ಸಾರಾಂಶ
ಪುತ್ತೂರು: ಕೃಷ್ಣನೆಂದರೆ ಕೌತುಕ, ರಹಸ್ಯ. ಕೃಷ್ಣನ ಬದುಕಿನ ವಿಸ್ತಾರ ಆಳವಾದುದು. ಮನುಷ್ಯ ಮಾಧವನಾಗಬಲ್ಲ ಎನ್ನುವ ಕಲ್ಪನೆಯನ್ನು ಮಕ್ಕಳಲ್ಲಿ ಮೂಡಿಸುವ ದೃಷ್ಟಿಯಿಂದ ಕೃಷ್ಣಲೋಕ ಮಹತ್ವವೆನಿಸುತ್ತದೆ ಎಂದು ವಿವೇಕಾನಂದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಹೇಳಿದರು.ಅವರು ನಗರದ ಪರ್ಲಡ್ಕ ಶಿವಪೇಟೆಯಲ್ಲಿರುವ ವಿವೇಕಾನಂದ ಶಿಶುಮಂದಿರದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಆಶ್ರಯದಲ್ಲಿ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ದೇವಾಲಯದ ಎದುರು ಭಾಗದಲ್ಲಿ ನಡೆದ 27ನೇ ವರ್ಷದ `ಶ್ರೀಕೃಷ್ಣ ಲೋಕ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಭಾರತೀಯ ಸಂಸ್ಕೃತಿ, ಆಚರಣೆಗಳೇ ವಿಶೇಷ ಹಾಗೂ ಶಾಶ್ವತ. ಶ್ರೀಕೃಷ್ಣನು ಯಾರಿಗೆ ಹೇಗೆ ಕಾಣಬೇಕೋ ಹಾಗೆ ಕಾಣುವವನು. ಸಿಕ್ಕಿದ ಬದುಕನ್ನು ಅಪ್ಪಿಕೊಂಡವನು. ಮಕ್ಕಳ ಬದುಕು ಭಗವಂತತ್ವಕ್ಕೆ ಸೇರುವಂತೆ ಬದುಕು ಕಟ್ಟಿಕೊಡುವ ಕೆಲಸ ಪೋಷಕರು, ಹಿರಿಯರಿಂದ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ, ಭಗವದ್ಗೀತೆ ಅರಿತರೆ ನಾವೂ ಕೃಷ್ಣನಾಗಬಹುದು. ಧರ್ಮದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಪೋಷಕರು ಮಾಡಬೇಕು. ಕೃಷ್ಣನ ಜತೆಗೆ ಗೋವಿನ ಮಹತ್ವವೂ ಜಗತ್ತಿಗೇ ಪಸರಿಸಿದೆ. ಗೋವನ್ನು ನಾವು ಸಾಕುವುದಲ್ಲ, ಗೋವು ನಮ್ಮನ್ನು ಸಾಕುವುದು. ವಿಷವನ್ನೂ ಅಮೃತವಾಗಿ ಪರಿವರ್ತಿಸುವ ಶಕ್ತಿ ಹೊಂದಿರುವ ಗೋವನ್ನು ಉಳಿಸುವ ಕೆಲಸ ಮಾಡಿದರೆ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಗೂ ಅರ್ಥ ಬರುತ್ತದೆ ಎಂದರು.ಈ ಸಂದರ್ಭದಲ್ಲಿ 27 ನೇ ವರ್ಷದ ಶ್ರೀಕೃಷ್ಣ ಲೋಕ ಕಾರ್ಯಕ್ರಮದ ಅಂಗವಾಗಿ ಏರ್ಪಡಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಎಲ್ಲಾ ಕೃಷ್ಣ, ರಾಧೆ ವೇಷಧಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಅಗಲ್ಪಾಡಿಯ ಎಸ್.ಎ.ಪಿ.ಎಚ್.ಎಸ್. ನ ಅಧ್ಯಾಪಕ ಹರಿನಾರಾಯಣ ಶಿರಂತಡ್ಕ ಅವರು ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಗೌರವಾಧ್ಯಕ್ಷೆ ರಾಜೀ ಬಲರಾಮ್, ಉಪಾಧ್ಯಕ್ಷೆ ಮಾಲಿನಿ ಕಶ್ಯಪ್, ಪ್ರಧಾನ ಕಾರ್ಯದರ್ಶಿ ಕಿರಣ್ ಶಂಕರ್ ಮಲ್ಯ, ಜತೆ ಕಾರ್ಯದರ್ಶಿ ಅಮಿತ್, ಕೋಶಾಧಿಕಾರಿ ಬೃಜೇಶ್, ವಿವೇಕಾನಂದ ಶಿಶು ಮಂದಿರದ ಅಧ್ಯಕ್ಷ ರಾಜಗೋಪಾಲ್ ಭಟ್, ಸಂಚಾಲಕ ಅಕ್ಷಯ ಕುಮಾರ್, ಕೋಶಾಧಿಕಾರಿ ಚಂದ್ರಪ್ರಭಾ ಸತೀಶ್ ಉಪಸ್ಥಿತರಿದ್ದರು.ಸಾರ್ವಜನಿಕ ಶ್ರೀಕೃಷ್ಣ ಲೋಕ ಸಮಿತಿ ಅಧ್ಯಕ್ಷ ಮೋಹನ್ ಕೆ. ಸ್ವಾಗತಿಸಿದರು. ಶಿಕ್ಷಕ ಚಂದ್ರಶೇಖರ್ ಸುಳ್ಯಪದವು ಕಾರ್ಯಕ್ರಮ ನಿರ್ವಹಿಸಿದರು.