ಸಾರಾಂಶ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಟೆಂಡರ್ ಅವಧಿ ಮುಗಿದಿದ್ದರೂ ಖಾಲಿ ಮಾಡದೇ ಬಾಡಿಗೆ ಕಟ್ಟದ ಹಿನ್ನೆಲೆ ಡಿಪೋ ವ್ಯವಸ್ಥಾಪಕರು ಕೆಎಸ್‌ಆರ್‌ಟಿಸಿ ಕ್ಯಾಂಟೀನ್ ಬಂದ್ ಮಾಡಿಸಿದ ಘಟನೆ ಬುಧವಾರ ಪಟ್ಟಣದ ಹೊಸ ಬಸ್ ನಿಲ್ದಾಣದಲ್ಲಿ ಜರುಗಿದೆ.ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ಶಿವಸಾಗರ ಕ್ಯಾಂಟೀನ್‌ಗೆ ಟೆಂಡರ್ ಅವಧಿ ಡಿ. ೧೨ಕ್ಕೆ ಕೊನೆಯಾಗಿದೆ ಹಾಗೂ 3 ತಿಂಗಳ ಬಾಡಿಗೆ ಹಣವನ್ನು ಪಾವತಿ ಮಾಡದಿರುವುದರಿಂದ ಸ್ಥಳೀಯ ಡಿಪೋ ವ್ಯವಸ್ಥಾಪಕರು ಇಲಾಖೆ ನಿಯಾಮಾನುಸಾರ ಅಂಗಡಿ ಮಾಲೀಕನಿಗೆ ಕ್ಯಾಂಟೀನ್ ನಡೆಸದೆ ಖಾಲಿ ಮಾಡಲು ಸೂಚಿಸಿದ್ದರು. ಆದರೂ ಯಥಾಪ್ರಕಾರ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದ್ದು, ಈ ಸಂಬಂಧ ಬುಧವಾರ ಬೆಳಗ್ಗೆ ಡಿಪೋ ವ್ಯವಸ್ಥಾಪಕಿ ಮಂಜುಳಾ ಅವರು ತಮ್ಮ ಸಿಬ್ಬಂದಿ ಜತೆ ಬಸ್ ನಿಲ್ದಾಣಕ್ಕೆ ಆಗಮಿಸಿ, ಕ್ಯಾಂಟೀನ್‌ನಲ್ಲಿರುವ ಗ್ರಾಹಕರನ್ನು ಹೊರಗೆ ಕಳುಹಿಸಿ ಮುಖ್ಯ ಬಾಗಿಲಿಗೆ ಬೀಗ ಜಡಿದು ತೆರಳಿದರು.
ದಿಢೀರ್ ಬೆಳವಣಿಗೆಯಿಂದ ಗಾಬರಿಗೊಂಡ ಕ್ಯಾಂಟೀನ್ ಮಾಲೀಕ ಮುರುಳಿಧರ ಪೊಲೀಸರಿಗೆ ಕರೆ ಮಾಡಿ ಬೀಗ ಜಡಿದಿರುವ ಬಗ್ಗೆ ಮಾಹಿತಿ ನೀಡಿದರು. ಕೂಡಲೇ ಎಎಸ್‌ಐ ನಿಂಗಪ್ಪ ಹಾಗೂ ಸಿಬ್ಬಂದಿ ನಿಲ್ದಾಣದಲ್ಲಿರುವ ಕ್ಯಾಂಟೀನ್‌ಗೆ ದೌಡಾಯಿಸಿ ಬೀಗ ತೆರವುಗೊಳಿಸಿ ಠಾಣೆಗೆ ಬರಲು ಸೂಚಿಸಿದರು. ಪೊಲೀಸ್ ಠಾಣೆಯಲ್ಲಿ ಕ್ಯಾಂಟೀನ್ ಮಾಲೀಕ ಹಾಗೂ ಸಾರಿಗೆ ವ್ಯವಸ್ಥಾಪಕಿ, ಪಿಎಸ್‌ಐ ಶಂಭುಲಿಂಗ ಸಿ. ಹಿರೇಮಠ್ ಚರ್ಚಿಸಿದರೂ ಸಮಸ್ಯೆ ಬಗೆಹರಿಯದ ಕಾರಣ ವಾಪಸ್ಸಾದರು.ಈ ಬಗ್ಗೆ ಕ್ಯಾಂಟೀನ್ ಮಾಲೀಕ ಪ್ರತಿಕ್ರಿಯಿಸಿ, ಸಾರಿಗೆ ಅಧಿಕಾರಿಗಳಿಗೆ ಮಳಿಗೆಯಲ್ಲಿರುವ ವಸ್ತುಗಳನ್ನು ಖಾಲಿ ಮಾಡಲು ಸಮಯ ಕೇಳಿದ್ದೆ. ಆದರೆ ಮಾನವೀಯತೆಯನ್ನು ಮರೆತು ಏಕಾಏಕಿ ಬಂದು ಗ್ರಾಹಕರನ್ನು ಹೊರಗೆ ಕಳುಹಿಸಿ, ಬಾಗಿಲು ಬಂದ್ ಮಾಡಿದ್ದಾರೆ. ಈ ಕುರಿತು ಮೇಲಧಿಕಾರಿಗಳಿಗೆ ದೂರು ನೀಡುವುದಾಗಿ ತಿಳಿಸಿದರು.
ಈ ಕುರಿತು ಸಾರಿಗೆ ವ್ಯವಸ್ಥಾಪಕಿ ಮಂಜುಳಾ ಪ್ರತಿಕ್ರಿಯಿಸಿ, ಕ್ಯಾಂಟೀನ್ ಮಾಲೀಕರು ಸಾರಿಗೆ ಇಲಾಖೆ ನಿಯಮಾನುಸಾರ ಸರಿಯಾಗಿ ಬಾಡಿಗೆ ಕಟ್ಟಿರುವುದಿಲ್ಲ. ಅಲ್ಲದೇ ಹೋಟೆಲ್‌ನಲ್ಲಿ ಸ್ವಚ್ಛತೆ ಇಲ್ಲದೆ, ಶುದ್ಧ ನೀರು ಸಹ ಬಳಕೆ ಮಾಡದಿರುವುದು ಪ್ರಯಾಣಿಕರಿಂದ ದೂರು ಬಂದಿದ್ದವು. ಬಾಡಿಗೆ ಕಟ್ಟುವಂತೆ ಮತ್ತು ಟೆಂಡರ್ ಅವಧಿ ಡಿ. 12ಕ್ಕೆ ಕೊನೆಯಾಗಲಿದ್ದು, ಖಾಲಿ ಮಾಡುವಂತೆ ಅವಧಿಗೂ ಮುನ್ನವೆ ತಿಳಿಸಿದ್ದರೂ ಕ್ಯಾಂಟೀನ್ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ನಿಯಾಮಾನುಸಾರ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ಯಾಂಟೀನ್ ಬಂದ್ ಮಾಡಿಸಿದ್ದೇವೆ ಎಂದರು.ಈ ಬಗ್ಗೆ ಸಾರಿಗೆ ಜಿಲ್ಲಾ ವ್ಯವಸ್ಥಾಪಕ ಜಗದೀಶ ಪ್ರತಿಕ್ರಿಯೆಸಿ, ಇಲಾಖೆಯ ನಿಯಾಮಾನುಸಾರ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳ ಕುರಿತು ಆಗಾಗ ಟೆಂಡರ್ ಕರೆಯಲಾಗುತ್ತದೆ. ಟೆಂಡರ್ ಅವಧಿ ಮುಗಿದ ಬಳಿಕ ಹೊಸದಾಗಿ ಟೆಂಡರ್ ಕರೆಯಲಾಗುತ್ತದೆ. ಆ ಪ್ರಕಾರ ಹರಪನಹಳ್ಳಿ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆ ಅವಧಿ ಡಿ. 12ಕ್ಕೆ ಮುಗಿದಿದ್ದು, ಹೊಸ ಟೆಂಡರ್‌ದಾರರಿಗೆ ಅದನ್ನು ನೀಡಬೇಕಾಗಿರುವ ಹಿನ್ನೆಲೆಯಲ್ಲಿ ಈಗಿರುವ ಮಾಲೀಕರಿಗೆ ಮಳಿಗೆಯನ್ನು ಖಾಲಿ ಮಾಡುವಂತೆ ಸೂಚಿಸಿದರು ಸಹ ಹೋಟೆಲ್ ವ್ಯವಹಾರ ನಡೆಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯ ಅಧಿಕಾರಿಗಳಿಗೆ ಬಂದ್ ಮಾಡಲು ತಿಳಿಸಿದ್ದೇವೆ ಎಂದರು.
ಚಿತ್ರ13ಎಚ್ ಆರ್ ಪಿ 1