ಸಾರಾಂಶ
ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದು, ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿದ್ದು, ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.ಮುಧೋಳ ತಾಲೂಕಿನ ಪ್ರವಾಹ ಪೀಡಿತ ಮಿರ್ಜಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮಿರ್ಜಿ ಗ್ರಾಮದ 12 ಕುಟುಂಬಗಳು ಬಾಧಿತಗೊಂಡಿದ್ದು, ಆ ಕುಟುಂಬದ 62 ಜನ ಸಂತ್ರಸ್ತರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಿ, ಅಲ್ಲಿ ಊಟ, ವಸತಿ ಹಾಗೂ ಅಗತ್ಯ ಮೂಲ ಸೌಲಭ್ಯಗಳೊಂದಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನೂ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ನದಿ ದಡದ ಗ್ರಾಮಗಳು ಹೆಚ್ಚಿನ ಪ್ರಮಾಣದಲ್ಲಿ ಬಾಧಿತವಾಗುವ ಸಾಧ್ಯತೆಯಿದೆ. ಈ ಬಗ್ಗೆ ಮುಂಜಾಗ್ರತವಾಗಿ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ಇಲ್ಲವೇ ಜಿಲ್ಲಾಡಳಿತ ಸ್ಥಾಪಿಸಲಾದ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಕ್ರಮವಹಿಸಲಾಗುತ್ತಿದೆ ಎಂದರು.
ಪ್ರಸ್ತುತ ಘಟಪ್ರಭಾ ನದಿಗೆ 65567 ಕ್ಯು. ನೀರು ಹರಿದು ಬರುತ್ತಿದೆ. ಇದರಿಂದ ಮುಧೋಳ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ಡವಳೇಶ್ವರ, ಮಿರ್ಜಿ, ಚನ್ನಾಳ, ಉತ್ತೂರು-ಜಾಲಿಬೇರ, ಮುಧೋಳ ಬ್ಯಾರೇಜ, ಇಂಗಳಗಿ, ಜಂಬಗಿ ಕೆಡಿ, ಕಸಬಾ ಜಂಬಗಿ, ತಿಪ್ಪಾಪೂರ ಹಾಗೂ ಮಾಚಕನೂರು ಸೇರಿ ಒಟ್ಟು 11 ಸೇತುವೆಗಳು ಮುಳುಗಡೆಯಾಗಿರುತ್ತವೆ. ಮುಧೋಳ ಯಾದವಾಡ ಸೇತುವೆಗೆ ಭೇಟಿ ನೀಡಿ ನೀರಿನ ಮಟ್ಟ ಪರಿಶೀಲಿಸಲಾಗಿ ಅದು ಕೂಡಾ ಇನ್ನು ಒಂದು ಅಥವಾ ಎರಡು ದಿನಗಳಲ್ಲಿ ಮುಳುಗಡೆಯಾಗುವ ಹಂತದಲ್ಲಿದೆ. ನದಿ ಪಾತ್ರದಲ್ಲಿ ಸಾರ್ವಜನಿಕರು ಬರದಂತೆ ಎಚ್ಚರಿಕೆಯ ಫಲಕಗಳನ್ನು ಹಾಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಭೇಟಿ ಸಮಯದಲ್ಲಿ ಜಿಪಂ ಸಿಇಒ ಶಶಿಧರ ಕುರೇರ, ಮುಧೋಳ ತಹಸೀಲ್ದಾರ್ ಮಹಾದೇವ ಸನಮೂರೆ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.