ಕೃಷ್ಣಾ ಮೇಲ್ದಂಡೆ ಯೋಜನೆ 60 ವರ್ಷವಾದರೂ ಜಾರಿಗೊಂಡಿಲ್ಲ ಎಂದು ಯಾರನ್ನೂ ವಿರೋಧಿಸುವ ಮೊದಲು ರೈತರು ಜಾಗೃತರಾಗಬೇಕು. ರೈತರು ಜಾಗೃತರಾಗಿ ಪ್ರಯತ್ನ ಮಾಡಿದರೆ ಯೋಜನೆ ಜಾರಿಯಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಯಾದರೆ ಅಖಂಡ ವಿಜಯಪುರ ಜಿಲ್ಲೆಯ 57.70 ಪ್ರತಿಶತ ನೀರಾವರಿ ಆಗುತ್ತದೆ. ಈಗ 15 ಪ್ರತಿಶತ ಮಾತ್ರ ನೀರಾವರಿಗೊಳಪಟ್ಟಿದೆ ಎಂದು ಹಿರಿಯ ಸಂಶೋಧಕ ನೀರಾವರಿ ತಜ್ಞ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕೃಷ್ಣಾ ಮೇಲ್ದಂಡೆ ಯೋಜನೆ 60 ವರ್ಷವಾದರೂ ಜಾರಿಗೊಂಡಿಲ್ಲ ಎಂದು ಯಾರನ್ನೂ ವಿರೋಧಿಸುವ ಮೊದಲು ರೈತರು ಜಾಗೃತರಾಗಬೇಕು. ರೈತರು ಜಾಗೃತರಾಗಿ ಪ್ರಯತ್ನ ಮಾಡಿದರೆ ಯೋಜನೆ ಜಾರಿಯಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿಯಾದರೆ ಅಖಂಡ ವಿಜಯಪುರ ಜಿಲ್ಲೆಯ 57.70 ಪ್ರತಿಶತ ನೀರಾವರಿ ಆಗುತ್ತದೆ. ಈಗ 15 ಪ್ರತಿಶತ ಮಾತ್ರ ನೀರಾವರಿಗೊಳಪಟ್ಟಿದೆ ಎಂದು ಹಿರಿಯ ಸಂಶೋಧಕ ನೀರಾವರಿ ತಜ್ಞ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕೃಷ್ಣಾ ನ್ಯಾಯಧಿಕರಣ ತೀರ್ಪಿನ ಕುರಿತು ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಯ ರೈತಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ವಿಚಾರ ಸಂಕಿರಣದಲ್ಲಿ ವಿಷಯ ಮಂಡಿಸಿ ಮಾತನಾಡಿದ ಅವರು, ಯಾವುದೇ ಒಂದು ಯೋಜನೆ ಐದು ವರ್ಷದ ಸೀಮಿತ ಅವಧಿಯಲ್ಲಿ ಜಾರಿಯಾಗಬೇಕೆಂಬ ನಿಯಮವಿದೆ. ಆದರೆ ಆಲಮಟ್ಟಿ ಡ್ಯಾಮ್ ವಿಷಯದಲ್ಲಿ ಅದು ತದ್ವಿರುದ್ಧವಾಗಿದೆ. ಯೋಜನೆ ಜಾರಿಯಾಗಿ ಈಗಾಗಲೇ ಅದು ಫಲ ನೀಡಬೇಕಾಗಿತ್ತು, ಆದರೆ ಸರಕಾರ ಯೋಜನೆ ಜಾರಿಗೊಳಿಸಲು ಭೂಮಿ ಸ್ವಾಧೀನಪಡಿಸಿಕೊಳ್ಳುವ ಕಾರ್ಯ ಇನ್ನೂ ಪ್ರಾರಂಭ ಮಾಡಿಲ್ಲ. ಇದು ಸರಕಾರದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಬ್ರಿಜೇಶಕುಮಾರ ತೀರ್ಪಿನಂತೆ ಅಖಂಡ ವಿಜಯಪುರ ಜಿಲ್ಲೆಗೆ 80 ಟಿಎಂಸಿ ನೀರು ಬಳಸಿಕೊಳ್ಳಲು ಅವಕಾಶ ಇದೆ. ಇದರಿಂದ ಸುಮಾರು 7 ಲಕ್ಷ ಹೆಕ್ಟೇರ್ ಜಮೀನು ನೀರಾವರಿಯಾಗುತ್ತದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸದೇ ಇರುವುದರಿಂದ ನೀರು ಆಂಧ್ರಪ್ರದೇಶಕ್ಕೆ ಹರಿದು ಹೋಗುತ್ತಿದೆ. ಅದನ್ನು ನಮ್ಮ ರೈತರಿಗೆ ಒದಗಿಸಲು ಸರಕಾರಗಳು ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಹಿರಿಯ ನೀರಾವರಿ ತಜ್ಞ ಡಾ.ರಾಜೇಂದ್ರ ಪೋದ್ದಾರ ಮಾತನಾಡಿ, ವಿಜಯಪುರ ಜಿಲ್ಲೆಯ ಜನ ಬರಗಾಲದಲ್ಲಿ ಹುಟ್ಟಿ ಬರಗಾಲದಲ್ಲಿ ಸಾಯುವಂತಹ ಪರಿಸ್ಥಿತಿ ಇಂದಿಗೂ ತಪ್ಪಿಲ್ಲ, ನಮ್ಮ ಜಿಲ್ಲೆಯ ಜನರ ನೀರಾವರಿ ಕನಸು ಇನ್ನೂ ಈಡೇರಿಲ್ಲ. ಭೌಗೋಳಿಕವಾಗಿ, ಪ್ರಾದೇಶಿಕವಾಗಿ ನಮ್ಮ ಮನಸ್ಸುಗಳು ಒಡೆದಿವೆ. ನೀರು ಪ್ರಕೃತಿದತ್ತ ಕೊಡುಗೆ, ಅಂತರರಾಜ್ಯ ಜಲವಿವಾದದಿಂದ ನೀರಿನ ಸಮಸ್ಯೆ ಉಂಟಾಗಿದೆ. ಪ್ರತಿಯೊಬ್ಬ ರೈತರು ಕೂಡ ವಿಜ್ಞಾನಿಗಳಾಗಿದ್ದಾರೆ. ಅವರು ನೀರಾವರಿ ವಿಷಯದ ಬಗ್ಗೆ ಮಾತನಾಡುವುದನ್ನು ರೂಢಿಸಿಕೊಂಡರೆ ರೈತರ ಧ್ವನಿ ವಿಧಾನಸೌಧದಲ್ಲಿ ಪ್ರತಿಧ್ವನಿಸಿದರೆ ಮಾತ್ರ ನಮ್ಮ ಪಾಲಿನ ನೀರು ಪಡೆಯಲು ಸಾಧ್ಯ ಎಂದರು.ಹಿರಿಯ ನೀರಾವರಿ ಹೋರಾಟಗಾರ ಪಂಚಪ್ಪ ಕಲ್ಬುರ್ಗಿ ಮಾತನಾಡಿ, ಸುಪ್ರೀಂ ಕೋರ್ಟ್‌ನಲ್ಲಿ ಆಂದ್ರ ಪ್ರದೇಶ ರಾಜ್ಯವು ತಗೆದಿರುವ ಖ್ಯಾತೆಯನ್ನು ಮೊದಲು ಕಾನೂನಾತ್ಮಕವಾಗಿ ಕರ್ನಾಟಕ ಪ್ರತಿನಿಧಿಸುವ ನ್ಯಾಯಾಧೀಶರ ತಂಡವು ಬಗೆಹರಿಸಬೇಕು. ಜೊತೆಗೆ ಕೇಂದ್ರ ಸರ್ಕಾರ ನೀರಿನ ಹಂಚಿಕೆ ವಿಷಯದಲ್ಲಿ ಅಧಿಸೂಚನೆ ಹೊರಡಿಸುವ ಮೂಲಕ ನ್ಯಾಯ ಒದಗಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ ಅವರು, ಆಲಮಟ್ಟಿ ನೀರಿನ ಮಟ್ಟವನ್ನು 524.256ಮೀಗೆ ಏರಿಸಿದಾಗ ಮುಳಗಡೆಯಾಗುವ ವಿಜಯಪುರ- ಬಾಗಲಕೋಟೆ ಅವಳಿ ಜಿಲ್ಲೆಯ 22 ಗ್ರಾಮಗಳ ಬಾಧಿತ ಕುಟುಂಬಗಳಿಗೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಬೇಕೆಂದರು.
ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಸಿ. ಬಿರಾದಾರ ಮಾತನಾಡಿ, ನ್ಯಾ.ಬ್ರಿಜೇಷಕುಮಾರ ನೃತೃತ್ವದ 2ನೇ ನ್ಯಾಯಾಧೀಕರಣ ಈಗಾಗಲೇ ಸ್ಪಷ್ಟ ತೀರ್ಪು ನೀಡಿದೆ. ನೀರಿನ ಮಟ್ಟವನ್ನು 524.256ಕ್ಕೆ ಏರಿಸಲು ಯಾವುದೇ ಕಾನೂನು ತೊಡುಕುಗಳಿಲ್ಲ. ಕೇಂದ್ರ ಸರ್ಕಾರ ನ್ಯಾಯಾಧೀಕರಣದ ತೀರ್ಪಿನಂತೆ ಅಧಿಸೂಚನೆ ಹೊರಡಿಸಲು ಮುಂದಾಗಬೇಕು. ಅದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ರಾಜ್ಯ ಸರ್ಕಾರ ಯೋಜನೆ ಜಾರಿಗೊಳಿಸಲು ಬಾಧಿತ ಪ್ರದೇಶದಲ್ಲಿ ಕೈಗೊಳ್ಳಬೇಕಾದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾರ್ಯಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.ಚಾಣಕ್ಯ ಕರಿಯರ್ ಅಕಾಡೆಮಿ ಅಧ್ಯಕ್ಷ ನಿಂಗನಗೌಡ ಬಿರಾದಾರ ಮಾತನಾಡಿ, ವಿಜಯಪುರ ಜಿಲ್ಲೆಯೂ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ಮಾಡಿದಾಗ ಮುಖ್ಯವಾಗಿ ನೀರಾವರಿ ಸಮಸ್ಯೆಯಿಂದ ಜಿಲ್ಲೆಯೂ ಬಳಲುತ್ತಿದೆ. ಅವಳಿ ಜಿಲ್ಲೆಯೂ ಅಭಿವೃದ್ಧಿಯಾಗಬೇಕಾದರೆ ಆಲಮಟ್ಟಿ ನೀರಿನ ಮಟ್ಟವನ್ನು ನ್ಯಾಯಾಧೀಕರಣದ ತೀರ್ಪಿನಂತೆ ಎತ್ತರಿಸಬೇಕಾಗಿದ್ದು, ಇಂದಿನ ಅಗತ್ಯವಾಗಿದೆ ಎಂದರು.
ವಿಚಾರ ಸಂಕಿರಣದ ಸಾನ್ನಿಧ್ಯ ವಹಿಸಿ ಹುಣಶ್ಯಾಳ.ಪಿ.ಬಿ ಗ್ರಾಮದ ಸಂಗನಬಸವ ಸ್ವಾಮೀಜಿ ಆರ್ಶೀವಚನ ನೀಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತ ಮುಖಂಡ ಗುರುರಾಜ ಪಡಶೆಟ್ಟಿ ನಿರೂಪಿಸಿದರು. ರೈತ ಮುಖಂಡ ಬಸವರಾಜ ಸಿದ್ದಾಪುರ ವಂದಿಸಿದರು. ವಿಚಾರ ಸಂಕಿರಣದಲ್ಲಿ ಎಲ್ಲ ಪಕ್ಷದ ಜಿಲ್ಲಾಧ್ಯಕ್ಷರು ಸೇರಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.