ಸಾರಾಂಶ
ಸಿ.ಎಂ.ಜೋಶಿ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡಕಳೆದ ಬಾರಿಯ ಭೀಕರ ಬರದಿಂದ ಕಂಗೆಟ್ಟಿರುವ ರೈತರಿಗೆ ಈ ಬಾರಿ ಮುಂಗಾರು ಮಳೆ ಭರವಸೆ ಮೂಡಿಸಿದೆ. ವಾಡಿಕೆಗಿಂತ ಮುಂಚೆಯೇ ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ. ಇದೀಗ ಗುಳೇದಗುಡ್ಡ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಸುರಿದ ಭಾರೀ ವರ್ಷಧಾರೆ ರೈತರಲ್ಲಿ ಮಂದಹಾಸ ಮೂಡಿಸಿದೆ. ಈ ಕೃತಿಕಾ ಮಳೆಯ ಭರವಸೆಯಲ್ಲಿಯೇ ರೈತರು ಕೂಡ ಹುರುಪಿನಿಂದ ಮುಂಗಾರು ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ.ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ಬಿತ್ತನೆ ಮಾಡಲು ರೈತರು ಹೊಲಗಳನ್ನು ಈಗಾಗಲೇ ಸಜ್ಜುಗೊಳಿಸುವ ಹಾಗೂ ಕೃಷಿ ಕೇಂದ್ರಕ್ಕೆ ಹೋಗಿ ಬೀಜ ಮತ್ತು ಗೊಬ್ಬರ ತಂದಿಟ್ಟುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಒಟ್ಟು 38 ಗ್ರಾಮಗಳ ಪೈಕಿ ಕೆಲ ಗ್ರಾಮಗಳು ಮಲಪ್ರಭಾ ನದಿ ದಂಡೆಗೆ ಹತ್ತಿಕೊಂಡಿವೆ. ಇದರಿಂದ ಸುಮಾರು 14 ಗ್ರಾಮಗಳ ರೈತರು ನದಿ ನೀರನ್ನೇ ಅವಲಂಬಿಸಿ ಕೃಷಿ ಮಾಡುತ್ತಾರೆ. ಕೆಲವರು ಬೋರ್‌ವೆಲ್‌ಗಳನ್ನು ಕೊರೆಸಿದ್ದಾರೆ. ಕಾಟಾಪೂರ, ಮಂಗಳಗುಡ್ಡ, ಚಿಮ್ಮಲಗಿ, ನಾಗರಾಳ.ಎಸ್.ಪಿ., ಸಬ್ಬಲ ಹುಣಸಿ, ಲಾಯದಗುಂದಿ, ಕಟಗೇನಹಳ್ಳಿ, ಕೊಟ್ನಳ್ಳಿ, ಆಸಂಗಿ ಸೇರಿದಂತೆ ಮುಂತಾದ ಕೆಲ ಗ್ರಾಮಗಳು ನದಿ ನೀರನ್ನು ಅವಲಂಬಿಸಿವೆ. ಸುಮಾರು 24 ಗ್ರಾಮಗಳು ಸಂಪೂರ್ಣ ಮಳೆಯನ್ನೇ ಅವಲಂಬಿಸಿ ಕೃಷಿ ಮಾಡುತ್ತಿವೆ.
ಕಳೆದ ವರ್ಷ ಮಳೆಯಾಗದೇ ಭೀಕರ ಬರದ ಬವಣೆಯನ್ನು ಅನುಭವಿಸಿದ ತಾಲೂಕಿನ ರೈತಾಪಿ ವರ್ಗ ಈ ಬಾರಿ ಎಲ್ಲ ಮಳೆಗಳು ಸಮಯಕ್ಕೆ ಸರಿಯಾಗಿ ಆಗುತ್ತವೆ ಎಂಬ ಭರವಸೆ ಇಟ್ಟುಕೊಂಡಿದ್ದಾರೆ. ಇದೇ ನಿರೀಕ್ಷೆಯಲ್ಲಿಯೇ ಬಿತ್ತನೆಗೆ ಹೊಲಗಳನ್ನು ಅಣಿಗೊಳಿಸುತ್ತಿದ್ದಾರೆ. ಹೊಳಿಸಾಲ ಗ್ರಾಮಗಳ ರೈತರು ಸೀಡ್ಸ್ ಹತ್ತಿ ಹೆಚ್ಚಾಗಿ ಬೆಳೆಯುತ್ತಾರೆ. ಉಳಿದಂತೆ ಹೆಸರು, ಹೈಬ್ರೀಡ್ ಜೋಳ, ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ ಅಂತಹ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಾರೆ. ತಾಲೂಕಿನಲ್ಲಿ ಒಂದು ವಾರದಿಂದ ಬಿತ್ತನೆಗೆ ರೈತರಿಂದ ಭರ್ಜರಿ ಸಿದ್ಧತೆ ನಡೆದಿದೆ. ಮುಂದೆ ಮೇ 25 ರಿಂದ ರೋಹಿಣಿ ಮಳೆ ಆಗಮನ ವಾಗಲಿದ್ದು, ರೋಹಿಣಿ ಮಳೆಯಾದರೆ ಓಣಿಯಲ್ಲ ಕಾಳು ಎನ್ನುವ ರೈತರ ಮಾತಿನಂತೆ ಬಹು ನಿರೀಕ್ಷೆಯೊಂದಿಗೆ ಬಿತ್ತನೆ ಶುರು ಮಾಡಿದ್ದಾರೆ.ಒಂದು ವಾರದಿಂದ ಮಳೆ ಉತ್ತಮವಾಗಿದ್ದರಿಂದ ಕೋಟೆಕಲ್, ತೋಗುಣಸಿ, ಬೂದಿನಗಡ, ಮುರುಡಿ, ತೆಗ್ಗಿ, ಹಾನಾಪೂರ ಮುಂತಾದ ಭಾಗಗಳಲ್ಲಿ ಮುಂಗಾರು ಬಿತ್ತನೆ ಕಾರ್ಯ ಚುರುಕಿನಿಂದ ನಡೆದಿದೆ.
-------------ಕೋಟ್
ಈ ಬಾರಿ ಮಳೆ ಚನ್ನಾಗಿ ಆಗುವ ಭರವಸೆಯಿದೆ. ಮುಂಗಾರು ಬಿತ್ತನೆಗೆ ತೊಗರಿ, ಸಜ್ಜೆ, ಹೆಸರು, ಸೂರ್ಯಕಾಂತಿ ಬೆಳಗಳನ್ನು ಬೆಳೆಯುತ್ತೇವೆ. ಮಳೆರಾಯ ಈ ಬಾರಿಯಾದರು ರೈತರನ್ನು ಕೈ ಹಿಡಿದರೆ ಸಾಕು. ಕಳೆದ ಬಾರಿ ಬರದಿಂದ ನಾವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ. ಈ ಬಾರಿ ಭರಪೂರ ಮಳೆಯಾಗಲಿ.- ಮಲ್ಲಪ್ಪ ನಿಂಬಲಗುಂದಿ, ರೈತ ಬೂದಿನಗಡ.
-----------------ಗುಳೇದಗುಡ್ಡ ತಾಲೂಕಿನಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಕೃಷಿ ಕೇಂದ್ರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಸಾಕಷ್ಟಿದೆ. ಇದೀಗ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಕೇಂದ್ರಗಳಿಂದ ಬೀಜ, ಗೊಬ್ಬರ ಖರೀದಿಸಿ ಬಿತ್ತನೆ ಕಾರ್ಯ ಆರಂಭಿಸಲಿ.
- ಆನಂದ ಗೌಡರ, ತಾಲೂಕು ಕೃಷಿ ಅಧಿಕಾರಿ.