ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ನಮ್ಮೆಲ್ಲರ ಜೀವನಾಡಿ ಕೃಷ್ಣಾ ನದಿಯು ಗಂಗಾ ನದಿಯಷ್ಟೇ ಪವಿತ್ರವಾದದ್ದು, ನದಿಗಳು ಕೂಡ ದೇಶದ ಅಮೂಲ್ಯವಾದ ಸಂಪತ್ತು, ನದಿ ನೀರು ಕಲುಷಿತವಾಗದಂತೆ ಸಂರಕ್ಷಣೆ ಮಾಡುವುದು ಮತ್ತು ವ್ಯರ್ಥವಾಗಿ ಹರಿದು ಹೋಗುವ ನೀರನ್ನು ನೀರಾವರಿ ಯೋಜನೆಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ನಿರಾಣಿ ಉದ್ಯೋಗ ಸಮೂಹದ ಕಾರ್ಯ ನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.ಪಟ್ಟಣದಲ್ಲಿ ಹಿಪ್ಪರಗಿ ಗ್ರಾಮದಲ್ಲಿ ಕೃಷ್ಣ ಜನ್ಮಾಷ್ಟಮಿಯ ದಿನ ಹಮ್ಮಿಕೊಳ್ಳಲಾಗುವ ಕೃಷ್ಣಾರತಿ ಕಾರ್ಯಕ್ರಮದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಅಥಣಿ ಮತ್ತು ಜಮಖಂಡಿ ಎರಡು ಸಹೋದರ ತಾಲೂಕುಗಳು. ನದಿ ಪಾತ್ರದಲ್ಲಿರುವ ಹಿಪ್ಪರಗಿ ಗ್ರಾಮದಲ್ಲಿ ಆ.16 ರಂದು ಕೃಷ್ಣಾರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಉತ್ತರ ಭಾರತದ ನೂರಾರು ನಾಗಾ ಸಾಧುಗಳು, ಅಘೋರಿಗಳು, ತಪಸ್ವಿಗಳು, ರಾಜ್ಯಪಾಲರು, ಮಂತ್ರಿಗಳು ಹಾಗೂ ಶಾಸಕರು ಸೇರಿದಂತೆ ಅನೇಕ ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುತ್ತ-ಮುತ್ತಲಿನ ತಾಲೂಕು ಹಾಗೂ ಜಿಲ್ಲೆಯ ಸಾವಿರಾರು ಸಂಖ್ಯೆಯಲ್ಲಿ ಜನರು ಭಕ್ತಿ ಭಾವದಿಂದ ಪಾಲ್ಗೊಳ್ಳುವ ನಿರೀಕ್ಷೆ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ನಿರಾಣಿ ಫೌಂಡೇಶನ್ ಹಾಗೂ ಕೃಷ್ಣಾರತಿ ಕಾರ್ಯಕ್ರಮ ಸಮಿತಿಯ ಎಲ್ಲ ಸದಸ್ಯರು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕೋರಿದರು.ಮಾಜಿ ಶಾಸಕ ಮಹೇಶ ಕುಮಠಳ್ಳಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ಜರುಗಿದ ಪ್ರಯಾಗರಾಜ ಪುಣ್ಯ ಸ್ನಾನದ ಮಾದರಿಯಲ್ಲಿ ನಮ್ಮ ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾ ನದಿಯ ಪಾವಿತ್ರತೆಯನ್ನು ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಕೃಷ್ಣಾ ಪುಣ್ಯ ಸ್ನಾನ, ಕೃಷ್ಣಾ ನದಿಗೆ ಆರತಿ, ಶಾಸ್ತ್ರೀಯ ಸಂಗೀತ, ಕೃಷ್ಣಾ ನದಿಯ ಕುರಿತು ಉಪನ್ಯಾಸ, ಕುಂಭಮೇಳ, ಶೋಭಯಾತ್ರೆ ನಡೆಯುತ್ತಿರುವುದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದಲ್ಲಿ 240 ವರ್ಷಗಳ ಕಾಲ ಬದುಕಿ ಇತಿಹಾಸ ಸೃಷ್ಟಿಸಿರುವ ಅಘೋರಿ, ಸನ್ಯಾಸಿ ಆಗಮಿಸುತ್ತಿರುವುದು ವಿಶೇಷ ಎಂದರು.ಈ ಸಂದರ್ಭದಲ್ಲಿ ಇತ್ತೀಚಿಗೆ ಅಥಣಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎ.ಎ.ಹುದ್ದಾರ ಅವರನ್ನು ಮಾಜಿ ಶಾಸಕ ಮಹೇಶ ಕುಮಠಳ್ಳಿ ಹಾಗೂ ನಿರಾಣಿ ಉದ್ಯೋಗ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ್ವರ ನಿರಾಣಿ ಸನ್ಮಾನಿಸಿ, ಅಭಿನಂದಿಸಿದರು. ಈ ವೇಳೆ ಜಿ.ಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ, ರಮೇಶಗೌಡ ಪಾಟೀಲ, ಹನುಮಂತ ಯಲಶೆಟ್ಟಿ, ಗಿರೀಶ ಬುಟಾಳಿ, ವರ್ಧಮಾನ ಯಲಗುದ್ರಿ, ಶಿವಾನಂದ ಕುಂಬಾರ, ಲಕ್ಕಪ್ಪ ಮುಡಸಿ, ಮುತ್ತಯ್ಯ ಕಾಡದೇವರಮಠ, ಬಸು ಹಿಪ್ಪರಗಿ, ಮಲ್ಲಪ್ಪ ಪೂಜಾರಿ, ಪ್ರಭಾಕರ ಚವ್ಹಾಣ, ಅಶೋಕ ದಾನಗೊಂಡ, ನಿಂಗಪ್ಪ ನಂದೇಶ್ವರ, ಮಲ್ಲಪ್ಪ ಹಂಚಿನಾಳ, ರಾಜೇಂದ್ರ ಐಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ನದಿ ನೀರಿನ ಸದ್ಬಳಕೆಯಿಂದ ರೈತ ಸ್ವಾವಲಂಬಿ: ಸಂಗಮೇಶ
ಅಥಣಿ: ಅನೇಕ ವರ್ಷಗಳಿಂದ ಕೃಷ್ಣಾ ನೀರು ವ್ಯರ್ಥವಾಗಿ ಹರಿದು ಸಮುದ್ರ ಸೇರುತ್ತಿದೆ. ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿ ವಹಿಸಿದರೇ ಈ ನೀರನ್ನು ಸದ್ಬಳಕೆ ಮಾಡಿಕೊಂಡು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು. ಇದರಿಂದ ರೈತರ ಜಮೀನುಗಳಿಗೆ ನೀರಿನ ಸೌಲಭ್ಯ ದೊರೆತು ಆರ್ಥಿಕವಾಗಿ ಸಬಲೀಕರಣ ಹೊಂದಲು ಸಾಧ್ಯವಿದೆ ಎಂದು ನಿರಾಣಿ ಉದ್ಯೋಗ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೃಷ್ಣಾ ನದಿ ಮಹಾರಾಷ್ಟ್ರದಲ್ಲಿ ಹುಟ್ಟಿ ಕರ್ನಾಟಕದಲ್ಲಿ 1400 ಕಿಮೀ ಉದ್ದವಾಗಿ ಹರಿದು ಆಂಧ್ರಪ್ರದೇಶದ ಮೂಲಕ ಹರಿದು ಸಮುದ್ರದ ಪಾಲಾಗುತ್ತಿದೆ. ವ್ಯರ್ಥವಾಗಿ ಹರಿದು ಹೋಗುವ ಈ ನದಿಯನ್ನು ನೀರನ್ನು ರಾಜ್ಯ ಸರ್ಕಾರ ನೀರಾವರಿ ಯೋಜನೆಗಳ ಮೂಲಕ ರೈತರ ಜಮೀನುಗಳಿಗೆ ನೀರು ಒದಗಿಸುವ ಕಾರ್ಯ ಮಾಡಬೇಕಾಗಿದೆ ಎಂದರು. ದಕ್ಷಿಣ ಕರ್ನಾಟಕದ ಕಾವೇರಿ ನದಿಗೆ ಕನ್ನಂಬಾಡಿ ಅಣೆಕಟ್ಟು ಕಟ್ಟುವ ಮೂಲಕ ಆ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ರಾಜ್ಯ ಸರ್ಕಾರಗಳು ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಮತ್ತು ಈ ಭಾಗದ ನದಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮಲತಾಯಿ ಧೋರಣೆ ಅನುಸರಿಸುತ್ತಿವೆ. ಆದ್ದರಿಂದ ಕೃಷ್ಣಾ ನದಿ ನೀರು ಸದ್ಬಳಕೆಗಾಗಿ ಹೋರಾಟಗಳನ್ನು ನಡೆಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಮಹೇಶ್ ಕುಮಟಳ್ಳಿ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.ಕೃಷ್ಣಾ ನದಿಯು ಗಂಗಾ ನದಿಯ ನೀರಿನಷ್ಟೇ ಪವಿತ್ರವಾದದ್ದು, ಕಾರ್ಖಾನೆಯ ತ್ಯಾಜ್ಯಗಳನ್ನು ನದಿಗೆ ಬಿಡುವುದು, ಮರಳು ತೆಗೆಯುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ. ಕೃಷ್ಣಾ ನದಿಯ ನೀರಿನ ಸಂರಕ್ಷಣೆ ಹಾಗೂ ಸದ್ಬಳಕೆಗಾಗಿ ವಿಶೇಷ ಸಂಕಲ್ಪದೊಂದಿಗೆ ವಿನೂತನ ಕಾರ್ಯಕ್ರಮಗಳನ್ನು ನಿರಾಣಿ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಬರುವ 16 ರಂದು ಹಿಪ್ಪರಗಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುವ ಕೃಷ್ಣಾ ನದಿ ಪುಣ್ಯ ಸ್ನಾನ, ಕೃಷ್ಣಾರತಿ ಕಾರ್ಯಕ್ರಮದಲ್ಲಿ ಎಲ್ಲರೂ ಭಕ್ತಿಭಾಗದಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.-ಸಂಗಮೇಶ ನಿರಾಣಿ,
ನಿರಾಣಿ ಉದ್ಯೋಗ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕರು.ಈ ಪುಣ್ಯಮಯ ಕಾರ್ಯಕ್ರಮದಲ್ಲಿ ನಮ್ಮ ನಿರೀಕ್ಷೆಯಂತೆ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದಾರೆ. ಅಥಣಿ ತಾಲೂಕಿನ ವಿವಿಧ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡುವ ಮೂಲಕ ಪುನೀತರಾಗಬೇಕು. ತಾಲೂಕಿನ ವಿವಿಧ ದೇವಸ್ಥಾನದ ದೇವರ ಪಲ್ಲಕ್ಕಿಗಳು ಕೂಡ ಶ್ರಾವಣ ಮಾಸದಲ್ಲಿ ಪುಣ್ಯ ಸ್ನಾನಕ್ಕೆ ಬರುವ ಪ್ರತೀತಿ ಇದೆ. ತಾಲೂಕಿನ ಎಲ್ಲರೂ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ.-ಮಹೇಶ ಕುಮಠಳ್ಳಿ,
ಮಾಜಿ ಶಾಸಕರು.