ಕೆಎಸ್ಐಸಿ ಆವರಣದಲ್ಲಿ ಕ್ರೀಡಾಂಗಣ ಪ್ರಸ್ತಾವನೆ ಕೈಬಿಡಲು ಒತ್ತಾಯಿಸಿ ಮೌನ‌ ಮೆರವಣಿಗೆ

| Published : Jun 25 2025, 01:17 AM IST / Updated: Jun 25 2025, 01:18 AM IST

ಸಾರಾಂಶ

ಮುಖ್ಯಮಂತ್ರಿಗಳ‌ ಕ್ಷೇತ್ರದಲ್ಲಿ ಸರ್ಕಾರಿ ಸ್ವಾಮ್ಯಕ್ಕೆ ಸೇರಿದ ರೇಷ್ಮೆ ನೂಲು ತೆಗೆಯುವ ಏಕೈಕ ಕಾರ್ಖಾನೆ

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಪಟ್ಟಣದ ಕೆಎಸ್ಐಸಿ ನೂಲು ತೆಗೆಯುವ ಘಟಕದ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳು ಕೈಬಿಡಬೇಕು ಎಂದು ಒತ್ತಾಯಿಸಿ ಕೆಎಸ್ಐಸಿ ಕಾರ್ಮಿಕರು ಪಟ್ಟಣದಲ್ಲಿ ಮೌನ‌ ಮೆರವಣಿಗೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಕೆಎಸ್ಐಸಿ ಫ್ಯಾಕ್ಟರಿಯಿಂದ ಮೆರವಣಿಗೆಯಲ್ಲಿ ಸಾಗಿದ ನೂರಾರು ಮಂದಿ ಅರೆಗುತ್ತಿಗೆ, ಗುತ್ತಿಗೆ ನೌಕರರು ಖಾಸಗಿ ಬಸ್ ನಿಲ್ದಾಣ, ಕಾಲೇಜು ರಸ್ತೆ ಮೂಲಕ ಸಂಚರಿಸಿ ತಾಲೂಕು ಕಚೇರಿಯಲ್ಲಿ ಜಮಾವಣೆಗೊಂಡರು.

ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದಲ್ಲಿ ಕೆಎಸ್ಐಸಿ ವ್ಯವಸ್ಥಾಪಕ ಉಪ ನಿರ್ದೇಶಕರ ಉಪಸ್ಥಿತಿ ನಡೆದ ಸಭೆಯಲ್ಲಿ ಟಿ. ‌ನರಸೀಪುರ ತಾಲೂಕಿನಲ್ಲಿ ಕ್ರೀಡಾಂಗಣ ನಿರ್ಮಿಸುವ ಕುರಿತು ರೇಷ್ಮೆ ಇಲಾಖೆಯಿಂದ ಕ್ರೀಡಾ ಇಲಾಖೆಗೆ ಭೂಮಿ ಹಸ್ತಾಂತರಿಸಲು ಚರ್ಚೆ ನಡೆದ ಹಿನ್ನೆಲೆಯಲ್ಲಿ ಆತಂಕಗೊಂಡ ನೂಲು ತೆಗೆಯುವ ಘಟಕದ ಕಾರ್ಮಿಕರು, ಕೆಎಸ್ಐಸಿ ನೂಲು ತೆಗೆಯುವ ಘಟಕದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಯನ್ನು ಕೈ ಬಿಡುವಂತೆ ಒತ್ತಾಯಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಫ್ಯಾಕ್ಟರಿ ಕಾರ್ಮಿಕ ಸಂಘಟನೆಯ ಮುಖಂಡ ಮಂಜಪ್ಪ ಮಾತನಾಡಿ, ಮುಖ್ಯಮಂತ್ರಿಗಳ‌ ಕ್ಷೇತ್ರದಲ್ಲಿ ಸರ್ಕಾರಿ ಸ್ವಾಮ್ಯಕ್ಕೆ ಸೇರಿದ ರೇಷ್ಮೆ ನೂಲು ತೆಗೆಯುವ ಏಕೈಕ ಕಾರ್ಖಾನೆಯಾಗಿದ್ದು, ಈ ಕಾರ್ಖಾನೆಯನ್ನು ಸುತ್ತಮುತ್ತಲಿನ ಹಳ್ಳಿಯ 250 ಹೆಚ್ಚು ಕುಟುಂಬಗಳು ಅವಲಂಭಿಸಿವೆ. ಆದರೆ ಈಗ ಸಂಸ್ಥೆಯ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದರಿಂದ ಕಾರ್ಮಿಕರಿಗೆ ತೊಂದರೆ ಎದುರಾಗಲಿದೆ ಎಂದರು.

ಸಂಸ್ಥೆಯ ಆವರಣದಲ್ಲಿ ಕೆಲ ಕಟ್ಟಡಗಳನ್ನು ಹೊರತುಪಡಿಸಿ ಸಂಸ್ಥೆಯನ್ನು ವಿಸ್ತಾರಗೊಳಿಸುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ರೀಲಿಂಗ್ ಘಟಕಗಳು ಮತ್ತು ಬಾಯ್ಲರ್ ಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿದೆ. ಇದರಿಂದ ಸ್ಥಳೀಯವಾಗಿ ಹೆಚ್ಚುವರಿಯಾಗಿ ಸುಮಾರು 300 ಜನರಿಗೆ ಉದ್ಯೋಗಾವಕಾಶ ದೊರಕಲಿದೆ. ಕ್ರೀಡಾಂಗಣ ನಿರ್ಮಾಣ ಮಾಡುವ ಪ್ರಸ್ತಾವನೆಯು ಬಡ ಕಾರ್ಮಿಕರ ಭವಿಷ್ಯದ ಮೇಲೆ ಬರೆ ಎಳೆದಂತಾಗುತ್ತದೆ. ಹೀಗಾಗಿ, ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳು ಕೈಬಿಟ್ಟು ಕಾರ್ಖಾನೆಯನ್ನು ಮೇಲ್ದರ್ಜೆಗೇರಿಸಿ ನಿರುದ್ಯೋಗಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಕ್ಕೆ ದಾರಿ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.

ಕಾರ್ಮಿಕ ಸಂಘಟನೆಯ ಮುಖಂಡರಾದ ಪ್ರದೀಪ್, ಪರಶಿವಮೂರ್ತಿ, ಪುಟ್ಟಣ್ಣ, ಬಸವರಾಜ ಅರಸ್, ಪವನ್ ಗೌಡ, ಸಾಗರ್ ಗೌಡ, ಶಂಕರ, ಪ್ರಸಾದ್, ಸಂದೀಪ್, ಸಿದ್ದರಾಜು, ರಾಜೇಶ್, ಶಾಂತರಾಜು, ಪ್ರಸಾದ್ ಮೊದಲಾದವರು ಇದ್ದರು.