ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಾಲ್ವಡಿ ಕೃಷ್ಣರಾಜ ಒಡೆಯರ್ ಭಾರತದಲ್ಲಿ ಪ್ರಥಮ ಬಾರಿಗೆ ಮೀಸಲಾತಿ ಜಾರಿಗೆ ತಂದದ್ದು ಅವರ ಸಾಮಾಜಿಕ ನ್ಯಾಯದ ಬಗ್ಗೆ ಅವರಿಗಿದ್ದ ಬದ್ಧತೆಯ ಪ್ರತೀಕವೆಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಪಿ ತಿಪ್ಪೇಸ್ವಾಮಿ ಹೇಳಿದರು.ಕೋಟೆ ನಾಡು ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ತಮ್ಮ ಸಂಸ್ಥಾನದಲ್ಲಿ ಕೋಲಾರ,ಬೆಂಗಳೂರು, ಹಾಸನ ಸೇರಿದಂತೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಅಸ್ಪೃಶ್ಯರ ಮಕ್ಕಳಿಗೆ ವಸತಿ ಶಾಲೆಗಳನ್ನು ತೆರೆದ ನಾಲ್ವಡಿ ಕೃಷ್ಣರಾಜ ಒಡೆಯರ್ ಉಚಿತ ಊಟ, ವಸತಿ ಶಿಕ್ಷಣ ನೀಡುವಂತೆ ಮಾಡಿದರು. ಇದರ ಉಸ್ತುವಾರಿಯನ್ನು ನೋಡಿಕೊಳ್ಳಲು ವಿಶೇಷ ಅಧಿಕಾರಿಯಾಗಿ ಬ್ರಾಹ್ಮಣ ಸಮುದಾಯದ ಗೋಪಾಲಸ್ವಾಮಿ ಅಯ್ಯರ್ ಇವರನ್ನು ನೇಮಿಸಿದರೆಂದರು.
ಗೋಪಾಲಸ್ವಾಮಿ ಅಯ್ಯರ್ ಅವರು ಹಳ್ಳಿ ಹಳ್ಳಿಗಳಿಗೆ ಸೈಕಲ್ ನಲ್ಲಿ ತೆರಳಿ ಅಸ್ಪೃಶ್ಯ ಮಕ್ಕಳನ್ನು ಕರೆತಂದು ಶಿಕ್ಷಣ ಕೊಡಿಸಿದ್ದರಿಂದಾಗಿ ಅವರಿಗೆ ಅಸ್ಪೃಶ್ಯರ ಬಂದು ಎಂದು ಅಯ್ಯರ್ ಖ್ಯಾತರಾಗಿದ್ದರು.ಇದರಿಂದಾಗಿ ಮೈಸೂರು ಪ್ರಾಂತ್ಯದ ದಲಿತ ಅಸ್ಪೃಶ್ಯರು ವಿದ್ಯೆ ಮತ್ತು ಉದ್ಯೋಗ ಪಡೆಯುವಲ್ಲಿ ಯಶಸ್ವಿಯಾಗಿ ಸಮಾಜದಲ್ಲಿ ಮುಂಚೂಣಿಗೆ ಬರಲು ಸಾಧ್ಯವಾಯಿತು. ಆದರೆ ಉತ್ತರ ಕರ್ನಾಟಕದ ಭಾಗದಲ್ಲಿ ಆಳ್ವಿಕೆ ಮಾಡುತ್ತಿದ್ದ ಬಹುಮನಿ ಮತ್ತು ಇತರೆ ಸಂಸ್ಥಾನದ ರಾಜರುಗಳಿಗೆ ಈ ದೂರ ದೃಷ್ಟಿಯ ಕೊರತೆಯಿಂದಾಗಿ ಅಸ್ಪೃಶ್ಯ ಸಮುದಾಯಕ್ಕೆ ವಿದ್ಯೆ ಹಾಗೂ ಉದ್ಯೋಗ ಸಿಗದೇ ಇದ್ದಿದ್ದರಿಂದಾಗಿ ಶೈಕ್ಷಣಿಕವಾಗಿ ಹಿಂದುಳಿಯುವ ವಾತಾವರಣ ನಿರ್ಮಾಣವಾಯಿತು ಎಂದರು.ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚಾಗಿರುವ ಅಸ್ಪೃಶ್ಯ ಮಾದಿಗ ಸಮುದಾಯ ವಿದ್ಯೆ ಮತ್ತು ಉದ್ಯೋಗ ಪಡೆಯುವಲ್ಲಿ ಹಿಂದುಳಿದಿದ್ದು ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ನಿರಂತರ ಹೋರಾಟ ಮಾಡುತ್ತಿದೆ. ಒಳ ಮೀಸಲಾತಿ ಹಂಚುವ ವಿಚಾರದಲ್ಲಿ ಎಲ್ಲ ರಾಜಕೀಯ ಪಕ್ಷಗಳು ನಾಟಕವಾಡಿ ಅಸ್ಪೃಶ್ಯರಲ್ಲಿ ಸಂಘರ್ಷವನ್ನು ನಿರಂತರವಾಗಿ ಇಟ್ಟಿರುವುದನ್ನು ನೋಡಬಹುದು. ಪ್ರಸ್ತುತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ಮಂತ್ರಿಮಂಡಲದಲ್ಲಿಯೂ ಅಸ್ಪೃಶ್ಯ ಸಮುದಾಯಗಳಿಗೆ ನೀಡಿರುವ ಮಂತ್ರಿ ಗಳ ಸ್ಥಾನ -ಖಾತೆಗಳ ಹಂಚುವಿಕೆಯಲ್ಲಿನ ತಾರತಮ್ಯ ನೋಡಿದರೆ ರಾಜಕೀಯದಾಟ ಸಾಮಾನ್ಯರಿಗೂ ತಿಳಿಯುತ್ತದೆ ಎಂದರು.
ಕೆಲವು ಸಮುದಾಯಕ್ಕೆ ಪ್ರಮುಖವಾದ ಖಾತೆಗಳನ್ನು ನೀಡಿ ಇನ್ನೂ ಕೆಲವು ಅಸ್ಪೃಶ್ಯ ಸಮುದಾಯಕ್ಕೆ ಕೆಲಸಕ್ಕೆ ಬಾರದ ಖಾತೆಗಳನ್ನು ನೀಡುತ್ತಿರುವುದರ ಪರಿಣಾಮ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಎದುರಿಸಬೇಕಾಗುತ್ತದೆ. ಕೈಯಲ್ಲಿ ಸಂವಿಧಾನದ ಪುಸ್ತಕ ಹಿಡಿದರೆ ಸಾಲದು ಅಧಿಕಾರ ಹಂಚಿಕೆಯಲ್ಲಿಯೂ ಸಮಾನತೆ ತರುವುದು ಅವಶ್ಯಕ ಎಂದರು. ಸರ್ವ ಜನರ ಕಲ್ಯಾಣ ಬಯಸಿದ್ದರಿಂದಲೇ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರಾಜ ಋಷಿ ಎಂಬ ಬಿರುದು ಪಡೆದರು ಎಂದು ತಿಪ್ಪೇಸ್ವಾಮಿ ಹೇಳಿದರು.
ಉಪನ್ಯಾಸಕ ನಾಗೇಂದ್ರಪ್ಪ, ಹಿರಿಯ ಉಪಾಸಕಿ ಲಕ್ಷ್ಮೀದೇವಿ , ಉಪಾಸಕ ತಿಪ್ಪೆ ರುದ್ರಪ್ಪ, ಶಿಕ್ಷಕಿ ಉಷಾ, ಬೆಸ್ಕಾಂ ತಿಪ್ಪೇಸ್ವಾಮಿ, ಬಿ ಎಂ.ತಿಪ್ಪೇಸ್ವಾಮಿ, ತಿಪಟೂರು ಮಂಜು, ಮ್ಯಾಕಲೂರಹಳ್ಳಿ ರಂಗಪ್ಪ, ಶಾಂತಕುಮಾರ್, ಶಾಂತಮ್ಮ, ಸಚಿನ್, ಗೌತಮ್, ಲಾವಣ್ಯ ಮುಂತಾದವರು ಭಾಗವಹಿಸಿದ್ದರು.