ಬ್ರೈನ್ ಓ ಥಾನ್ ಪರೀಕ್ಷೆಯಲ್ಲಿ ಕೃತಿ ರಾಜ್ಯಕ್ಕೆ ಪ್ರಥಮ

| Published : Jan 25 2025, 01:03 AM IST

ಸಾರಾಂಶ

ಈ ಸ್ಪರ್ಧೆಯಲ್ಲಿ ರಾಜ್ಯಾದ್ಯಂತ 57 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ನಮ್ಮ ಶಾಲೆಯಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಕೃತಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಕ್ಯಾಮ್ಸ್‌ನ ವತಿಯಿಂದ ವಿಜೇತ ಕೃತಿಗೆ ಒಂದು ಲಕ್ಷ ರು. ಬಹುಮಾನ ಹಾಗೂ ಆಕೆಯ ಕುಟುಂಬಕ್ಕೆ ಗೋವಾ ಪ್ರವಾಸವನ್ನು ಬಹುಮಾನವಾಗಿ ನೀಡಿದೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಇತ್ತೀಚೆಗೆ ನಡೆದ ರಾಜ್ಯಮಟ್ಟದ ಬ್ರೈನ್ ಓ ಥಾನ್ ಪರೀಕ್ಷೆಯಲ್ಲಿ ನಗರದ ಡ್ಯಾಪೋಡಿಲ್ಸ್ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕೃತಿ ಅವರು ಶೇ.99ರಷ್ಟು ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ವಿಎಲ್‌ಎನ್ ಎಜುಕೇಷನ್ ಟ್ರಸ್ಟ್ ಕಾರ್‍ಯದರ್ಶಿ ಸುಜಾತ ಕೃಷ್ಣ ತಿಳಿಸಿದರು.

ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಖಾಸಗಿ ಶಾಲೆಗಳ ಸಂಘಟನೆ ಕ್ಯಾಮ್ಸ್ ವತಿಯಿಂದ ಬ್ರೈನ್ ಓ ಥಾನ್ ಎಂಬ ಪರೀಕ್ಷೆ ನಡೆದಿದ್ದು, ಇದೊಂದು ಸಾರ್ವತ್ರಿಕ ವಿಷಯಾಧಾರಿತ, ವಿದ್ಯಾರ್ಥಿಗಳ ಸಾಮರ್ಥ್ಯ, ವಿಶ್ಲೇಷಣಾತ್ಮಕ ಮತ್ತು ವಿಮರ್ಶನಾತ್ಮಕ ಚಿಂತನೆಗಳನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾದ ಸ್ಪರ್ಧೆಯಾಗಿದ್ದು, ಈ ಪರೀಕ್ಷೆಯಲ್ಲಿ ನಮ್ಮ ವಿದ್ಯಾರ್ಥಿನಿ ಪ್ರಥಮ ಸ್ಥಾನ ಪಡೆದಿರುವುದು ಸಂತಸ ತಂದಿದೆ ಎಂದು ವಿವರಿಸಿದರು.

ಈ ಸ್ಪರ್ಧೆಯಲ್ಲಿ ರಾಜ್ಯಾದ್ಯಂತ 57 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ನಮ್ಮ ಶಾಲೆಯಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ ಕೃತಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಕ್ಯಾಮ್ಸ್‌ನ ವತಿಯಿಂದ ವಿಜೇತ ಕೃತಿಗೆ ಒಂದು ಲಕ್ಷ ರು. ಬಹುಮಾನ ಹಾಗೂ ಆಕೆಯ ಕುಟುಂಬಕ್ಕೆ ಗೋವಾ ಪ್ರವಾಸವನ್ನು ಬಹುಮಾನವಾಗಿ ನೀಡಿದೆ ಎಂದು ಹೇಳಿದರು.

ನಮ್ಮ ಶಾಲೆಯಲ್ಲಿ 300 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಇದರಲ್ಲಿ ಕೃತಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದರೆ, ನಮ್ಮ ಶಾಲೆಯ 6ನೇ ತರಗತಿಯ ಸೈಯ್ಯದ್ ಶುರೈಮ್ ಶೇ.97 ರಷ್ಟು ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಹೇಳಿದರು.

ಕ್ಯಾಮ್ಸ್ ವತಿಯಿಂದ ಶಾಲೆಗಳ ಶಿಕ್ಷಕರಿಗೂ ಪ್ರತ್ಯೇಕ ಸ್ಪರ್ಧೆ ನಡೆದಿದ್ದು, ಸದರಿ ಸ್ಪರ್ಧೆಯಲ್ಲಿ ಶಾಲೆಯ ಶಿಕ್ಷಕಿ ತರುಣ ಅವರು ಶೇ.98ರಷ್ಟು ಅಂಕಗಳಿಸಿ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದು ವಿವರಿಸಿದರು.

ಟ್ರಸ್ಟ್‌ನ ಅಧ್ಯಕ್ಷ ಡಾ.ಪ್ರದೀಪ್‌ ಕುಮಾರ್ ಹೆಬ್ರಿ, ಶಾಲೆ ಮುಖ್ಯ ಶಿಕ್ಷಕಿ ನಯನ, ಶಿಕ್ಷಕಿ ತರುಣ ವಿದ್ಯಾರ್ಥಿಗಳಾದ ಕೃತಿ ಹಾಗೂ ಸೈಯ್ಯದ್ ಶುರೈಮ್ ಗೋಷ್ಠಿಯಲ್ಲಿದ್ದರು.