ದಸರಾ ಹಬ್ಬದ ನಿಮಿತ್ತ ಮನೆಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿರುವ ಕೆಲವರು, ದಿನನಿತ್ಯ ಬಳಕೆಯ ಬಟ್ಟೆ ಹಾಗೂ ಹಾಸಿಗೆಗಳನ್ನು ತೊಳೆಯಲು ಕೃಷ್ಣಾ ನದಿ ನೀರನ್ನು ಬಳಸುತ್ತಿರುವುದರಿಂದ ನದಿ ನೀರು ಕಲುಷಿತಗೊಳ್ಳುವ ಆತಂಕ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ದಸರಾ ಹಬ್ಬದ ನಿಮಿತ್ತ ಮನೆಗಳನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿರುವ ಕೆಲವರು, ದಿನನಿತ್ಯ ಬಳಕೆಯ ಬಟ್ಟೆ ಹಾಗೂ ಹಾಸಿಗೆಗಳನ್ನು ತೊಳೆಯಲು ಕೃಷ್ಣಾ ನದಿ ನೀರನ್ನು ಬಳಸುತ್ತಿರುವುದರಿಂದ ನದಿ ನೀರು ಕಲುಷಿತಗೊಳ್ಳುವ ಆತಂಕ ವ್ಯಕ್ತವಾಗಿದೆ.

ರಬಕವಿ ಸಮೀಪದ ಕೃಷ್ಣಾ ನದಿ ತೀರದಲ್ಲಿ ಕೆಲವರು ಬಟ್ಟೆ, ಹಾಸಿಗೆ ತೊಳೆಯುತ್ತಿರುವ ದೃಶ್ಯ ಕಂಡುಬರುತ್ತಿದೆ. ಇದರಿಂದ ನದಿಯ ಸ್ವಚ್ಛತೆ ಮತ್ತು ನೀರಿನ ಗುಣಮಟ್ಟದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಪ್ರಜ್ಞಾವಂತ ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಜನ ಜಾನುವಾರುಗಳ ಅನುಕೂಲಕ್ಕಾಗಿ ಹಿಪ್ಪರಗಿ ಜಲಾಶಯದಲ್ಲಿ ಎಲ್ಲ ಗೇಟ್‌ಗಳನ್ನು ಬಂದ್ ಮಾಡಿ ನೀರು ಸಂಗ್ರಹಿಸಲಾಗಿದೆ. ಹೀಗಾಗಿ ನದಿಯಲ್ಲಿ ಸಂಗ್ರಹವಾಗಿರುವ ನೀರು ಹಲವು ಗ್ರಾಮಗಳ ಜನರು ಹಾಗೂ ಪಟ್ಟಣಗಳ ಕುಡಿಯುವ ನೀರಿನ ಅಗತ್ಯಕ್ಕೆ ಬಳಕೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನದಿ ನೀರಿನಲ್ಲಿ ಬಟ್ಟೆ, ಹಾಸಿಗೆ ತೊಳೆಯುವುದರಿಂದ ಸಾಬೂನು, ಮಾರ್ಜಕಗಳು ಹಾಗೂ ಇತರ ಕಲ್ಮಶಗಳು ನೀರಿಗೆ ಸೇರುವ ಸಾಧ್ಯತೆಯಿದೆ.

ನದಿಯ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸುತ್ತಿರುವುದರಿಂದ ಅದರ ಸ್ವಚ್ಛತೆ ಕಾಪಾಡುವುದು ಅತ್ಯಂತ ಅಗತ್ಯವಿದೆ. ನೀರು ಕಲುಷಿತಗೊಂಡರೆ ಸಾರ್ವಜನಿಕ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಆತಂಕವಿದೆ. ಆದ್ದರಿಂದ ನದಿ ತೀರದಲ್ಲಿ ಇಂತಹ ಚಟುವಟಿಕೆ ನಿಯಂತ್ರಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಅಧಿಕಾರಿಗಳು ಜಾಗೃತಿ ಮೂಡಿಸಲಿ : ಕೃಷ್ಣಾ ನದಿ ನೀರನ್ನು ಕುಡಿಯುವ ನೀರಿನ ಮೂಲವಾಗಿ ಬಳಸುತ್ತಿರುವ ಹಿನ್ನೆಲೆ ಸಂಬಂಧಿಸಿದ ಅಧಿಕಾರಿಗಳು ನದಿ ತೀರದಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ನದಿ ನೀರಿನಲ್ಲಿ ಬಟ್ಟೆ ಹಾಗೂ ಹಾಸಿಗೆ ತೊಳೆಯುವುದರಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಬೇಕು. ನದಿ ನೀರಿನ ಗುಣಮಟ್ಟ ಪರಿಶೀಲಿಸುವುದರ ಜತೆಗೆ, ನೀರಿನ ಮಾಲಿನ್ಯ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಹಬ್ಬದ ಸಂಭ್ರಮದ ನಡುವೆ ಜನರು ಸಾರ್ವಜನಿಕ ಜಲಮೂಲಗಳ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸಬೇಕು. ಕುಡಿಯುವ ನೀರಿನ ಮೂಲವಾದ ಕೃಷ್ಣಾ ನದಿಯನ್ನು ಕಲುಷಿತಗೊಳಿಸದೆ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ.

-ಡಾ.ರವಿ ಜಮಖಂಡಿ. ಸಾಮಾಜಿಕ ಕಾರ್ಯಕರ್ತ. ರಬಕವಿ ಹೊಸೂರ.