ಸಾರಾಂಶ
ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಶ್ರೀ, ಆನಂದಬೋಧೇಂದ್ರ ಸರಸ್ವತೀ ಶ್ರೀ ಸಾನ್ನಿಧ್ಯದಲ್ಲಿ ಮಹಾಸಂಕಲ್ಪ ಕೈಗೊಳ್ಳಲಾಯಿತು.
ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡ ಒಂಬತ್ತು ದಿನಗಳ ಮೂರನೇ ವರ್ಷದ ಕೃಷ್ಣಯಜುರ್ವೇದಘನ ಪಾರಾಯಣ ಸತ್ರ- ೩ ಸ್ವರ್ಣವಲ್ಲೀ ಮಠದಲ್ಲಿ ಗುರುವಾರದಿಂದ ಆರಂಭಗೊಂಡಿದೆ.
ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಶ್ರೀ, ಆನಂದಬೋಧೇಂದ್ರ ಸರಸ್ವತೀ ಶ್ರೀ ಸಾನ್ನಿಧ್ಯದಲ್ಲಿ ಮಹಾಸಂಕಲ್ಪ ಕೈಗೊಳ್ಳಲಾಯಿತು. ಮಠದ ಶಿಷ್ಯ ಭಕ್ತ ಜನರಿಗೆ ಸಕಲ ಕ್ಷೇಮವು, ಸಕಾಲದಲ್ಲಿ ಮಳೆ ಆಗಲಿ, ಧನ-ಧಾನ್ಯ ಸಮೃದ್ಧಿಯಾಗಲಿ, ವಿವಿಧ ವಿಕೃತಿಗಳು ನಿವಾರಣೆಯಾಗಿ ಸಂಸ್ಕೃತಿಯ ಪುನರುತ್ಥಾನವಾಗಲಿ, ಲೋಕವು ಧರ್ಮ ಮಾರ್ಗದಲ್ಲಿ ಸಾಗುವಂತಾಗಲಿ ಎಂದು ಈ ಪಾರಾಯಣ ಸತ್ರ ಸಂಕಲ್ಪಿಸಲಾಯಿತು.ನಾಡಿನ ಶ್ರೇಷ್ಠ ವಿದ್ವಾಂಸರ ಕೂಡುವಿಕೆಯಲ್ಲಿ ನವ ದಿನಗಳ ಕಾಲ ಪಾರಾಯಣ ನಡೆಯಲಿದೆ. ವೇದವಿದ್ವಾಂಸರಾದ ಕೊಯಂಬತ್ತೂರಿನ ಘನಪಾಠಿಗಳಾದ ಆಹಿತಾಗ್ನಿ ಜಂಬೂನಾಥ, ಯಲ್ಲಾಪುರದ ಗೋಪಾಲಕೃಷ್ಣ ಘನಪಾಠಿ, ತಮಿಳುನಾಡಿನ ಭುವನಸುಂದರ ಘನಪಾಠಿ, ರಾಧಾಕೃಷ್ಣ ಘನಪಾಠಿ, ಮತ್ತಿಫಟ್ಟ, ಗೋಕರ್ಣದ ನಾಗರಾಜ ಗಾಯತ್ರಿ ಘನಪಾಠಿ, ಶಿವಮೊಗ್ಗದ ದತ್ತಾತ್ರೇಯ ಘನಪಾಠಿ, ಶೃಂಗೇರಿಯ ರಾಮಚಂದ್ರ ಘನಪಾಠಿ, ನಿರಂಜನ ಘನಪಾಠಿ ಬೆಣ್ಣೆಗದ್ದೆ, ಶಶಿಭೂಷಣ ಶರ್ಮಾ, ಶ್ರೀವತ್ಸ, ಶ್ರೀನಿವಾಸ ವಿದ್ವಾಂಸರು ಭಾವಹಿಸಿದ್ದಾರೆ.
ಪಾರಾಯಣ ವೇಳೆ ಭಕ್ತರು ಬಂದು ಕುಳಿತು ಶ್ರವಣ ಮಾತ್ರದಿಂದಲೇ ಅನೇಕ ಪಾಪಗಳು ನಾಶವಾಗುತ್ತವೆ. ಅಂತಹ ಅತೀ ವಿರಳವಾದ ಈ ಕಾರ್ಯಕ್ರಮದಲ್ಲಿ ಭಕ್ತ ಜನರು ಪಾಲ್ಗೊಂಡು ವೇದಪುರುಷನ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀಮಠದ ಪ್ರಕಟಣೆ ತಿಳಿಸಿದೆ.