ಸಾರಾಂಶ
ಶಿವಮೊಗ್ಗ: ಅಂದಿನ ಮೈಸೂರು ಸಂಸ್ಥಾನವನ್ನು ಜನಪರ ಸಂಸ್ಥಾನವಾಗಿ ಕಟ್ಟಿ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅಂದೇ ಗಟ್ಟಿಗೊಳಿಸಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಶಾಸಕ ಹಾಗೂ ಚಿಂತಕ ವೈ.ಎಸ್.ವಿ.ದತ್ತ ಹೇಳಿದರು.
ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನ ಸಭಾಂಗಣದಲ್ಲಿ ಸಹ್ಯಾದ್ರಿ ಕಲಾ ಕಾಲೇಜು ಇತಿಹಾಸ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಸಹಯೋಗದಲ್ಲಿ ಗುರುವಾರ ಕಾಲೇಜಿನ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿದರು.ನಾಲ್ವಡಿ ಕೃಷ್ಣರಾಜ ಒಡೆಯರು ರಾಜರಾಗಿದ್ದರು. ಅರಮನೆಯಲ್ಲಿದ್ದರೂ ಜನಸಾಮಾನ್ಯರಿಗಾಗಿಯೇ ಜೀವಿಸಿದವರು. ಪ್ರಜಾಪ್ರಭುತ್ವದ ಎಲ್ಲಾ ನಿಲುವುಗಳನ್ನು ಮೈಗೂಡಿಸಿಕೊಂಡಿದ್ದರು. ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿ ಅರಮನೆಯನ್ನೇ ಜನರ ಮನೆಯನ್ನಾಗಿ ಮಾಡಿದವರು. ಜನಪ್ರತಿನಿಧಿ ಸಭೆಗಳನ್ನು ಅಂದೇ ಮಾಡಿದ್ದರು. ಕಂದಾಯ ವ್ಯವಸ್ಥೆಯನ್ನು ಜಾರಿಗೆ ತಂದವರು. ರಾಜ್ಯಾಂಗ-ಕಾರ್ಯಾಂಗದ ಕಲ್ಪನೆ ಮೂಡಿಸಿದವರು ಎಂದು ತಿಳಿಸಿದರು.
ಅವರ ಕಾಲದಲ್ಲಿಯೇ ಕನ್ನಂಬಾಡಿ ಅಣೆಕಟ್ಟು ಕಟ್ಟಲಾಗಿತ್ತು. ಶ್ರೇಷ್ಠ ವಿಜ್ಞಾನಿ ವಿಶ್ವೇಶ್ವರಯ್ಯನವರ ಸಲಹೆ ಮೇರೆಗೆ ಜನರ ಅನುಕೂಲಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಅಂದಿನ ಕಾಲದಲ್ಲಿ 2 ಕೋಟಿ ರು. ಹಣ ಬೇಕಾಗಿತ್ತು. ಸಂಸ್ಥಾನದಲ್ಲಿ ಹಣಕಾಸಿನ ಕೊರತೆಯಿತ್ತು. ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅರಮನೆಯಲ್ಲಿದ್ದ ಎಲ್ಲಾ ಬಂಗಾರವನ್ನು ಮೂಟೆಯಲ್ಲಿ ತುಂಬಿ ಅದನ್ನು ಅಡವಿಟ್ಟು ಅಣೆಕಟ್ಟು ಕಟ್ಟಿದರು. ಇದು ಇಂದು ಜನಪರ ಅಣೆಕಟ್ಟು ಆಗಿರುವುದನ್ನು ಕಾಣಬಹುದಾಗಿದೆ ಎಂದು ಹೇಳಿದರು.ಭದ್ರಾವತಿಯ ಕಬ್ಬಿಣ ಕಾರ್ಖಾನೆ ಸ್ಥಾಪನೆಗೆ ಕಾರಣರಾದ ಇವರು, ಮಹಾಯುದ್ಧದ ಕಾಲದಲ್ಲಿ ಕಲ್ಲಿದ್ದಲು ಸರಬರಾಜು ಇಲ್ಲದೆ ನಿಂತು ಹೋಗುವ ಸಂದರ್ಭದಲ್ಲೂ ಕೂಡ ಸೌದೆ ಸುಟ್ಟು ಇದ್ದಿಲು ಮಾಡಿ, ಕಾರ್ಖಾನೆ ನಡೆಸಿದವರು. ಅವರ ಕಾಲದಲ್ಲಿ ಅನೇಕ ಜನಪರ ಕಾರ್ಯಕ್ರಮಗಳು ಆಗಿವೆ. ಸಾಹಿತ್ಯ ಪರಿಷತ್ತು, ವಿಶ್ವವಿದ್ಯಾಲಯ ಹಾಗೆಯೇ ಈ ಸಹ್ಯಾದ್ರಿ ಕಾಲೇಜಿನ ಸ್ಥಾಪನೆಗೂ ಕಾರಣರಾಗಿದ್ದಾರೆ ಎಂದರು.
ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರದು ವಿಶಾಲ ಹೃದಯ. ಜಾತ್ಯಾತೀತ, ಧರ್ಮಾತೀತ ನಿಲುವುಗಳಿದ್ದವು. ಅಂದು ಬ್ರಾಹ್ಮಣ, ಬ್ರಾಹ್ಮಣೇತರ ಚಳುವಳಿಗಳು ನಡೆದವು. ವಿಶ್ವೇಶ್ವರಯ್ಯನವರ ಸಲಹೆಯನ್ನು ಸ್ವೀಕರಿಸದೆ ತಮ್ಮ ಜಾತ್ಯಾತೀತ ನಿಲುವಿಗೆ ಬದ್ಧರಾಗಿದ್ದವರು. ಮೀಸಲಾತಿಯನ್ನು ಅಂದೇ ಘೋಷಿಸಿದವರು. ಹಾಗಾಗಿಯೇ ಅವರು ಕೇವಲ ರಾಜರಲ್ಲ, ರಾಜರ್ಷಿಯಾದವರು, ಕುವೆಂಪು ಕೂಡ ಅವರನ್ನು ಯುದಿಷ್ಠರನೊಂದಿಗೆ ಹೋಲಿಸಿದ್ದರು ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತ್‌ಮೂರ್ತಿ ವಹಿಸಿದ್ದರು. ಪ್ರಾಂಶುಪಾಲ ಪ್ರೊ.ಎಸ್.ಸಿರಾಜ್ ಅಹಮದ್ ಆಶಯ ನುಡಿಗಳನ್ನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್.ಮಂಜುನಾಥ್, ಪ್ರೊ.ಶಫಿವುಲ್ಲಾ, ಡಾ.ಎಚ್.ಪಿ.ಮಂಜುನಾಥ್, ಮಹಾದೇವಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ದಸರಾ ಉದ್ಘಾಟನೆಗೆ ಬಾನುಮುಸ್ತಾಕ್ ಕರೆದಿರುವುದನ್ನು ಇಂದಿನ 21ನೇ ಶತಮಾನದಲ್ಲೂ ಒಪ್ಪುವ ಹೃದಯ ವೈಶಾಲ್ಯತೆ ನಮಗಿಲ್ಲವಾಗಿದೆ. ಸಂವಿಧಾನವನ್ನು ಒಪ್ಪಿಕೊಂಡಿರುವ ನಾವೇ ಇದನ್ನು ವಿರೋಧಿಸುತ್ತಿದ್ದೇವೆ. ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ರಾಜರಾಗಿದ್ದರೂ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರನ್ನು ಅಂಬಾರಿಯ ಮೇಲೆ ತಮ್ಮ ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದರು. ಇಂದಿನ ಸಂಕುಚಿತ ಮನಸ್ಸುಗಳು ಇದನ್ನು ಅರ್ಥಮಾಡಿಕೊಳ್ಳಬೇಕಾಗಿದೆ
- ವೈ.ಎಸ್.ವಿ.ದತ್ತ, ಮಾಜಿ ಶಾಸಕ ಹಾಗೂ ಚಿಂತಕ