ಸಾರಾಂಶ
- ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಆಶ್ರಯದಲ್ಲಿ ಸಾಂಸ್ಕೃತಿಕ ಸಂಭ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಕೃಷ್ಣನು ದುಷ್ಟರ ಸಂಹಾರ ಮಾಡಿ ಧರ್ಮ ಸ್ಥಾಪನೆ ಮಾಡಿದ್ದನು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕರಾದ ಬಿ. ಕೆ. ಪ್ರಮೀಳಕ್ಕ ಹೇಳಿದರು.
ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಘಟಕ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹಾಗೂ ಅಂಗನವಾಡಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಡೆದ ಸಾಂಸ್ಕೃತಿಕ ಸಂಭ್ರಮ, ಮಕ್ಕಳಿಗೆ ಮುದ್ದುಕೃಷ್ಣ ಮತ್ತು ರಾಧಾ ವೇಷ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಕೃಷ್ಣ ಎಂದರೆ ಬಹಳಷ್ಟು ಆನಂದ ಕೊಡುವವನು ಒಂದೊಂದು ಮನೆಯಲ್ಲೂ ಕೂಡ ಕೃಷ್ಣನ ಜನ್ಮವಾಗಬೇಕು. ಕೃಷ್ಣನ ಜೀವನದಲ್ಲಿ ಸ್ಥಿತಪ್ರಜ್ಞ ಗುಣವನ್ನು ಕಾಣಬಹುದು. ಈಶ್ವರಿಯ ವಿಶ್ವವಿದ್ಯಾಲಯದಲ್ಲೂ ಕೂಡ ರಾಜಯೋಗದ ಮೂಲಕ ಸ್ಥಿತಪ್ರಜ್ಞ ಗುಣ ಬೆಳೆಸುತ್ತೇವೆ ಎಂದರು.ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಹಿಂದೂ ಸಂಪ್ರದಾಯ ದಿನೇ ದಿನೇ ಕ್ಷೀಣಿಸುತ್ತಾ ಬಂದಿದೆ. ಅದ್ಧೂರಿ ಕಾರ್ಯಕ್ರಮದಲ್ಲಿ ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಪ್ರತಿಯೊಬ್ಬ ಮಕ್ಕಳನ್ನು ಕೃಷ್ಣನ ರೂಪದಲ್ಲಿ ಕಾಣಬೇಕು ಎಂದು ಹೇಳಿದರು. ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ್ ಮಾತನಾಡಿ, ಕೃಷ್ಣ ಜನ್ಮಾಷ್ಟಮಿ ಹಬ್ಬ ಮಕ್ಕಳೊಂದಿಗೆ ತಾಯಿಗೂ ಕೂಡ ಸಂಭ್ರಮ ತರುವ ಹಬ್ಬವಾಗಿದೆ. ಕೃಷ್ಣ ಒಬ್ಬ ಒಳ್ಳೆಯ ರಾಜಕಾರಣಿ, ಚಾಣಾಕ್ಷ, ರಾಜಕೀಯ ಪಟುವಾಗಿದ್ದನು. ರಾಜಕೀಯ ದವರಿಗೆ ಕೃಷ್ಣ ಆದರ್ಶಪ್ರಾಯವಾಗಬೇಕಾಗಿತ್ತು. ರಾಜಕಾರಣಿಗಳು ಕೃಷ್ಣನ ತಂತ್ರಗಾರಿಕೆ ಪಾಲಿಸಬೇಕು. ಸತ್ಯವನ್ನು ಜಯಿಸಲು ಕೃಷ್ಣ ಒಬ್ಬ ಮಾದರಿಯಾಗಿದ್ದಾನೆ ಎಂದರು.ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ , ಸಾಹಿತ್ಯ ಪರಿಷತ್ತು ಸಾಹಿತ್ಯದೊಂದಿಗೆ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿದೆ. ಭಗವಾನ್ ಶ್ರೀ ಕೃಷ್ಣನು ಜಗತ್ತಿನ ಗುರು. ಭಕ್ತಿ ,ಪ್ರೀತಿ, ನೈತಿಕತೆಗೆ ಹೆಸರಾದ ಕೃಷ್ಣನು ಪುರಾಣದಲ್ಲಿ ಮಾತ್ರವಲ್ಲ. ಇಂದಿಗೂ ಪ್ರತಿಯೊಬ್ಬ ಭಕ್ತನ ಹೃದಯದಲ್ಲೂ ವಾಸವಾಗಿದ್ದಾನೆ ಎಂದು ಹೇಳಿದರು. ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸಾವಿತ್ರಿ ರಾಜಯೋಗದ ಬಗ್ಗೆ ಮಾಹಿತಿ ನೀಡಿದರು. ಅತಿಥಿಗಳಾಗಿ ಅಂಗನವಾಡಿ ಶಿಕ್ಷಕಿ ಶೈಲಾ, ನಿವೃತ್ತ ಶಿಕ್ಷಕಿ ಜಯಂತಿ, ಬಿ. ವಿದ್ಯಾನಂದ ಕುಮಾರ್, ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಜಯಂತಿ, ಮಂಗಳ ಪ್ರಸನ್ನ, ಎಂ ಜಯಮ್ಮ, ಕ.ಸಾ.ಪ ಮಹಿಳಾ ಘಟಕದ ಪದಾಧಿಕಾರಿಗಳಾದ ವಾಸಂತಿ, ಶಶಿಕಲಾ, ಅನುಪಮಾ ಮತ್ತಿತರರು ಪಾಲ್ಗೊಂಡಿದ್ದರು ಭಾನುಮತಿ ಪ್ರಾರ್ಥಿಸಿದರು. ಅನುಪಮಾ ಸ್ವಾಗತಿಸಿ, ಶಶಿಕಲ ನಿರೂಪಿಸಿದರು. ವಾಸಂತಿ ವಂದಿಸಿದರು. ಜಾನಪದ ಪರಿಷತ್ ಮಹಿಳಾ ಘಟಕದ ಸದಸ್ಯರು ನಾಡಗೀತೆ ಹಾಡಿದರು. ಕೃಷ್ಣ ರಾಧೆ ವೇಷ ಸ್ಪರ್ಧೆಯಲ್ಲಿ ಪಾಲ್ಗೊಂಡ 2 ವರ್ಷದ ಒಳಗಿನ ಮಕ್ಕಳು, 2-5 ವರ್ಷದ ಮಕ್ಕಳು ಹಾಗೂ 5-8 ವರ್ಷದ ಒಳಗಿನ ಮಕ್ಕಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಯಿತು. ಒಟ್ಟು 25 ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು