ಕೃಷ್ಣ ದೇವರಾಯ ವಿವಿ ಯಡವಟ್ಟು, ಬದಲಾದ ಪ್ರಶ್ನೆಪತ್ರಿಕೆ

| Published : May 15 2024, 01:40 AM IST

ಕೃಷ್ಣ ದೇವರಾಯ ವಿವಿ ಯಡವಟ್ಟು, ಬದಲಾದ ಪ್ರಶ್ನೆಪತ್ರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯದ 3ನೇ ಸೆಮಿಸ್ಟರ್‌ ಸಮಾಜ ಶಾಸ್ತ್ರ ಪರೀಕ್ಷೆಯ ಸಂದರ್ಭ 1ನೇ ಸೆಮಿಸ್ಟರ್‌ನ ಪ್ರಶ್ನೆ ಪತ್ರಿಕೆ ನೀಡಿದ್ದರಿಂದ ವಿದ್ಯಾರ್ಥಿಗಳು ತೀವ್ರ ಗೊಂದಲಕ್ಕೀಡಾಗಿ, ಬಳಿಕ ಪರೀಕ್ಷೆ ಮುಂದೂಡಿದ ಘಟನೆ ನಡೆದಿದೆ.

- ಮೂರನೇ ಸೆಮ್‌ಗೆ 1ನೇ ಸೆಮಿಸ್ಟರ್‌ ಪ್ರಶ್ನೆಪತ್ರಿಕೆ, ವಿದ್ಯಾರ್ಥಿಗಳು ತಬ್ಬಿಬ್ಬು, ಪರೀಕ್ಷೆ ಮುಂದೂಡಿಕೆ

- ಪರೀಕ್ಷೆಗೆ ಕುಳಿತಿದ್ದ ವಿದ್ಯಾರ್ಥಿಗಳಲ್ಲಿ ಆತಂಕ ಕನ್ನಡಪ್ರಭ ವಾರ್ತೆ ಕೊಪ್ಪಳ

ಬಳ್ಳಾರಿಯ ಕೃಷ್ಣದೇವರಾಯ ವಿಶ್ವವಿದ್ಯಾಲಯದ 3ನೇ ಸೆಮಿಸ್ಟರ್‌ ಸಮಾಜ ಶಾಸ್ತ್ರ ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ 1ನೇ ಸೆಮಿಸ್ಟರ್‌ನ ಪ್ರಶ್ನೆ ಪತ್ರಿಕೆ ನೀಡಿದ್ದರಿಂದ ವಿದ್ಯಾರ್ಥಿಗಳು ತೀವ್ರ ಗೊಂದಲಕ್ಕೀಡಾಗಿ, ಬಳಿಕ ಪರೀಕ್ಷೆಯನ್ನು ಮುಂದೂಡಿದ ಘಟನೆ ಮಂಗಳವಾರ ನಡೆದಿದೆ.

ಪ್ರಶ್ನೆ ಪತ್ರಿಕೆ ಬದಲಾಗಿದ್ದರೂ ಸಹ ಪ್ರಾರಂಭದಲ್ಲಿ ಪರೀಕ್ಷಾ ಮೇಲ್ವಿಚಾರಕರು ಇದನ್ನು ಗಂಭೀರವಾಗಿ ಪರಿಗಣಿಸದೇ ಸರಿಯಾಗಿಯೇ ಇದೆ ಎಂದು ವಿದ್ಯಾರ್ಥಿಗಳಿಗೆ ಬರೆಯುವಂತೆ ಹೇಳಿದ್ದರಿಂದ ವಿದ್ಯಾರ್ಥಿಗಳು ಗಾಬರಿಗೊಂಡಿದ್ದು, ಬಳಿಕ ತಪ್ಪು ಅರಿವಾಗಿ ಪರೀಕ್ಷೆ ಮುಂದೂಡಿದಾಗ ವಿದ್ಯಾರ್ಥಿಗಳು ನಿರಾಳರಾದರು.

ಆಗಿದ್ದೇನು:

ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿವಿ ವ್ಯಾಪ್ತಿಯಲ್ಲಿನ 3ನೆ ಸೆಮಿಸ್ಟರ್‌ ಪದವಿ ವಿದ್ಯಾರ್ಥಿಗಳಿಗೆ ಮಂಗಳವಾರ ಸಮಾಜಶಾಸ್ತ್ರ ಪರೀಕ್ಷೆ ನಿಗದಿಯಾಗಿತ್ತು. ಆದರೆ 3ರ ಬದಲು 1ನೇ ಸೆಮಿಸ್ಟರ್‌ ಪ್ರಶ್ನೆಪತ್ರಿಕೆ ನೀಡಲಾಗಿತ್ತು. ವಿದ್ಯಾರ್ಥಿಗಳು ಗೊಂದಲಕ್ಕೀಡಾದರು. ಮೇಲ್ವಿಚಾರಕರ ಗಮನಕ್ಕೆ ತಂದರು. ಅವರೂ ಸಹ ಪ್ರಶ್ನೆಪತ್ರಿಕೆ ಬಂದ ಕವರ್‌ ನೋಡಿದಾಗ ಅದರಲ್ಲಿ 3ನೇ ಸೆಮಿಸ್ಟರ್‌ ಸಮಾಜಶಾಸ್ತ್ರ ಪ್ರಶ್ನೆಪತ್ರಿಕೆ ಎಂದೇ ಇತ್ತು. ಅವರೂ ಸಹ ಗೊಂದಲಕ್ಕೀಡಾಗಿ ಇದು 3ನೇ ಸೆಮಿಸ್ಟರ್‌ನದ್ದೇ ಇರಬೇಕೆಂದೇ ಭಾವಿಸಿ ಉತ್ತರ ಬರೆಯಲು ಹೇಳಿದರು.

ಇದರಿಂದ, ಕೊಪ್ಪಳ, ಗಂಗಾವತಿ, ಬಳ್ಳಾರಿ ಸೇರಿದಂತೆ ವಿವಿ ವ್ಯಾಪ್ತಿಯ 144 ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು ಗೊಂದಲಕ್ಕೆ ಈಡಾದರು. ಈ ಕುರಿತು ಕಾಲೇಜಿನ ಪ್ರಾಚಾರ್ಯರು ವಿವಿಯ ಗಮನಕ್ಕೆ ತಂದರು. ಆರಂಭದಲ್ಲಿ ಅವರೂ ಸಹ ಅಷ್ಟಾಗಿ ಗಂಭೀರವಾಗಿ ಪರಿಗಣಿಸದೇ ಅದು ಹೇಗೆ ಸಾಧ್ಯ ಎಂದೆಲ್ಲ ಮರಳಿ ಪ್ರಶ್ನೆ ಮಾಡಿ, ಸರಿಯಾಗಿ ನೋಡಿ ಎಂದೆಲ್ಲ ಹೇಳಿದರು. ಇದರಿಂದ ಅರ್ಧಗಂಟೆಗೂ ಅಧಿಕ ಕಾಲ ವಿದ್ಯಾರ್ಥಿಗಳು ಕಳವಳಕ್ಕೀಡಾಗಿದ್ದರು.

ಕೊನೆಗೆ ಆಗಿರುವ ಪ್ರಮಾದದ ಕುರಿತು ವಿವಿಯ ಮೇಲಾಧಿಕಾರಿಗಳಿಗೆ ಮನವರಿಕೆಯಾಗಿ, ಹೌದು, ಪ್ರಶ್ನೆಪತ್ರಿಕೆ ಬೇರೆಯದೇ ನೀಡಲಾಗಿದೆ. ಕೂಡಲೇ ಪರೀಕ್ಷೆ ಸ್ಥಗಿತ ಮಾಡಿ, ಹಾಗೆಯೇ ಇಂದು ನಡೆಯಬೇಕಾಗಿದ್ದ ಸಮಾಜಶಾಸ್ತ್ರ ವಿಷಯದ ಪರೀಕ್ಷೆಯನ್ನು ಮುಂದೂಡಿ ಎಂದು ಆದೇಶ ಬಂದಿತು.

ಅದರಂತೆ ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಪ್ರಶ್ನೆ ಪತ್ರಿಕೆ ವಾಪಸ್ಸು ಪಡೆದು, ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ವಾಪಸ್‌ ಕಳುಹಿಸಲಾಯಿತು.

ವಿದ್ಯಾರ್ಥಿಗಳ ಆಕ್ರೋಶ:

ಪ್ರಶ್ನೆಪತ್ರಿಕೆಗಳನ್ನು ಸರಿಯಾಗಿ ನೀಡದೆ, ಪರೀಕ್ಷೆ ಮುಂದೂಡಿದ ಕುರಿತು ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರಿಯಾಗಿ ಪರೀಕ್ಷೆ ನಡೆಸದೇ ಇದ್ದರೆ ಹೇಗೆ, ವಿದ್ಯಾರ್ಥಿಗಳು ಪ್ರಶ್ನೆ ಮಾಡದೆ ಇದ್ದರೆ ಅದೇ ಪ್ರಶ್ನೆ ಪತ್ರಿಕೆಯಲ್ಲಿಯೇ ಪರೀಕ್ಷೆ ನಡೆಸುತ್ತಿದ್ದರು ಎಂದೆಲ್ಲ ವಿದ್ಯಾರ್ಥಿಗಳು ಕಿಡಿಕಾರಿದರು.

ಪ್ರಶ್ನೆಪತ್ರಿಕೆ ಬದಲಾಗಿದ್ದರಿಂದ ಸಮಸ್ಯೆಯಾಗಿದ್ದು, ತಕ್ಷಣ ವಿವಿಯ ಗಮನಕ್ಕೆ ತರಲಾಗಿದ್ದು, ಈಗ ಸದ್ಯ ಪದವಿ 3ನೇ ಸೆಮಿಸ್ಟರ್‌ ಸಮಾಜ ಶಾಸ್ತ್ರದ ಪರೀಕ್ಷೆ ಮುಂದೂಡಲಾಗಿದೆ. ನಂತರ ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ತಿಮ್ಮಾರಡ್ಡಿ ತಿಳಿಸಿದ್ದಾರೆ.

ಶ್ರೀ ಕೃಷ್ಣದೇವರಾಯ ವಿವಿ ಯಡವಟ್ಟಿಗೆ ಕೊನೆಯೇ ಇಲ್ಲದಂತೆ ಆಗಿದೆ. ಸರಿಯಾಗಿ ಪರೀಕ್ಷೆ ನಡೆಸುವುದಿಲ್ಲ ಮತ್ತು ನಂತರ ಸಕಾಲಕ್ಕೆ ಫಲಿತಾಂಶ ಪ್ರಕಟಿಸುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಹೇಳಿದ್ದಾರೆ.