ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಲೂಟಿಯಂತಹ ಅಕ್ರಮಗಳ ವಿರುದ್ಧ ಕೆಆರ್‌ಎಸ್ ಹೋರಾಟ ಪ್ರಾರಂಭಿಸಿ ಲಕ್ಷಾಂತರ ಮಂದಿಯನ್ನು ಸೆಳೆಯುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ರಾಜ್ಯಾಧ್ಯಕ್ಷ ಕೃಷ್ಣಾರೆಡ್ಡಿ ತಿಳಿಸಿದರು.ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ನಡೆದ ಮಹಾಧಿವೇಶನವನ್ನು ಉದ್ಘಾಟಿಸಿ ಮಾತನಾಡಿ, ಕೇವಲ ಬೆಳರಣಿಕೆಯ ಕಾರ್ಯಕರ್ತರೊಂದಿಗೆ ಪ್ರಾರಂಭವಾದ ರಾಷ್ಟ್ರ ಸಮಿತಿ ಪಕ್ಷ ಇಂದು ರಾಜ್ಯಾದ್ಯಂತ ಮನೆಮಾತಾಗಿದೆ. ಇದಕ್ಕೆ ನಮ್ಮ ಕಾರ್ಯಕರ್ತರ ಶ್ರಮವೇ ಕಾರಣ ಎಂದು ಶ್ಲಾಘಿಸಿದರು.
ರಾಜ್ಯದಲ್ಲಿಂದು ಭ್ರಷ್ಟಾಚಾರ, ಲೂಟಿ, ಅನ್ಯಾಯ, ಅಕ್ರಮಗಳು ನಡೆಯುತ್ತಲೇ ಇವೆ. ಇವುಗಳ ವಿರುದ್ಧ ಯಾವುದೇ ರಾಜಕೀಯ ಪಕ್ಷವೂ ಹೋರಾಟ ಮಾಡುವುದಿಲ್ಲ. ನಾವು ದಿಟ್ಟ ಹೆಜ್ಜೆ ಇಟ್ಟು ಹೋರಾಟಕ್ಕೆ ಇಳಿದಿದ್ದೇವೆ ಉದಾಹರಣೆ ಸಮೇತ ಸನ್ನಿವೇಶವೊಂದನ್ನು ವಿವರಿಸಿದರು.ಭ್ರಷ್ಟಾಚಾರ ಪ್ರಕರಣಗಳನ್ನು ಪತ್ತೆ ಹಚ್ಚಿ ಸಮಾಜಕ್ಕೆ ತಲುಪಿಸುವ ಹೊಣೆಯೂ ನಮ್ಮ ಮೇಲಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಾಗಿ ನಾವು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವುದು ಅನಿವಾರ್ಯವಾಗಿದೆ. ಪ್ರತಿಯೊಬ್ಬ ಸೈನಿಕನೂ ನಮ್ಮ ಪಕ್ಷದ ಕಾರ್ಯಕ್ರಮಗಳು, ಭ್ರಷ್ಟಾಚಾರ ವಿರೋಧ ಕೆಲಸಗಳನ್ನು ವಿಡಿಯೋ ಅಥವಾ ಫೋಟೋ ತೆಗೆದು ಅವುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಬೇಕು ಎಂದು ಕರೆ ನೀಡಿದರು.
ಕೆ.ಆರ್.ಎಸ್. ಪಕ್ಷ ಹಲವು ಭ್ರಷ್ಟರು, ಕಳ್ಳರು, ಖದೀಮರನ್ನು ಹಿಡಿದು ಸಮಾಜಕ್ಕೆ ತೋರಿಸುವ ಕೆಲಸ ಮಾಡುತ್ತಿದೆ. ಅಂತಹ ಒಂದೇ ಒಂದು ಪ್ರಕರಣವನ್ನೂ ಸಹ ಮಾಧ್ಯಮಗಳು ತೋರಿಸುವ ಕೆಲಸ ಮಾಡುತ್ತಿಲ್ಲ. ಆದ್ದರಿಂದ ನಾವೇ ಮಾಧ್ಯಮಗಳಂತೆ ಕೆಲಸ ಮಾಡಬೇಕು ಎಂದು ಕರೆ ನೀಡಿದರು.ನ್ಯಾಯಪರವಾಗಿ ಹೋರಾಟ ಮಾಡುವಂತಹ ವೇದಿಕೆ ಇನ್ನೊಂದಿಲ್ಲ. ನಮ್ಮ ಆನೆಕಲ್ ತಾಲೂಕಿನಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪುಡಾರಿಗಳೆಲ್ಲ ಗ್ರಾಪಂನಲ್ಲಿ ಅಕ್ರಮ ಮಾಡುತ್ತಿದ್ದರು. ಈಗ ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಪಕ್ಷದ ಸೈನಿಕರ ಪರಿಶ್ರಮದಿಂದ ಸಾಧ್ಯವಾಗಿದೆ ಎಂದರು.
ಸಮಾರಂಭದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಸೋಮಸುಂದರ್, ಪ್ರಧಾನ ಕಾರ್ಯದರ್ಶಿ ದೀಪಕ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್‌ಗೌಡ, ಜಿಲ್ಲಾಧ್ಯಕ್ಷ ಡಿ.ಬಿ. ನಾಗರಾಜು, ಪ್ರಧಾನ ಕಾರ್ಯದರ್ಶಿ ಚಂದ್ರು ಕೀಲಾರ, ಯುವ ಘಟಕದ ಅಧ್ಯಕ್ಷ ಪ್ರಮೋದ್, ದೀಪಿಕಾ ಇತರರು ಇದ್ದರು.