ಸಾರಾಂಶ
ಈಶ್ವರ ಶೆಟ್ಟರ
ಕನ್ನಡಪ್ರಭ ವಾರ್ತೆ ಬಾಗಲಕೋಟೆನಾಡು ಕಂಡ ಮುತ್ಸದ್ದಿ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಧಿಕಾರವಧಿಯಲ್ಲಿನ ಕೊಡುಗೆ ಬಾಗಲಕೋಟೆ ಜಿಲ್ಲೆಯ ಜನರಲ್ಲಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಬಾಧಿತರಾದ ಸಂತ್ರಸ್ತರಲ್ಲಿ ಇಂದಿಗೂ ನೆನಪಿನಲ್ಲಿ ಉಳಿಯುವ ಹಾಗೆ ಇದೆ.
1999ರಿಂದ 2004 ರವರೆಗಿನ ಅವರ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಬಾಗಲಕೋಟೆ, ಆಲಮಟ್ಟಿ ಯೋಜನೆಗೆ ನೀಡಿದ ಆದ್ಯತೆ. ಅದರಲ್ಲೂ ಕೆಲವು ಏತ ನೀರಾವರಿ ಯೋಜನೆಗಳಿಗೆ ನೀಡಿದ ಹಣಕಾಸಿನ ನೆರವಿನ ಪರಿಣಾಮ ಇಂದು ಸಾವಿರಾರು ಎಕರೆ ಭೂಮಿ ಕೃಷ್ಣಾ ನದಿ ನೀರಿನಿಂದ ಕಂಗೊಳಿಸುವಂತೆ ಮಾಡಿದೆ.ಕ್ಲಿಷ್ಟಕರ ಸಂದರ್ಭ ಎದುರಿಸಿದ್ದ ಕೃಷ್ಣ:
1999ರ ಆರಂಭದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಎಸ್.ಎಂ.ಕೃಷ್ಣರಿಗೆ ಅಂದು, ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ತರು ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಮಾಡಲೇಬೇಕು ಎಂಬ ದಿಟ್ಟ ನಿರ್ಧಾರ ಹಾಗೂ ಅನಿವಾರ್ಯತೆಯನ್ನು ಬಾಗಲಕೋಟೆ ಹಾಗೂ ಯೋಜನಾ ಬಾಧಿತ ಜಿಲ್ಲೆಗಳ ಜನಪ್ರತಿನಿಧಿಗಳ ಸಹಕಾರದಿಂದ ಯಶಸ್ವಿಗೊಳಿಸಿದ ನಾಯಕ ಎಸ್.ಎಂ.ಕೃಷ್ಣ.ಆಲಮಟ್ಟಿ ಡ್ಯಾಂಲ್ಲಿ ನೀರು ನಿಲ್ಲಿಸಿದ್ರು:
ಪ್ರತಿವರ್ಷ ಸಾವಿರಾರೂ ಟಿಎಂಸಿ ನೀರು ಕೃಷ್ಣೆಯ ಮೂಲಕ ಸಮುದ್ರ ಸೇರುತ್ತಿದ್ದ ಸಂದರ್ಭವದು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರದ ಹಕ್ಕು ಸಾಧಿಸಿರುವ ನೀರನ್ನು ಹಿಡಿದಿಟ್ಟುಕೊಳ್ಳಬೇಕೆಂಬ ಬಚಾವತ್ ಆಯೋಗದ ತೀರ್ಪನ್ನು ಅನುಷ್ಠಾನಗೊಳಿಸಿ. ಯೋಜನಾ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಿ ನಂತರ ಪರಿಹಾರ ಧನ ನೀಡಿದ ನಂತರವೇ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹಿಸುವ ಅನಿವಾರ್ಯತೆ ಸವಾಲುಗಳನ್ನು ಹಲವು ಲೋಪಗಳ ನಡುವೆಯೂ ಯಶಸ್ವಿಗೊಳಿಸಿದರು.ಒಂದು ಲಕ್ಷ ಜನವಸತಿಯುಳ್ಳ ಬಾಗಲಕೋಟೆ ನಗರದ ಸಂತ್ರಸ್ತರ ಸ್ಥಳಾಂತರ ಯೋಜನೆ ಬಾಧಿತ 136 ಗ್ರಾಮಗಳ ಸಂತ್ರಸ್ತರ ಪುನರ್ವಸತಿ ಕಲ್ಪಿಸಿ ನೀರು ನಿಲ್ಲಿಸುವ ಸವಾಲನ್ನು ಸ್ವೀಕರಿಸಿ 2001ರ ಅಂತಿಮ ದಿನಗಳಲ್ಲಿ ಆಲಮಟ್ಟಿ ಜಲಾಶಯದಲ್ಲಿ 519.60 ಮೀ. ರವರೆಗೆ ನೀರನ್ನು ಸಂಗ್ರಹಿಸಿ 123 ಟಿಎಂಸಿ ನೀರನ್ನು ಹಿಡಿದಿದ್ದರಿಂದ ಇಂದು ಲಕ್ಷಾಂತರ ಹೇಕ್ಟೆರ್ ಪ್ರದೇಶ ನೀರಾವರಿ ಕಂಡಿದೆ.
ಬಾಗಲಕೋಟೆಗೆ ಅನನ್ಯ ಕೊಡುಗೆ:ಒಂದೆಡೆ ನೀರು ಸಂಗ್ರಹ ಆರಂಭ ತೀವ್ರಗೊಂಡಾಗ ಬಾಗಲಕೋಟೆ ನದಿ ತೀರದ ನಿವಾಸಿಗಳ ಬದುಕು ಅಕ್ಷರಶಃ ಅತಂತ್ರ ಗೊಂಡಿತ್ತು. ಘಟಪ್ರಭಾ ನದಿಯ ಮೂಲಕ ಬಂದ ಕೃಷ್ಣಾ ಹಿನ್ನೀರಿನಿಂದ ಮುಳುಗಡೆ ಕಂಡ ನಗರದ ಜನತೆಗೆ ನವನಗರವೆಂಬ ಅಂದಿನ ಅಭಿವೃದ್ಧಿ ಕಾಣದ ನಗರಕ್ಕೆ ಸ್ಥಳಾಂತರಗೊಳ್ಳುವುದೆಂದರೆ ಸಂತ್ರಸ್ತರ ಪಾಲಿಗೆ ನರಕಯಾತನೆಯಾಗಿತ್ತು. ಆಗ ಬಾಗಲಕೋಟೆ ನದಿ ತೀರದಲ್ಲಿ ಆರಂಭಗೊಂಡ ಹೋರಾಟ ಕೊನೆಗಾಣಿಸಿ ಸಂತ್ರಸ್ತರ ಪರ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದ ಕೃಷ್ಣ ಅವರು ಬಾಗಲಕೋಟೆಗೆ ಬಂದು ನಿರ್ಧಾರ ಪ್ರಕಟಿಸಿದ್ದರು.
₹638 ಕೋಟಿ ಪ್ಯಾಕೇಜ್ ಘೋಷಣೆ:ಬಾಗಲಕೋಟೆ ಸಂತ್ರಸ್ತರ ಸಮಸ್ಯೆಗಳ ಆಲಿಕೆಗೆ ಅಂದು ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರು, ಸಂಪುಟ ಉಪಸಮಿತಿ ರಚಿಸಿ ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ, ಡಿ.ಕೆ.ಶಿವಕುಮಾರ, ಕಾಗೋಡು ತಿಮ್ಮಪ್ಪ ಅವರನ್ನು ಬಾಗಲಕೋಟೆಗೆ ಅಧ್ಯಯನಕ್ಕೆ ಕಳುಹಿಸಿ ವಾಸ್ತವಾಂಶದ ವರದಿ ತರಿಸಿಕೊಂಡಿದ್ದರು. ಸಂತ್ರಸ್ತರ ಶಾಶ್ವತ ಸೌಲಭ್ಯಗಳಿಗಾಗಿ ಅಂದಿನ ಬಾಗಲಕೋಟೆ ಸಂಸದ ಆರ್.ಎಸ್.ಪಾಟೀಲ, ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಸಲಹೆ ಪಡೆದು ₹638 ಕೋಟಿ ಬೃಹತ್ ಮೊತ್ತದ ಪ್ಯಾಕೇಜ್ ಘೋಷಣೆ ಮಾಡಿದ್ದರ ಪರಿಣಾಮ ಇಂದು ನವನಗರ ಅಭಿವೃದ್ಧಿ ಕಾಣಲು ಸಾಧ್ಯವಾಯಿತು.
68 ಸಾಹಿತ್ಯ ಸಮ್ಮೇಳನಕ್ಕೆ ನೆರವು:ಬಾಗಲಕೋಟೆಯಲ್ಲಿ ನಡೆದ 2002 ರಲ್ಲಿನ 68ನೇ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬಾಗಲಕೋಟೆಗೆ ಸಮ್ಮೇಳನಕ್ಕೆ ಬಂದಿದ್ದ ಎಸ್.ಎಂ.ಕೃಷ್ಣ ಅವರು ಸಮ್ಮೇಳನಕ್ಕೆ ವಿಶೇಷ ಅನುದಾನ ನೀಡಿದ್ದರು. ಸಮ್ಮೇಳಾನಾಧ್ಯಕ್ಷರಾಗಿದ್ದ ಶಾಂತಾದೇವಿ ಮಾಳವಾಡ ಅವರನ್ನು ಅಭಿಮಾನದಿಂದ ಸತ್ಕರಿಸಿ ಗೌರವಿಸಿದ್ದರು.
ಒಟ್ಟಾರೆ ಮುಖ್ಯಮಂತ್ರಿ ಅವಧಿಯಲ್ಲಿ ಬಾಗಲಕೋಟೆ ಜನತೆಯ ಭಾವನೆಗಳಿಗೆ ಸ್ಪಂದಿಸಿದ್ದ ಎಸ್.ಎಂ.ಕೃಷ್ಣಾ ಅವರಿಗೆ ಜಿಲ್ಲೆಯ ಜನತೆ ಸದಾ ಕೃತಜ್ಞತಾ ಭಾವ ಇದೆ ಎಂದರೆ ತಪ್ಪಾಗಲಾರದು.1999-2004ರ ಅವರ ಮುಖ್ಯಮಂತ್ರಿ ಅವಧಿಯಲ್ಲಿ ಬಾಗಲಕೋಟೆ ಜಿಲ್ಲೆಯ ಸಂತ್ರಸ್ತರ ಸೌಲಭ್ಯ ನೀಡಲು ನಮಗೆ ಪೂರ್ಣಅಧಿಕಾರ ನೀಡಿದ್ದರು. ಅಂದು ಉಸ್ತುವಾರಿ ಸಚಿವನಾಗಿದ್ದ ನನಗೆ ಆಲಮಟ್ಟಿ ಜಲಾಶಯದಲ್ಲಿ ನೀರು ಸಂಗ್ರಹದ ಸಂದರ್ಭದಲ್ಲಿ ಅವರ ನೀಡಿದ ಸಹಕಾರ ಹಾಗೂ ಏತನೀರಾವರಿಗಳಿಗೆ ನೀಡಿದ ಆದ್ಯತೆ ಪರಿಣಾಮ ಇಂದು ಹಲವು ಸಾವಿರ ಏಕರೆ ಭೂಮಿಯಲ್ಲಿ ಸಮೃದ್ಧ ಬೆಳೆ ಕಾಣಬಹುದಾಗಿದೆ.
ಆರ್.ಬಿ.ತಿಮ್ಮಾಪೂರ, ಉಸ್ತುವಾರಿ ಸಚಿವರು ಬಾಗಲಕೋಟೆ ಜಿಲ್ಲೆ1999-2004ರ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಸಂಸದನಾಗಿದ್ದ ನನಗೆ ಪೂರ್ಣ ಸಹಕಾರ ನೀಡಿದ್ದ ಎಸ್.ಎಂ.ಕೃಷ್ಣ ಅವರು ಬಾಗಲಕೋಟೆ ಜಿಲ್ಲೆಯ ಸಂತ್ರಸ್ತರ ಸಮಸ್ಯೆಗಳನ್ನು ನಾನು ಪ್ರಸ್ತಾಪಿಸಿದಾಗಲೆಲ್ಲಾ ನೆರವು ನೀಡಿದ್ದರು. ಜಿಲ್ಲೆಯ ಅಂದಿನ ಶಾಸಕ, ಸಚಿವರ ಸಹಕಾರದೊಂದಿಗೆ ಅವರ ಬಳಿ ತೆರಳಿದಾಗಲೆಲ್ಲಾ ಜಿಲ್ಲೆಯ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮಗಳನ್ನು ಸರ್ಕಾರದಿಂದ ಕೊಡ ಮಾಡಿದ್ದರು.
ಆರ್.ಎಸ್.ಪಾಟೀಲ, ಮಾಜಿ ಸಂಸದ ಬಾಗಲಕೋಟೆ