ಮುಂಗಾರು ಮಳೆ ವೈಫಲ್ಯದಿಂದಾಗಿ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ದಸರಾ ಸಮಯಕ್ಕೆ೧೦೦ ಅಡಿಗೆ ಕುಸಿದಿದೆ. ಜಲಾಶಯದಲ್ಲಿ ಈಗ ಶೇ.೪೭ರಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಚಳಿಗಾಲಕ್ಕೂ ಮುನ್ನವೇ ಅಣೆಕಟ್ಟೆಯ ನೀರಿನ ಮಟ್ಟ ಹೀನಾಯ ಸ್ಥಿತಿಯಲ್ಲಿರುವುದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಗಂಭೀರ ಸಮಸ್ಯೆ ಎದುರಾಗುವ ಆತಂಕವನ್ನು ಮೂಡಿಸಿದೆ.
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಮುಂಗಾರು ಮಳೆ ವೈಫಲ್ಯದಿಂದಾಗಿ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ದಸರಾ ಸಮಯಕ್ಕೆ೧೦೦ ಅಡಿಗೆ ಕುಸಿದಿದೆ. ಜಲಾಶಯದಲ್ಲಿ ಈಗ ಶೇ.೪೭ರಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಚಳಿಗಾಲಕ್ಕೂ ಮುನ್ನವೇ ಅಣೆಕಟ್ಟೆಯ ನೀರಿನ ಮಟ್ಟ ಹೀನಾಯ ಸ್ಥಿತಿಯಲ್ಲಿರುವುದು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಗಂಭೀರ ಸಮಸ್ಯೆ ಎದುರಾಗುವ ಆತಂಕವನ್ನು ಮೂಡಿಸಿದೆ.
ಕೆಆರ್ಎಸ್ ಜಲಾಶಯದ ಗರಿಷ್ಠ ಸಾಮರ್ಥ್ಯ ೧೨೪.೮೦ ಅಡಿ ಇದ್ದು, ಪ್ರಸ್ತುತ ಅಣೆಕಟ್ಟೆಯಲ್ಲಿ ೧೦೦.೬೪ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಜಲಾಶಯಕ್ಕೆ ೫೯೮ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ೨೬೫೬ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ ೨೩.೩೧೭ ಟಿಎಂಸಿ ನೀರು ಸಂಗ್ರಹವಾಗಿದ್ದರೂ ಅದರಲ್ಲಿ ೧೪.೯೩೮ ಟಿಎಂಸಿ ನೀರು ಮಾತ್ರ ಬಳಕೆಗೆ ಸಿಗಲಿದೆ.೨೦೨೩ರ ಅಕ್ಟೋಬರ್ ೪ ರಂದು ಅಣೆಕಟ್ಟೆಯಲ್ಲಿ ೧೦೦.೩೬ ಅಡಿ ನೀರು ಸಂಗ್ರಹವಾಗಿತ್ತು. ಅಂದು ಜಲಾಶಯಕ್ಕೆ ೯,೦೫೨ ಕ್ಯುಸೆಕ್ ನೀರು ಹರಿದುಬರುತ್ತಿದ್ದರೆ, ಅಣೆಕಟ್ಟೆಯಿಂದ ೧೪೮೨ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು.
೧೧೦.೮೪ ಅಡಿ ತಲುಪಿದ್ದ ಕೆಆರ್ಎಸ್:೨೦೨೬ರಲ್ಲಿ ಕೆಆರ್ಎಸ್ ಜಲಾಶಯದ ನೀರಿನ ಮಟ್ಟವನ್ನು ಅವಲೋಕಿಸಿದರೆ ಹಾವು-ಏಣಿ ಆಟದಂತೆ ಕಂಡುಬರುತ್ತದೆ. ಒಂದೇ ವರ್ಷದಲ್ಲಿ ಐದು ಬಾರಿ ನೀರಿನ ಮಟ್ಟ ೧೦೦ ಅಡಿಗಳಿಗಿಂತ ಕೆಳಗೆ ಕುಸಿದಿದೆ. ಏಪ್ರಿಲ್ ೨೦ರಂದು ನೀರಿನಮಟ್ಟ ೯೯.೪ ಅಡಿಗೆ ಇಳಿಮುಖವಾಗಿತ್ತು. ಮೇ ತಿಂಗಳ ಮಧ್ಯಭಾಗದಲ್ಲಿ ೮೯ ಅಡಿಗಿಂತ ಕೆಳಕ್ಕೆ ತಲುಪಿತ್ತು. ಜೂನ್ ೯ರಂದು ೮೧.೩೫ ಅಡಿ ದಾಖಲಾಗಿತ್ತು. ಜುಲೈ ೧೩ರಂದು ೯೨.೧೫ ಅಡಿ ಹಾಗೂ ಜುಲೈ ೨೭ರಂದು ೯೧.೭೦ ಅಡಿ ಇತ್ತು. ಇದೇ ವರ್ಷದ ಆಗಸ್ಟ್ ೩ ರಂದು ಜಲಾಶಯದ ನೀರಿನ ಮಟ್ಟ ೧೦೦ ಅಡಿ ತಲುಪಿತ್ತು. ಮಳೆ ಕೊರತೆಯಿಂದಾಗಿ ಈ ವರ್ಷ ಜಲಾಶಯದ ನೀರಿನ ಮಟ್ಟ ೧೧೦.೮೪ ಅಡಿ ತಲುಪುದಕ್ಕಷ್ಟೇ ಸಾಧ್ಯವಾಗಿತ್ತು.
ಕೃಷಿಗೂ ಸಿಗದ ನೀರು:ಮಳೆಯ ಅಭಾವದಿಂದಾಗಿ ಕೆಆರ್ಎಸ್ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ನಾಲ್ಕು ಕಟ್ಟು ನೀರನ್ನು ಮಾತ್ರ ಹರಿಸುವುದಾಗಿ ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಧರಿಸಲಾಯಿತು. ಆದರೆ, ಆ ನೀರನ್ನು ನಂಬಿ ರೈತರು ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯನ್ನೂ ನಡೆಸಲಿಲ್ಲ. ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೆ ನೀರು ಸಿಗಲೇ ಇಲ್ಲ. ಜಿಲ್ಲೆಯ ಕೆರೆಗಳನ್ನೂ ತುಂಬಿಸಲು ಸಾಧ್ಯವಾಗದೆ ಬಹುತೇಕ ಕೆರೆಗಳು ನೀರಿಲ್ಲದೆ ಬರಡಾಗಿವೆ.
ನೀರಿನ ಬಳಕೆಯೇ ದೊಡ್ಡ ಸವಾಲು:ಕೆಆರ್ಎಸ್ ಜಲಾಶಯ ಕೇವಲ ಕೃಷಿಗೆ ಮಾತ್ರವಲ್ಲ ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಜಿಲ್ಲೆಗಳ ಜನರಿಗೆ ಕುಡಿಯುವ ನೀರಿಗೆ ಮೂಲ ಆಧಾರವಾಗಿದೆ. ಕೃಷಿ ಚಟುವಟಿಕೆಗಂತೂ ನೀರು ಸಿಗಲಿಲ್ಲ. ಜಲಾಶಯದಲ್ಲಿ ಈ ವರ್ಷ ೧೧೦ ಅಡಿಯವರೆಗೆ ನೀರು ಸಂಗ್ರಹವಾಗಿತ್ತಾದರೂ ತಮಿಳುನಾಡಿನವರ ಬೇಡಿಕೆ ಪೂರೈಸಲು ಅಣೆಕಟ್ಟೆಯಲ್ಲಿದ್ದ ೧೦ ಅಡಿ ನೀರನ್ನು ಖಾಲಿ ಮಾಡಲಾಗಿದೆ. ಉಳಿದಿರುವುದು ೧೦೦ ಅಡಿ ನೀರು ಮಾತ್ರ. ಈ ನೀರನ್ನು ಮುಂದಿನ ಎಂಟು ತಿಂಗಳವರೆಗೆ ಅಂದರೆ, ಬೇಸಿಗೆ ಮುಗಿಯುವವರೆಗೂ ಸಮಯೋಚಿತ ರೀತಿಯಲ್ಲಿ ಬಳಸಬೇಕಿರುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.
ಕೆಆರ್ಎಸ್ ಕೇವಲ ಕೃಷಿಗೆ ಮಾತ್ರವಲ್ಲದೆ ಮಂಡ್ಯ, ಮೈಸೂರು ಹಾಗೂ ಕಾವೇರಿ ನೀರನ್ನು ಅವಲಂಬಿಸಿರುವ ಇತರ ಪ್ರದೇಶಗಳ ಕುಡಿಯುವ ನೀರಿನ ಅಗತ್ಯವನ್ನೂ ಪೂರೈಸುತ್ತದೆ. ಬೇಸಿಗೆಯ ಅವಧಿಗೆ ಸಾಕಷ್ಟು ನೀರು ಉಳಿಸಿಕೊಳ್ಳಬೇಕಿರುವುದರಿಂದ ಲಭ್ಯ ಸಂಗ್ರಹವನ್ನು ಯೋಜಿತವಾಗಿ ಬಳಸುವ ಅಗತ್ಯವಿದೆ.೮ ತಿಂಗಳವರೆಗೆ ನಿರ್ವಹಣೆ:
ಜಲಾಶಯದ ನೀರಿನ ಮಟ್ಟ ಮತ್ತೆ ಏರಿಕೆಯಾಗಲು ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿ ಒಳಹರಿವು ಹೆಚ್ಚಾಗಬೇಕು. ಈಗಾಗಲೇ ಮುಂಗಾರು ಮಳೆ ದೇಶದಿಂದ ನಿರ್ಗಮಿಸಿದೆ. ಹಿಂಗಾರು ಮಳೆ ಆಶಾದಾಯಕವಾಗಿ ಬೀಳಬೇಕಿದೆ. ಆದರೂ ಈ ಬಾರಿ ಜಲಾಶಯ ಭರ್ತಿಯಾಗುವುದೆಂಬ ಭರವಸೆಯಂತೂ ಇಲ್ಲ. ಕೆಆರ್ಎಸ್ ಜಲಾಶಯದ ನೀರಿನ ಮಟ್ಟ ೧೦೦ ಅಡಿಯಲ್ಲಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಈ ವರ್ಷ ಏಪ್ರಿಲ್ನಿಂದ ಜುಲೈ ಅಂತ್ಯದವರೆಗೆ ನೀರಿನ ಮಟ್ಟ ೧೦೦ ಅಡಿಗಿಂತ ಕೆಳಮಟ್ಟದಲ್ಲಿದ್ದು, ಆಗಸ್ಟ್ ತಿಂಗಳಲ್ಲಿ ಚೇತರಿಸಿಕೊಂಡಿತ್ತು. ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಮಧ್ಯಭಾಗದವರೆಗೆ ಮಳೆ ಮಾಯವಾಗಿರುವುದರಿಂದ ಜಲಾಶಯದ ನೀರು ಸಂಗ್ರಹ ಸ್ಥಿತಿ ಶೋಚನೀಯವಾಗಿದೆ. ಜಲಾಶಯದಲ್ಲಿರುವ ನೀರಿನ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನೀರಿನ ನಿರ್ವಹಣೆ ಕೈಗೊಳ್ಳುವುದು ಅನಿವಾರ್ಯವಾಗಿದೆ.