ಬೆಂಬಲಿಗರೊಂದಿಗೆ ಗಣಿ ರೆಡ್ಡಿ ಬಿಜೆಪಿಗೆ ವಾಪಸ್‌

| Published : Mar 26 2024, 01:17 AM IST / Updated: Mar 26 2024, 12:29 PM IST

ಬೆಂಬಲಿಗರೊಂದಿಗೆ ಗಣಿ ರೆಡ್ಡಿ ಬಿಜೆಪಿಗೆ ವಾಪಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಅವರು ಬಿಜೆಪಿಗೆ ವಾಪಸಾಗಿದ್ದು, ತಮ್ಮ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಾಜಿ ಸಚಿವ ಹಾಗೂ ಹಾಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಅವರು ಬಿಜೆಪಿಗೆ ವಾಪಸಾಗಿದ್ದು, ತಮ್ಮ ನೇತೃತ್ವದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದಾರೆ.

ಸೋಮವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತಿತರ ನಾಯಕರ ಸಮ್ಮುಖದಲ್ಲಿ ರೆಡ್ಡಿ ಅವರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು.

ಈ ವೇಳೆ ಮಾತನಾಡಿದ ವಿಜಯೇಂದ್ರ, ರೆಡ್ಡಿ ಅವರು ತಾವೇ ಸ್ಥಾಪಿಸಿದ ಪಕ್ಷ ವಿಸರ್ಜನೆ ಮಾಡಿ ನಮ್ಮೊಂದಿಗೆ ಸೇರಿದ್ದಾರೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ದೊಡ್ಡ ಶಕ್ತಿ ಬಂದಿದೆ. 

ಮೋದಿ ಅವರ ನಾಯಕತ್ವ ಬಿಜೆಪಿ ಸಿದ್ಧಾಂತ ಒಪ್ಪಿಕೊಂಡು ಬಂದಿದ್ದಾರೆ. ಪಕ್ಷದ ಏಳಿಗೆಗಾಗಿ ಮತ್ತು ಹಿತದೃಷ್ಟಿಯಿಂದ ಎಲ್ಲರನ್ನೂ ತೊಡಗಿಸಿಕೊಳ್ಳುತ್ತೇವೆ ಎಂದು ಹೇಳಿದರು.

ರೆಡ್ಡಿ ಮಾತನಾಡಿ, ಅನಿವಾರ್ಯ ಕಾರಣಗಳಿಂದ ನಾನು ಪಕ್ಷದಿಂದ ಹೊರಗೆ ಹೋಗಿದ್ದೆ. ಬಾಹ್ಯ ಬೆಂಬಲ ಬೇಡ, ಪಕ್ಷಕ್ಕೇ ಸೇರ್ಪಡೆಯಾಗಿ ಎಂಬ ಗೃಹ ಸಚಿವ ಅಮಿತ್ ಶಾ ಅವರ ಸಲಹೆಯಂತೆ ನನ್ನ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ವಿಲೀನಗೊಳಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ. 

ನನ್ನ ಮನೆಗೆ ವಾಪಸಾಗಿದ್ದೇನೆ. ಬಿಜೆಪಿ ಎಂಬ ತಾಯಿ ಮಡಿಲಿಗೆ ಸುರಕ್ಷಿತವಾಗಿ ಬಂದು ಸೇರಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.ಯಾವ ಪೂರ್ವ ಜನ್ಮದ ಪುಣ್ಯವೊ ಗೊತ್ತಿಲ್ಲ. 

ಅಂದು ನಾನು ಯಡಿಯೂರಪ್ಪ ಅವರ ಜೊತೆ ಹೆಜ್ಜೆ ಹಾಕಿ ಪಕ್ಷ ಕಟ್ಟಿದ್ದೇನೆ. ಇಂದು ಅವರ ಪುತ್ರ ವಿಜಯೇಂದ್ರ ಜೊತೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ತುಂಬಾ ಹೆಮ್ಮೆ ಮತ್ತು ಖುಷಿ ಅನಿಸುತ್ತಿದೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ ಎಂದರು.

ನಾನು ಯಾವ ಷರತ್ತನ್ನೂ ವಿಧಿಸಿಲ್ಲ. ಯಾವುದೇ ಫಲಾಪಕ್ಷೆ ಇಲ್ಲದೆ ಬಂದಿದ್ದೇನೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಅತಿ ಚಿಕ್ಕ ವಯಸ್ಸಿನಲ್ಲಿ ನನಗೆ ಎಲ್ಲ ಸ್ಥಾನಮಾನ ನೀಡಿದ್ದಾರೆ. 

ಅನೇಕ ಏಳು ಬೀಳುಗಳನ್ನು ನೋಡಿದ್ದೇನೆ. ಈಗ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ ಎಂದು ತಿಳಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಅಂದು ಕೆಲ ಕಾರಣಗಳಿಗೆ ನಾನು ಪಕ್ಷದಿಂದ ದೂರ ಹೋಗಿದ್ದೆ. ಈಗ ಎಲ್ಲವೂ ಸರಿಹೋಗಿದೆ. ಮತ್ತೆ ಮರಳಿ ಮನೆಗೆ ಬಂದಿದ್ದೇನೆ. 

ಬಳ್ಳಾರಿಯಲ್ಲಿ ಶ್ರೀರಾಮುಲು ಗೆಲ್ಲುತ್ತಾರೆ. ಬಳ್ಳಾರಿಯಲ್ಲಿ ಮತ್ತೆ ಬಿಜೆಪಿ ಕಟ್ಟುತ್ತೇವೆ ಎಂದು ಹೇಳಿದರು. ಈ ವೇಳೆ ಮಾಜಿ ಸಚಿವರಾದ ಬಿ.ಶ್ರೀರಾಮುಲು, ಸಿ.ಟಿ.ರವಿ ಮತ್ತಿತರರು ಉಪಸ್ಥಿತರಿದ್ದರು.