ಕೆಎಸ್ಆರ್‌ಟಿಸಿ ನಿಗಮ ವಿದ್ಯಾರ್ಥಿ ಸ್ನೇಹಿ ಸಾರಿಗೆ ವ್ಯವಸ್ಥೆ ಮಾಡಬೇಕು: ಡಾ.ತಿಪ್ಪೇಸ್ವಾಮಿ

| Published : Feb 26 2025, 01:05 AM IST

ಕೆಎಸ್ಆರ್‌ಟಿಸಿ ನಿಗಮ ವಿದ್ಯಾರ್ಥಿ ಸ್ನೇಹಿ ಸಾರಿಗೆ ವ್ಯವಸ್ಥೆ ಮಾಡಬೇಕು: ಡಾ.ತಿಪ್ಪೇಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಒಳಕಾಡು ಸರ್ಕಾರಿ ಸಯುಕ್ತ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಡುಪಿ ಹಾಗೂ ಕುಂದಾಪುರ ವಿಭಾಗದ ಅಧಿಕಾರಿಗಳೊಂದಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಮಕ್ಕಳಿಗೆ ಶಿಕ್ಷಣ ಮೂಲಭೂತ ಹಕ್ಕು. ಕೇವಲ ಹಕ್ಕುಗಳನ್ನು ನೀಡಿದರೆ ಸಾಲದು, ಅದನ್ನು ಪಡೆಯಲು ಅಗತ್ಯವಾದ ಪೂರಕ ವ್ಯವಸ್ಥೆಗಳನ್ನು ಕಲ್ಪಿಸಿದಾಗ ಮಾತ್ರ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಶಿಕ್ಷಣ ಪಡೆದುಕೊಳ್ಳಲು ಸಾರಿಗೆ ವ್ಯವಸ್ಥೆ ಬಹು ಮುಖ್ಯ ಪಾತ್ರವಹಿಸುತ್ತದೆ. ಆದರೆ ಇತ್ತೀಚೆಗೆ ಸಾರಿಗೆ ಸಂಬಂಧಿತ ಸಮಸ್ಯೆಗಳನ್ನು ಮಕ್ಕಳು ಎದುರಿಸುತ್ತಿದ್ದು, ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿದ್ಯಾರ್ಥಿ ಸ್ನೇಹಿ ಸಾರಿಗೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಹೇಳಿದರು.ಅವರು ಇತ್ತೀಚೆಗೆ ನಗರದ ಒಳಕಾಡು ಸರ್ಕಾರಿ ಸಯುಕ್ತ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಉಡುಪಿ ಹಾಗೂ ಕುಂದಾಪುರ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ ಯಾವುದೇ ಸಾರಿಗೆ ಸಂಬಂಧಿತ ವಿಷಯಕ್ಕೆ ಮನವಿಗಳು ಬಂದಲ್ಲಿ ಶೀಘ್ರದಲ್ಲಿ ಮನವಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.ವಿದ್ಯಾರ್ಥಿಗಳು ಹೆಚ್ಚಿಗೆ ಸೇರುವ ಜಂಕ್ಷನ್‌ಗಳಲ್ಲಿ ಸಾರಿಗೆ ಸೇವೆಗಳ ಮೇಲ್ವಿಚಾರಣೆಗೆ ಸಂಚಾರ ನಿಯಂತ್ರಕರು ಅಥವಾ ಮೇಲ್ವಿಚಾರಕರನ್ನು ತಪ್ಪದೇ ನಿಯೋಜಿಸಿ, ಸುಗಮ ಕಾರ್ಯಾಚರಣೆ ಬಗ್ಗೆ ನಿಗಾ ವಹಿಸಬೇಕು. ತಮ್ಮ ವಿಭಾಗದ ಎಲ್ಲಾ ಚಾಲನಾ ಸಿಬ್ಬಂದಿಗೆ ವಿದ್ಯಾರ್ಥಿಗಳು ಬಸ್‌ನಲ್ಲಿ ಪ್ರಯಾಣಿಸಲು ಅನುವಾಗಲು ನಿಗದಿತ ಬಸ್ ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಅವರನ್ನು ಹತ್ತಿಸಿ ಇಳಿಸಿಕೊಂಡು ಮುಂದೆ ಹೋಗುವುದರ ಜೊತೆಗೆ ವಿದ್ಯಾರ್ಥಿಗಳ ಜೊತೆಗೆ ಸೌಜನ್ಯಯುತವಾಗಿ ವರ್ತಿಸುವಂತೆ ತಿಳುವಳಿಕೆ ನೀಡಬೇಕು ಎಂದರು.ಬಾಲಾ ನ್ಯಾಯ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆ ಬಗ್ಗೆ ನಿಗಮದ ಅಧಿಕಾರಿ ಹಾಗೂ ಸಿಬ್ಬಂದಿಗೆ ತರಬೇತಿ ನೀಡಬೇಕು. ಪ್ರತೀ ಬಸ್ ನಿಲ್ದಾಣದಲ್ಲಿ ಹಾಗೂ ಬಸ್‌ಗಳಲ್ಲಿ ಮಕ್ಕಳ ಸಹಾಯವಾಣಿಯನ್ನು ಕಡ್ಡಾಯವಾಗಿ ಪ್ರದರ್ಶನ ಮಾಡಬೇಕು. ಅಗತ್ಯವಿದ್ದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಕಾರವನ್ನು ಪಡೆದು ಜಿಲ್ಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಕ್ಕಳ ಸ್ನೇಹಿಯಾದ ಸಾರಿಗೆ ಸೇವೆಯನ್ನು ನೀಡಬೇಕು ಎಂದು ಹೇಳಿದರು.ಸಭೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಸಹಾಯಕ ಸಂಚಾರ ನಿರೀಕ್ಷಕ ರವೀಂದ್ರ, ಉಡುಪಿಯ ಸಂಚಾರ ನಿಯಂತ್ರಕರಾದ ದಿನೇಶ ಸಿ.ಕೆ., ಮುತ್ತಪ್ಪ, ಗಣಪತಿ ಪ್ರಭು ಹಾಗೂ ಅರುಣ್ ಕುಮಾರ್, ಘಟಕ ವ್ಯವಸ್ಥಾಪಕ ಅಶೋಕ ಹೆಗಡೆ, ಕುಂದಾಪುರದ ಸಂಚಾರ ನಿಯಂತ್ರಕರಾದ ಯಾದವ, ಶಂಕ್ರಪ್ಪ ದಾನಣ್ಣವರ ಹಾಗೂ ವಿಷ್ಣು ಪಟಗಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.