ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ 28ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ.
ನಗರದಲ್ಲಿ ಬೀಡು ಬಿಟ್ಟಿರುವ ಎಸ್‌ಪಿಜಿ । ಬಿಗಿ ಬಂದೋಬಸ್ತು । ಪ್ರಧಾನಿ ಸ್ವಾಗತಕ್ಕೆ ಸಿದ್ಧತೆ
ಉಡುಪಿ: ಪರ್ಯಾಯ ಪುತ್ತಿಗೆ ಮಠದ ಬೃಹತ್ ಗೀತೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ 28ರಂದು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ನಗರದಲ್ಲಿ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುತ್ತಿದೆ.ಪ್ರಧಾನಿ ಅವರ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ)ಯ ಕಪ್ಪು ಸಮವಸ್ತ್ರ ಧರಿಸಿರುವ ಪೊಲೀಸರು ಈಗಾಗಲೇ ಉಡುಪಿಗೆ ಬಂದು ಬೀಡು ಬಿಟ್ಟಿದ್ದಾರೆ. ಜೊತೆಗೆ ಶಿವಮೊಗ್ಗ, ಮಂಗಳೂರು, ಕಾರವಾರಗಳಿಂದಲೂ ವಿಶೇಷ ಪೊಲೀಸ್ ಪಡೆಗಳನ್ನು ಕರೆಸಲಾಗಿದೆ. ಈ ಪೊಲೀಸರು ಕೃಷ್ಣಮಠ, ರಥಬೀದಿ, ಗೀತಾ ಪಾರಾಯಣ ನಡೆಯುವ ಕಾರ್ಯಕ್ರಮದ ಬೃಹತ್ ಪೆಂಡಾಲ್ ಮತ್ತು ಸುತ್ತಮುತ್ತಲ ಪ್ರದೇಶಗಳ ಮೂಲೆಮೂಲೆಗಳನ್ನು ತೀವ್ರವಾಗಿ ಪರಿಶೀಲನೆ ನಡೆಸುತಿದ್ದಾರೆ.ವಿಶೇಷವಾಗಿ ಬಾಂಬ್ ಸ್ಕ್ವಾಡ್, ಡಾಗ್ ಸ್ಕ್ವಾಡ್ ಗಳನ್ನು ಕರೆಸಲಾಗಿದ್ದು ನಗರದಲ್ಲಿ ಮೋದಿ ಸಂಚರಿಸುವ ಮಾರ್ಗವನ್ನು ಪರಿಶೋಧಿಸಲಾಗುತ್ತದೆ. ಈ ಮಾರ್ಗದಲ್ಲಿ ವಿಶೇಷ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗುತ್ತಿದೆ.ಮೋದಿ ಭಾಗವಹಿಸುವ ಲಕ್ಷ ಕಂಠ ಗೀತ ಪಾರಾಯಣ ಮತ್ತು ಸಭಾ ಕಾರ್ಯಕ್ರಮ ನಡೆಯುವ ಬೃಹತ್ ಪೆಂಡಾಲನ್ನು ಎಸ್‌ಪಿಜಿ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದು, ಪ್ರಧಾನಿ ಸುರಕ್ಷತೆಗೆ ತಕ್ಕಂತೆ ವೇದಿಕೆ, ಪ್ರೇಕ್ಷಕರ ಗ್ಯಾಲರಿ ಇತ್ಯಾದಿಗಳನ್ನು ನಿರ್ದೇಶಿಸುತ್ತಿದ್ದಾರೆ. ಕೃಷ್ಣಮಠದ ಒಳಗೆಯೂ ಮೋದಿ ಅವರ ಸುಗಮ ಓಡಾಟ ಮತ್ತು ಸುರಕ್ಷತೆಯ ಬಗ್ಗೆ ಎಸ್‌ಪಿಜಿ ವಿಶೇಷ ವ್ಯವಸ್ಥೆಗಳನ್ನು ಮಾಡಿದೆ.ರಥಬೀದಿಯಲ್ಲಿರುವ ಅಂಗಡಿ, ಹೊಟೇಲುಗಳನ್ನು ಒಂದು ದಿನ ಮೊದಲೇ ಮುಚ್ಚುವಂತೆ ಎಸ್‌ಪಿಜಿ ಸೂಚನೆ ನೀಡಿದೆ. ಮೋದಿ ರೋಡ್ ಶೋ ನಡೆಸುವ ಬನ್ನಂಜೆ - ಕಲ್ಸಂಕ ಮಾರ್ಗದ ಎಲ್ಲಾ ಅಂಗಡಿ, ಕಚೇರಿಗಳನ್ನು ಅಂದು ತೆರೆಯದಂತೆ ಆದೇಶಿಸಲಾಗಿದೆ. 28ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ತುರ್ತು ಅಗತ್ಯದ ಹೊರತಾಗಿ ಯಾವುದೇ ಬಸ್ಸು, ವಾಹನಗಳು ಮೋದಿ ಸಂಚರಿಸುವ ಮಾರ್ಗಕ್ಕಿಳಿಯದಂತೆ ಜಿಲ್ಲಾಡಳಿತ ಆದೇಶಿಸಿದೆ.