ಶ್ರೇಷ್ಠ ಸಾಹಿತಿ ಕೆಎಸ್‌ನ, ಪುತಿನ ಟ್ರಸ್ಟ್ ಅಭಿವೃದ್ಧಿಗೆ ಸಹಕಾರ : ಕೃಷಿ ಸಚಿವ ಚಲುವರಾಯಸ್ವಾಮಿ

| N/A | Published : Mar 24 2025, 12:32 AM IST / Updated: Mar 24 2025, 10:55 AM IST

ಶ್ರೇಷ್ಠ ಸಾಹಿತಿ ಕೆಎಸ್‌ನ, ಪುತಿನ ಟ್ರಸ್ಟ್ ಅಭಿವೃದ್ಧಿಗೆ ಸಹಕಾರ : ಕೃಷಿ ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಹಾಗೂ ಪು.ತಿ.ನರಸಿಂಹಾಚಾರ್ ಟ್ರಸ್ಟ್ ವತಿಯಿಂದ ನಡೆಸಲಾಗುವ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಬೆಂಬಲ, ಸಹಕಾರ ನೀಡುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

 ಮಂಡ್ಯ : ಮಲ್ಲಿಗೆ ಕವಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಹಾಗೂ ಪು.ತಿ.ನರಸಿಂಹಾಚಾರ್ ಟ್ರಸ್ಟ್ ವತಿಯಿಂದ ನಡೆಸಲಾಗುವ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಬೆಂಬಲ, ಸಹಕಾರ ನೀಡುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಭಾನುವಾರ ನಾಲ್ವಡಿ ಕೃಷ್ಣರಾಜ ಒಡೆರ್ಯ ಕಲಾ ಮಂದಿರದಲ್ಲಿ ನಡೆದ ಕೆ.ಎಸ್.ನರಸಿಂಹಸ್ವಾಮಿ ಸಾಹಿತ್ಯ ಪ್ರಶಸ್ತಿ ಹಾಗೂ ಕಾವ್ಯ ಗಾಯನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕೆ.ಎಸ್.ನರಸಿಂಹಸ್ವಾಮಿ ಅವರ ಮನೆ, ಪು.ತಿ.ನರಸಿಂಹಾಚಾರ್ ಅವರ ಸಮಾಧಿಯನ್ನು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಅಭಿವೃದ್ಧಿ ಚಟುವಟಿಕೆಗೆ ಬೇಕಾದ ಹಣವನ್ನು ಜಿಲ್ಲಾಡಳಿತದಿಂದ ಬಿಡುಗಡೆಗೊಳಿಸಲಾಗುವುದು. ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆಯಾಗದಂತೆ ನರೇಗಾ ಸೇರಿದಂತೆ ವಿವಿಧ ಯೋಜನೆಗಳಿಂದ ಹಣವನ್ನು ಕ್ರೋಢೀಕರಿಸಿ ನೀಡುವುದಾಗಿ ಭರವಸೆ ನೀಡಿದರು.

ಕೆ.ಎಸ್.ನ. ಟ್ರಸ್ಟ್ ಜವಾಬ್ದಾರಿಯನ್ನು ಕಿಕ್ಕೇರಿ ಕೃಷ್ಣಮೂರ್ತಿ ಹಾಗೂ ಪುತಿನ ಟ್ರಸ್ಟ್ ಜವಾಬ್ದಾರಿಯನ್ನು ಪ್ರೊ.ಎಂ.ಕೃಷ್ಣೇಗೌಡರಿಗೆ ವಹಿಸಲಾಗಿದೆ. ಎರಡೂ ಟ್ರಸ್ಟ್‌ನ ಕಾರ್ಯಚಟುವಟಿಕೆಗಳಿಗೆ ಸಹಕಾರಿಯಾಗಿ ನಿಲ್ಲುವಂತೆ ಜಿಲ್ಲಾಡಳಿತಕ್ಕೂ ಸೂಚಿಸಿದ್ದೇನೆ ಎಂದರು.

ನಾಡು ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಅಪರೂಪದ ಸಾಹಿತಿ ಕೆ.ಎಸ್.ನರಸಿಂಹಸ್ವಾಮಿ. ಮಲ್ಲಿಗೆ ಕವಿ ಎಂದೇ ಮನೆ ಮನೆ ಮಾತಾಗಿದ್ದಾರೆ. ಕುವೆಂಪು, ದ.ರಾ.ಬೇಂದ್ರೆ, ಕೆ.ಎಸ್.ನರಸಿಂಹಸ್ವಾಮಿ ಅವರಂತಹ ಮಹಾನ್ ಸಾಹಿತಿಗಳ ದುಡಿಮೆ ನಾಡಿಗೆ, ರಾಷ್ಟ್ರಕ್ಕೆ ಗೌರವ ತಂದುಕೊಟ್ಟಿದೆ. ಇಂತಹ ಸಾಹಿತಿಗಳನ್ನು ಇಂದಿನ ಮಕ್ಕಳಿಗೆ ಪರಿಚಯಿಸುವ ಕೆಲಸವಾಗಬೇಕು. ಅವರ ಸಾಹಿತ್ಯವನ್ನು ಓದುವ ಆಸಕ್ತಿ ಮೂಡಿಸಿ ಅವರಲ್ಲಿದ್ದ ಸಾಹಿತ್ಯ ಶಕ್ತಿಯನ್ನು ಮಕ್ಕಳಲ್ಲಿ ತುಂಬುವ ಕೆಲಸ ಮಾಡಬೇಕು ಎಂದರು.

ಜಗತ್ತಿನ ಯಾವ ದೇಶದಲ್ಲೂ ಇರದ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯ ಶ್ರೀಮಂತ ಪರಂಪರೆ ಭಾರತದ ದೇಶಕ್ಕಿದೆ. ಅದನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವ ಮಹತ್ವದ ಜವಾಬದಾರಿ ನಮ್ಮ ಮೇಲಿದೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಮಂಡ್ಯಕ್ಕೆ ಕೃಷಿ ವಿಶ್ವವಿದ್ಯಾಲಯ ಬಂದಿರುವುದು ಸಂತಸದ ಸಂಗತಿ. ಇದರ ಜೊತೆಯಲ್ಲೇ ಕೃಷಿ ಮ್ಯೂಸಿಯಂ ಸ್ಥಾಪಿಸಿದರೆ ಅದಕ್ಕೆ ಮತ್ತಷ್ಟು ಗರಿ ಮೂಡಲಿದೆ. ಮೈಸೂರು ಭಾಗದ ಕೃಷಿ ಬೆಳೆಗಳು, ಕೃಷಿಕರ ಉಡುಗೆ-ತೊಡುಗೆ, ಆಹಾರ ಪದ್ಧತಿಯನ್ನು ಹೊರಗಿನವರಿಗೆ ಪರಿಚಯಿಸಿದಂತೆ ಆಗುತ್ತದೆ. ಮಂಡ್ಯ ವಿಶ್ವವಿದ್ಯಾಲಯವನ್ನೂ ಉಳಿಸಿಕೊಂಡು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

ಡಾ.ನಾ.ದಾಮೋದರ ಶೆಟ್ಟಿ ಮಾತನಾಡಿ, ಕೆ.ಎಸ್.ನರಸಿಂಹಸ್ವಾಮಿಯವರು ಪ್ರೇಮ ಕವಿಯಾದರೂ ಎಂದಿಗೂ ತಮ್ಮ ಚೌಕಟ್ಟನ್ನು ಮೀರಿ ಕಾವ್ಯ ರಚಿಸಿದವರಲ್ಲ. ಬರವಣಿಗೆಯಲ್ಲಿ ಅವರಂತೆ ನಿಷ್ಠೆಯಿಂದ ಇದ್ದು ಅವರನ್ನು ಪಾಲಿಸಬೇಕು. ನಾನು ಅವರ ಹಾದಿಯಲ್ಲಿಯೇ ಸಾಗುತ್ತೇನೆ ಎಂದರು.

ಗಾಯಕಿ ಸಂಗೀತಾ ಕಟ್ಟಿ ಮಾತನಾಡಿ, ಕೆ.ಎಸ್.ನರಸಿಂಹಸ್ವಾಮಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ. ಇಂತಹ ಗಣ್ಯ ವ್ಯಕ್ತಿಗಳ ಆದರ್ಶವನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಕೊನೆಯಲ್ಲಿ ಕೆ.ಎಸ್.ನರಸಿಂಹಸ್ವಾಮಿ ಟ್ರಸ್ಟ್ ಅಧ್ಯಕ್ಷ ಕಿಕ್ಕೇರಿ ಕೃಷ್ಣಮೂರ್ತಿ ಮಾತನಾಡಿ, ಕೆ.ಎಸ್.ನರಸಿಂಹಸ್ವಾಮಿ ಅವರ ಮನೆಯನ್ನು ಸ್ಮಾರಕ ಮಾಡುವುದು, ಕಿಕ್ಕೇರಿ ಕೆರೆಗೆ ಕೆ.ಎಸ್.ನ. ಸರೋವರ ಎಂದು ನಾಮಕರಣ ಮಾಡುವುದು ಹಾಗೂ ಕೆಎಸ್‌ನ ಬಯಲು ರಂಗ ಮಂದಿರ ನಿರ್ಮಾಣ ಮಾಡಿಕೊಡುವಂತೆ ಸಚಿವರೆದುರು ಬೇಡಿಕೆಯನ್ನಿಟ್ಟರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಪ್ರೊ.ಜಯಪ್ರಕಾಶ್‌ಗೌಡ, ಡಾ.ನಾ.ದಾಮೋದರ ಶೆಟ್ಟಿ ಅವರಿಗೆ ಸಾಹಿತ್ಯ ಪ್ರಶಸ್ತಿ ಹಾಗೂ ಗಾಯಕರಾದ ಸಂಗೀತಾ ಕಟ್ಟಿ, ರಮೇಶ್ ಚಂದ್ರ ಅವರಿಗೆ ಕಾವ್ಯಗಾಯನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಪಿ.ರವಿಕುಮಾರ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮೈಸೂರು ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಡಾ ಅಧ್ಯಕ್ಷ ನಹೀಮ್ ಇತರರಿದ್ದರು.