ಕೃಷ್ಣರಾಜ ಒಡೆಯರ್‌ ಕನ್ನಡ ನಾಡಿನ ಅಭಿವೃದ್ಧಿ ಹರಿಕಾರ: ಡಿ.ಮಂಜುನಾಥ

| Published : Jun 06 2024, 12:30 AM IST

ಕೃಷ್ಣರಾಜ ಒಡೆಯರ್‌ ಕನ್ನಡ ನಾಡಿನ ಅಭಿವೃದ್ಧಿ ಹರಿಕಾರ: ಡಿ.ಮಂಜುನಾಥ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ರಾಜರ್ಷಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ 140ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮೈಸೂರು ಪ್ರಾಂತ್ಯವನ್ನು ಶ್ರೀಮಂತವಾಗಿಸುವಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಚಿಂತನೆಗಳೇ ಕಾರಣ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರೀ ಜಗದ್ಗುರು ಪಂಚಾಚಾರ್ಯ ಕೈಗಾರಿಕಾ ತರಬೇತಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ್ದ ರಾಜರ್ಷಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಅವರ 140 ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತದ ಒಟ್ಟು ರಾಜ್ಯಗಳಲ್ಲಿ 2ನೇ ಶ್ರೀಮಂತ ರಾಜ್ಯವಾಗಿ ನಮ್ಮ ಮೈಸೂರು ಪ್ರಾಂತ್ಯವಿತ್ತು ಎನ್ನುವ ಹೆಗ್ಗಳಿಕೆ ಒಂದೆಡೆಯಾದರೆ, ದೇವಾದಾಸಿ ಪದ್ಧತಿ, ಬಸವಿ ಬಿಡುವ ಪದ್ಧತಿ, ಗೆಜ್ಜೆಕಟ್ಟುವ, ಮುತ್ತು ಕಟ್ಟುವ, ಬಾಲ್ಯ ವಿವಾಹ ಸೇರಿ ಆ ಕಾಲದ ಅನೇಕ ಅನಿಷ್ಟ ಪದ್ಧತಿ ನಿಷೇಧ ಮಾಡಿದ ಹೆಗ್ಗಳಿಕೆ ಒಡೆಯರ್‌ದಾಗಿತ್ತು ಎಂದು ಬಣ್ಣಿಸಿದರು.

ಸಾಹಿತಿ ಕೆ.ಜಿ.ವೆಂಕಟೇಶ್‌ ಮಾತನಾಡಿ, ಕನ್ನಡದ ಸ್ವಾಭಿಮಾನ ಹೆಚ್ಚುವಂತೆ ಮಾಡಲು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ಶಿಕ್ಷಣ ಸಂಸ್ಥೆ ಕಟ್ಟಿ ವಿದ್ಯಾವಂತರನ್ನು ಸಿದ್ಧಗೊಳಿಸಿದ ಕ್ರಮ ಸೇರಿ, ಆಸ್ಪತ್ರೆ, ಕಾರ್ಖಾನೆ, ಬ್ಯಾಂಕ್, ಆಣೆಕಟ್ಟೆಗಳು, ವಿದ್ಯುತ್ ತಯಾರಿಕೆ ಒಂದೇ ಎರಡೇ ಅಷ್ಟೊಂದು ಉತ್ತಮ ಕಾರ್ಯ ಮಾಡಿ ಇಡೀ ದೇಶದ ಮೆಚ್ಚುಗೆ ಪಡೆದಿದ್ದರು ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಜಗದ್ಗುರು ಪಂಚಾಚಾರ್ಯ ಕೈಗಾರಿಕಾ ತರಬೇತಿ ಕಾಲೇಜಿನ ಸಂಸ್ಥಾಪಕ ವಿಘ್ನೇಶ್ವರಯ್ಯ ನೀ ಸೋಲಾಪುರ ಮಾತನಾಡಿ, ಮಹನೀಯರ ಆದರ್ಶ ಬದುಕು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಬೇಕಿದ್ದು, ಇಂತಹ ಕಾರ್ಯಕ್ರಮ ನಮ್ಮ ಅರಿವನ್ನು ವಿಸ್ತರಿಸುತ್ತದೆ. ಅವರ ಪರಿಶ್ರಮದ ಫಲವನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹಾದೇವಿ, ಕಾಲೇಜು ಪ್ರಾಂಶುಪಾಲರಾದ ಡಿ.ಎನ್. ಪರಮೇಶ್ವರಪ್ಪ ಉಪಸ್ಥಿತರಿದ್ದರು. ಉಪನ್ಯಾಸಕ ಮಂಜುನಾಥ ನಿರೂಪಿಸಿ, ಮಹಂತೇಶ್ ವಸ್ತ್ರದ ಸ್ವಾಗತಿಸಿದರು.