ಸಾರಾಂಶ
- ಕುದುರೆಗುಂಡಿ ಗಾಯಿತ್ರಿ ವಿಪ್ರ ಮಹಿಳಾ ಬಳಗದಿಂದ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ನಡೆಸುವುದರಿಂದ ಪೋಷಕರು ಹಾಗೂ ಮಕ್ಕಳಲ್ಲಿ ಧರ್ಮಪ್ರಜ್ಞೆ ಜಾಗೃತವಾಗಲಿದೆ ಎಂದು ಕೊಪ್ಪದ ಗಾಯಕಿ ಪ್ರಮೀಳಾ ಪ್ರಭಾಕರ್ ತಿಳಿಸಿದರು.ಭಾನುವಾರ ಕುದುರೆಗುಂಡಿ ಅಶ್ವಗುಂಡೇಶ್ವರ ಸಭಾ ಭವನದಲ್ಲಿ ಕುದುರೆಗುಂಡಿ ಗಾಯಿತ್ರಿ ವಿಪ್ರ ಮಹಿಳಾ ಬಳಗದ ಆಶ್ರಯದಲ್ಲಿ ನಡೆದ ಮಕ್ಕಳ ಕೃಷ್ಣವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಸಭೆ ಅಧ್ಯಕ್ಷತೆ ವಹಿಸಿದ್ದ ಗಾಯಿತ್ರಿ ವಿಪ್ರ ಮಹಿಳಾ ಬಳಗದ ಅಧ್ಯಕ್ಷೆ ಮಮತಾ ಪ್ರಭಾಕರ್ ಮಾತನಾಡಿ, ಕೃಷ್ಣ ವೇಷ ಸ್ಪರ್ಧೆಯಲ್ಲಿ ಸುತ್ತ ಮುತ್ತ ಊರುಗಳ ಅನೇಕ ಮಕ್ಕಳು ಭಾಗವಹಿಸಿದ್ದಾರೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಹೊರ ತೆಗೆಯುವುದೇ ಕೃಷ್ಣ ವೇಷ ಸ್ಪರ್ಧೆ ಮುಖ್ಯ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳಿಗೆ ಶ್ರೀರಾಮನ ವೇಷ ಸ್ಪರ್ಧೆ ನಡೆಸುವ ಚಿಂತನೆ ನಡೆಸಲಾಗಿದೆ ಎಂದರು.
ಗಾಯಿತ್ರಿ ವಿಪ್ರ ಮಹಿಳಾ ಬಳಗದ ಸದಸ್ಯೆ ಶಾಂತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸನಾತನ ಧರ್ಮದಲ್ಲಿ ರಾಮಾಯಾಣ, ಮಹಾಭಾರತ ಗ್ರಂಥಗಳಿಗೆ ವಿಶೇಷ ಸ್ಥಾನಮಾನವಿದೆ. ಎಲ್ಲಿ ಅನ್ಯಾಯ ನಡೆಯುತ್ತಿದೆಯೋ ಅಲ್ಲಿ ಶ್ರೀ ಕೃಷ್ಣ ಪ್ರತ್ಯಕ್ಷವಾಗಿ ಅನ್ಯಾಯ ಸರಿಪಡಿಸುತ್ತಾನೆ. ಬಾಲ್ಯದಿಂದಲೂ ಶ್ರೀ ಕೃಷ್ಣ ಅನ್ಯಾಯದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದನು. ಆದ್ದರಿಂದ ಕೃಷ್ಣನ ವೇಷ ಸ್ಪರ್ಧೆಗೆ ವಿಶೇಷ ಅರ್ಥ ಬರಲಿದೆ ಎಂದರು.ಕೃಷ್ಣ ವೇಷ ಸ್ಪರ್ಧೆಯಲ್ಲಿ 15 ಮಕ್ಕಳು ಭಾಗವಹಿಸಿದ್ದರು. 1 ರಿಂದ 3 ವರ್ಷ ವಯಸ್ಸಿನ ಸ್ಪರ್ಧೆ ಬಾಲಕೃಷ್ಣ ವಿಭಾಗದಲ್ಲಿ ವಾರಿದಿ ಪ್ರಥಮ, ಯಶ್ಮಿತ್ ದ್ವಿತೀಯ, ಶ್ರೀಹಾನ್ ತೃತೀಯ ಬಹುಮಾನ ಪಡೆದರು.3 ರಿಂದ 6 ವರ್ಷ ವಿಭಾಗದ ತುಂಟ ಕೃಷ್ಣ ವಿಭಾಗದಲ್ಲಿ ಸಾತ್ವಿಕ್ ಪ್ರಥಮ, ಶಾಶ್ವತಿ ದ್ವಿತೀಯ ಹಾಗೂ ಅನನ್ಯ ತೃತೀಯ ಬಹುಮಾನ ಪಡೆದರು.ಅತಿಥಿಗಳಾಗಿ ಕೊಪ್ಪದ ಕಲಾವಿದೆ ಸುನೀತ ಸಂತೋಷ್, ಗಾಯಿತ್ರಿ ವಿಪ್ರ ಮಹಿಳಾ ಬಳಗದ ಕಾರ್ಯದರ್ಶಿ ಸುಮಾ ನಾರಾಯಣಮೂರ್ತಿ ಇದ್ದರು. ಹರಿಪ್ರಿಯ ಪ್ರಾರ್ಥಿಸಿದರು. ವಿಪ್ರ ಮಹಿಳಾ ಬಳಗದ ಸಾಂಸ್ಕೃತಿಕ ರಾಯಬಾರಿ ರಂಗಿಣಿ ಯು ರಾವ್, ಮಾನಸ , ವಸುಂದರ ಇದ್ದರು.