ನ.24ಕ್ಕೆ ಕೆಸೆಟ್‌: ಜು.22ರಿಂದ ಆ.22ರವರೆಗೆ ಅರ್ಜಿ ಸಲ್ಲಿಕೆ

| Published : Jul 14 2024, 01:35 AM IST

ಸಾರಾಂಶ

ಕಳೆದ ಸಾಲಿನ ಕೆ-ಸೆಟ್‌ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿದ ಬೆನ್ನಲ್ಲೇ 2024ನೇ ಸಾಲಿನ ಪರೀಕ್ಷಾ ಅಧಿಸೂಚನೆಯನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು: ಕಳೆದ ಸಾಲಿನ ಕೆ-ಸೆಟ್‌ನಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿದ ಬೆನ್ನಲ್ಲೇ 2024ನೇ ಸಾಲಿನ ಪರೀಕ್ಷಾ ಅಧಿಸೂಚನೆಯನ್ನು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಬಿಡುಗಡೆ ಮಾಡಿದ್ದಾರೆ. ಆ ಪ್ರಕಾರ ಮುಂದಿನ ನವೆಂಬರ್‌ 24ರಂದು ಕೆಸೆಟ್‌ ನಡೆಯಲಿದೆ.

ಶನಿವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ 2023ನೇ ಸಾಲಿನ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯಲ್ಲಿ (ಕೆಸೆಟ್) ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಚಿವರು ಪ್ರಮಾಣ ಪತ್ರ ವಿತರಿಸಿದರು. ಈ ವೇಳೆ 2024ನೇ ಸಾಲಿನ ಕೆಸೆಟ್‌ ಅಧಿಸೂಚನೆಯನ್ನೂ ಬಿಡುಗಡೆ ಮಾಡಿದರು. ಜುಲೈ 22ರಿಂದ ಆಗಸ್ಟ್ 22ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಗಸ್ಟ್ 26 ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ. ನವೆಂಬರ್ 24ರಂದು ಪರೀಕ್ಷೆ ನಡೆಸುವುದಾಗಿ ಸಚಿವರು ಘೋಷಿಸಿದರು. ಕೆ-ಸೆಟ್ ನಲ್ಲಿ ಅರ್ಹರಾದವರನ್ನು ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಮಾಡಿಕೊಳ್ಳಲು ಸರ್ಕಾರವು ಆದ್ಯತೆ ಮೇರೆಗೆ ಗಮನ ನೀಡಲಿದೆ. ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ನಂತರ ನೇಮಕಾತಿ ಆಗಲಿದೆ ಎಂದು ತಿಳಿಸಿದರು. ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಿದ ಕೆಇಎ ಮತ್ತು ಅದರ ಸಿಬ್ಬಂದಿಯನ್ನು ಸಚಿವರು ಶ್ಲಾಘಿಸಿದರು.ಇದೇ ವೇಳೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಜಿ.ಜಗದೀಶ, ಕೆಸೆಟ್ ಅಧ್ಯಕ್ಷ ಪ್ರೊ. ತಿಮ್ಮೇಗೌಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.