ಸಾರಾಂಶ
ಕರ್ನಾಟಕ ಸ್ಪೇಟ್ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಎಸ್‌ಸಿಎ) ವತಿಯಿಂದ ಬೆಂಗಳೂರಿನ ಸೋಲದೇವನಹಳ್ಳಿಯ ಆಚಾರ್ಯ ಕ್ರೀಡಾಂಗಣದಲ್ಲಿ ನ.1ರಿಂದ ಡಿ.1ರ ವರೆಗೆ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ (ಕೆಎಸ್‌ಪಿಎಲ್) ನಡೆಯಲಿದ್ದು, ಉಡುಪಿ ಜಿಲ್ಲೆಯ ತಂಡ ‘ಉಡುಪಿ ವಾರಿಯರ್ಸ್’ ಭಾಗವಹಿಸಲಿದೆ
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ಸ್ಪೇಟ್ ಸಾಫ್ಟ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಎಸ್‌ಸಿಎ) ವತಿಯಿಂದ ಬೆಂಗಳೂರಿನ ಸೋಲದೇವನಹಳ್ಳಿಯ ಆಚಾರ್ಯ ಕ್ರೀಡಾಂಗಣದಲ್ಲಿ ನ.1ರಿಂದ ಡಿ.1ರ ವರೆಗೆ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ (ಕೆಎಸ್‌ಪಿಎಲ್) ನಡೆಯಲಿದ್ದು, ಉಡುಪಿ ಜಿಲ್ಲೆಯ ತಂಡ ‘ಉಡುಪಿ ವಾರಿಯರ್ಸ್’ ಭಾಗವಹಿಸಲಿದೆ. ತಂಡ ತೀವ್ರ ಅಭ್ಯಾಸದಲ್ಲಿ ತೊಡಗಿಕೊಂಡಿದೆ ಎಂದು ತಂಡದ ಮಾಲಕ ಸಂತೋಷ್ ಕುಮಾರ್ ಕಟಪಾಡಿ ತಿಳಿಸಿದ್ದಾರೆ.ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ರಾಜ್ಯದ ಒಟ್ಟು 31 ಜಿಲ್ಲೆಗಳಿಂದ 32 ತಂಡಗಳು ಭಾಗವಹಿಸಲಿವೆ. ಲೀಗ್ ಮಾದರಿಯಲ್ಲಿ 9 ಓವರಿನ ಪಂದ್ಯಾಟಗಳು ನಡೆಯಲಿವೆ. ಉಡುಪಿ ತಂಡಕ್ಕೆ 18 ಮಂದಿ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ರಕ್ಷಿತ್ ಪೂಜಾರಿ ತಂಡದ ನಾಯಕರಾಗಿರುತ್ತಾರೆ ಎಂದರು.ಗ್ರೂಪ್ 7ರಲ್ಲಿರುವ ಉಡುಪಿ ವಾರಿಯರ್ಸ್‌ನ ಮೊದಲ ಪಂದ್ಯ ಉತ್ತರಕನ್ನಡ ಜಿಲ್ಲೆಯ ಯುಕೆ ಫೈಯರ್ಸ್ ಜೊತೆ ನ.22ರಂದು ಸಂಜೆ 5 ಗಂಟೆಗೆ ನಡೆಯಲಿದೆ. ನಂತರ 23ರಂದು 5 ಗಂಟೆಗೆ ಚಿಕ್ಕಮಗಳೂರು ಕ್ರಿಕೆಟ್ ಕ್ಲಬ್ ಮತ್ತು ಅದೇ ದಿನ ಸಂಜೆ 7.30ಕ್ಕೆ ಮಂಗಳೂರು ಪ್ಯಾಂಥರ್ ಜೊತೆ ಉಡುಪಿ ವಾರಿಯರ್ಸ್ ಸೆಣೆಸಲಿದ್ದಾರೆ. ಲೀಗ್ ಹಂತದಲ್ಲಿ ಗೆದ್ದ ತಂಡಗಳು ಸೂಪರ್ 16, ನಂತರ ಸೂಪರ್ 8ಕ್ಕೆ ಪ್ರವೇಶ ಪಡೆಯಲಿದೆ. ಡಿ.1ರಂದು ಫೈನಲ್ ಪಂದ್ಯ ನಡೆಯಲಿದೆ. ಒಟ್ಟು 75 ಲಕ್ಷ ರು.ಗಳ ನಗದು ಬಹುಮಾನಗಳಿವೆ ಎಂದವರು ಹೇಳಿದರು.
ಗ್ರಾಮೀಣ ಪ್ರದೇಶದ ಕ್ರಿಕೆಟ್ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿ, ಅವರನ್ನು ಇನ್ನೂ ಹೆಚ್ಚಿನ ಸಾಧನೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಕೆಎಸ್‌ಪಿಎಲ್ ನಡೆಯುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ತಂಡದ ಇನ್ನೊಬ್ಬ ಮಾಲಕ ಶಿವರಾಮಕೃಷ್ಣನ್, ಲೀಗ್‌ನ ಸ್ಟೇಟ್ ಐಕಾನ್ ಸಚಿನ್ ಕೋಟೇಶ್ವರ, ಕೆಎಸ್‌ಎಸ್‌ಸಿಎ ಮೀಡಿಯಾ ಸಂಯೋಜಕರಾದ ಅರ್ಪಿತ್ ಗೌಡ ಮತ್ತು ರಕ್ಷಿತಾ ಉಪಸ್ಥಿತರಿದ್ದರು.