ಕೃಷ್ಣೆಯ ಆರ್ಭಟ; ಜನರಿಗೆ ಪ್ರವಾಹ ಸಂಕಟ

| Published : Jul 26 2024, 01:34 AM IST

ಸಾರಾಂಶ

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರದ ಬಸವ ಸಾಗರ ಜಲಾಶಯದಿಂದ 2.50 ಲಕ್ಷ ಕ್ಯುಸೆಕ್ ನೀರನ್ನು ಗುರುವಾರ ಮಧ್ಯಾಹ್ನ ನದಿಗೆ ಬಿಡಲಾಯಿತು

ಅನಿಲ್ ಬಿರಾದಾರ

ಕನ್ನಡಪ್ರಭ ವಾರ್ತೆ ಕೊಡೇಕಲ್

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣದಿಂದಾಗಿ ಕೆಲವೆಡೆ ಪ್ರವಾಹ ಉಂಟಾಗುವ ಸಾಧ್ಯತೆಗಳಿದ್ದು, ಕೃಷ್ಣಾ ನದಿಯು ಅಪಾಯಮಟ್ಟ ಮೀರಿ ಹರಿಯುತ್ತಿದೆ.

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹಾಗೂ ಕೃಷ್ಣಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ, ಆಲಮಟ್ಟಿಯ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯಕ್ಕೆ ಕಳೆದೊಂದು ವಾರದಿಂದ ನಿತ್ಯವೂ ಒಳಹರಿವು ಹೆಚ್ಚಾಗಿ ಹರಿದು ಬರುತ್ತಿರುವುದರಿಂದ, ನಾರಾಯಣಪುರ ಜಲಾಶಯಕ್ಕೆ 2 ಲಕ್ಷಕ್ಕೂ ಅಧಿಕ ನೀರನ್ನು ಬಿಟ್ಟಿದ್ದರಿಂದ ಬಸವಸಾಗರದ 25 ಗೇಟ್‌ಗಳ ಮುಖಾಂತರ 2.50 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದ್ದು, ರಾತ್ರಿ ವೇಳೆ 3 ಲಕ್ಷ ಕ್ಯುಸೆಕ್‌ ನೀರು ಹೊರ ಬಿಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಜಲಾಶಯ ವೀಕ್ಷಿಸಲು ಪ್ರವಾಸಿಗರ ದಂಡು: ಜಲಾಶಯದಿಂದ ನದಿಗೆ ಹರಿಬಿಡುತ್ತಿರುವ ರುದ್ರರಮಣೀಯ ದೃಶ್ಯ ವೀಕ್ಷಿಸಲು ನಾರಾಯಣಪುರ ಜಲಾಶಯಕ್ಕೆ ಸುತ್ತಮುತ್ತಲಿನ ಗ್ರಾಮದ ಜನತೆ ಕುಟುಂಬದೊಡನೆ ಹಾಗೂ ಯುವ ಸಮೂಹವು ತಮ್ಮ ನೆಚ್ಚಿನ ಸ್ನೇಹಿತರೊಂದಿಗೆ ಆಗಮಿಸಿ ಕ್ಯಾಮರಾ ಕಣ್ಣುಗಳಲ್ಲಿ ಸುಂದರ ಕ್ಷಣಗಳನ್ನು ಸೆರೆ ಹಿಡಿಯುತ್ತಿದ್ದಾರೆ.

ವೀಕ್ಷಣಾ ಗ್ಯಾಲರಿಗೆ ತಡೆಗೋಡೆ ನಿರ್ಮಿಸಲು ಆಗ್ರಹ: ಕೊಡೇಕಲ್‌: ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಸದ್ಯ ಜಲಾನಯನ ಪ್ರದೇಶ ಹಚ್ಚ ಹಸಿರಿನಿಂದ ಕೂಡಿದ್ದು, ಯುವಕರು, ವೃದ್ಧರೆನ್ನೆದೆ ನಿಸರ್ಗ ಸೌಂದರ್ಯವನ್ನು ಸವಿಯಲು ಆಗಮಿಸುತ್ತಿದ್ದಾರೆ.

ಆದರೆ, ಅರಣ್ಯ ಪ್ರದೇಶದಲ್ಲಿ ಬರುವ ಛಾಯಾ ಭಗವತಿ ಸಮೀಪದ ಚಕ್ರಕಟ್ಟೆ ಹತ್ತಿರವಿರುವ ವೀಕ್ಷಣಾ ಗ್ಯಾಲರಿಯ ತಡೆಗೋಡೆಗೆ ಅಳವಡಿಸಿದ್ದ ಗ್ರೀಲ್ ಕಳಚಿ ಬಿದ್ದಿದ್ದು, ಅವುಗಳ ನಿರ್ವಹಣೆ ಇಲ್ಲದ ಕಾರಣ ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಯುವಕರು ಹಾಗೂ ಯುವತಿಯರು ಸೆಲ್ಪಿ ಹಾಗೂ ರೀಲ್ಸ್ ಗಳ ಮೊರೆಯೋಗಿ ತಡೆಗೋಡೆ ಇಲ್ಲದ ಕಾರಣ ನದಿಯ ಕಣಿವೆಗಳಲ್ಲಿ ಪೋಟೋ ತೆಗೆದುಕೊಳ್ಳಲು ಗ್ಯಾಲರಿಯನ್ನು ದಾಟಿ ನದಿಯ ದಡಗಳಿಗೆ ತೆರಳುತ್ತಿದ್ದಾರೆ. ಪ್ರಾಣಾಪಾಯವಾಗುವ ಸಾಧ್ಯತೆಗಳಿದ್ದು, ತಡೆಗೋಡೆ ನಿರ್ಮಾಣ ಹಾಗೂ ಭದ್ರತಾ ವ್ಯವಸ್ಥೆಗೆ ಜನರು ಆಗ್ರಹಿಸಿದ್ದಾರೆ. ಬಸವ ಸಾಗರ : 26.77 ಟಿಎಂಸಿ ನೀರು ಸಂಗ್ರಹ: 492.252 ಮೀ.ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 491.73 ಮೀ. ತಲುಪಿದ್ದು 26.77 ಟಿಎಂಸಿ ನೀರಿನ ಸಂಗ್ರಹವಿದೆ. ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಜಲಾಶಯದ ಹೆಚ್ಚುವರಿ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ.