟದಲ್ಲಿ ಜನರು ವಾಸ ಆಗಿದ್ದಾರೆ ಎನ್ನುವ ಅಂದಾಜಿದೆ. ಇನ್ನುಳಿದ ಎರಡುವರೆ ಎಕರೆ ಜಮೀನಲ್ಲಿ ಭೂಗಳ್ಳರಿಂದ ನಿಗಮದ ಕಟ್ಟಡಗಳು, ಮರ ಗಿಡಗಳು ಹಾಗೂ ನೀರಿನ ಟಾಕಿಗಳನ್ನು, ಸಾರ್ವಜನಿಕರ ನೀರಿನ ನಳಗಳು ನಾಶಪಡಿಸಿ ಒತ್ತುವರಿಗೆ ಒಳಗಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿ ಕಂಡು ಬರುತ್ತದೆ.
ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ನಿವೇಶನಗಳು ಪ್ರತಿ ಗುಂಟೆಗೆ ಅಂದಾಜು 10-12 ಲಕ್ಷ ರು. ಬೆಲೆ ಬಾಳುತ್ತವೆ. ಇಂದಿನ ಮಾರುಕಟ್ಟೆ ದರವನ್ನು ಗಮನಿಸಿದರೆ ಇಲ್ಲಿ ಎರಡುವರೆ ಕೋಟಿ ರೂ. ವೌಲ್ಯದ ಜಲ ನಿಗಮದ ಜಮೀನು ಒತ್ತುವರಿಗೆ ಒಳಗಾಗಿದೆ. ಈ ಬಗ್ಗೆ ಮಾಹಿತಿ ಇದ್ದರೂ ಕೂಡ ದಿಟ್ಟ ಕ್ರಮಕ್ಕೆ ಮುಂದಾಗದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳನ್ನು ಸಂಶಯದ ದಷ್ಟಿಯಿಂದ ನೋಡುವಂತಾಗಿದೆ.
ಇನ್ನು ಇಲ್ಲಿನ ಕುಳಗೇರಿ ಸರ್ವೇ ನಂ. 25ಮತ್ತು26 ರಲ್ಲಿ ಜಲ ನಿಗಮಕ್ಕೆ ಸೇರಿರುವ ಸುಮಾರು 18ಎಕರೆ ಜಲ ನಿಗಮದ ಜಮೀನು ಇದೆ. ಈ ಪೈಕಿ ಅರ್ಧದಷ್ಟು ನಿಗಮದ ಜಮೀನು ಭೂಕಳ್ಳರ ಪಾಲಾಗಿದು ಅಪಾರ ವೌಲ್ಯದ ಜಮೀನು ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕರ ಬಳಿ ದೂರು ಕೋಟ್ಯಂತರ ರು. ಬೆಲೆಬಾಳುವ ನಿಗಮದ ಜಮೀನು ಒತ್ತುವರಿಗೆ ಸಂಬಂಧಿಸಿದಂತೆ ಸ್ಥಳೀಯ ಕೆಲ ಪ್ರಜ್ಞಾವಂತ ಯುವಕರು ದೂರು ನೀಡಿದ್ದರು ಯಾವುದೇ ಪ್ರಯೋಜನ ಆಗಿಲ್ಲ. ಭೂ ಒತ್ತುವರಿ ಕುರಿತು ಪ್ರಧಾನ ವ್ಯವಸ್ಥಾಪಕರು ಬಳಿ ಅಳಲು ತೋಡಿಕೊಂಡು ಸರ್ವೇ ನಂ. 9, 25ಮತ್ತು 26 ಇವೆರಡೂ ಆಸ್ತಿಗಳನ್ನು ಸಾರ್ವಜನಿಕರ ಹಿತದಷ್ಟಿಯಿಂದ ಅಳತೆ ಮಾಡಿಸಿ, ಸುರಕ್ಷತಾ ಬೇಲಿ ಅಳವಡಿಸುವಂತೆ ಮನವಿ ಮಾಡಲಾಗಿದೆ. ಒತ್ತುವರಿಗೆ ಒಳಗಾಗಿರುವ ಅಪಾರ ವೌಲ್ಯದ ನಿಗಮದ ಜಮೀನನ್ನು ತೆರವುಗೊಳಿಸಿ, ನಿಗಮದ ಸ್ವತ್ತನ್ನು ಕಬಳಿಸಲು ಮುಂದಾಗಿರುವ ಭೂಗಳ್ಳರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಪ್ರಧಾನ ವ್ಯವಸ್ಥಾಪಕರು ಮುಂದಾಗುವರೇ ಎನ್ನುವುದನ್ನು ಕಾದುನೋಡಬೇಕಿದೆ.
ಈ ಹಿಂದೆ ನಿಗಮದ ಕಟ್ಟಡಗಳನ್ನು ನಾಶಪಡಿಸಿದ ಆರೋಪ ಕೇಳಿ ಬಂದಾಗ ಸ್ಥಳಕ್ಕೆ ಭೇಟಿ ನೀಡಿ ಎಚ್ಚರಿಕೆ ನೀಡಿದರು, ಮತ್ತೆ ಅದೇ ರೀತಿ ಜೆಸಿಬಿಯ ಮೂಲಕ ಉಳಿದ ನಿಗಮದ ಕಟ್ಟಡಗಳನ್ನು ನಾಶಪಡಿಸಿದ್ದಾರೆ. ಎಂದು ಅಲ್ಲಿಯ ಸಾರ್ವಜನಿಕರು ನನಗೆ ಕರೆ ಮಾಡಿ ತಿಳಿಸಿದ್ದಾರೆ. ಕೂಡಲೇ ಆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
- ಶಶಿಕಲಾ ಪಾದಗಟ್ಟಿ, ತಹಸೀಲ್ದಾರ್ ಯಡ್ರಾಮಿ