ಸಾರಾಂಶ
ಚಾಮರಾಜನಗರದಲ್ಲಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಘಟಕ ಅಧ್ಯಕ್ಷ ನವೀನ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೆಎಸ್‌ಆರ್‌ಟಿಸಿಯಲ್ಲಿ ಹೊರಗುತ್ತಿಗೆ ಚಾಲಕ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ತನಿಖೆ ನಡೆಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಆಗ್ರಹಿಸಿದೆ ಎಂದು ಕರವೇ ತಾಲೂಕು ಘಟಕ ಅಧ್ಯಕ್ಷ ನವೀನ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೆಎಸ್‌ಆರ್‌ಟಿಸಿಯಲ್ಲಿ ಹೊರಗುತ್ತಿಗೆ ಚಾಲಕ ನೇಮಕಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಪನ್ನಘ ಎಂಟರ್ ಪ್ರೈಸಸ್ ಹಾಗೂ ಡಿಪೋ ಮ್ಯಾನೇಜರ್ ಶಾಮೀಲಾಗಿದ್ದು, ಮಳವಳ್ಳಿಯಲ್ಲಿರುವ ಬಸ್ ಚಾಲಕ ತರಬೇತಿ ಕೇಂದ್ರದಲ್ಲಿ ಫೇಲ್ ಆಗಿರುವ ಅಭ್ಯರ್ಥಿಗಳಿಗೂ ₹20 ಸಾವಿರ, ₹30 ಸಾವಿರ ಹಣ ಪಡೆದು ಹೊರಗುತ್ತಿಗೆ ಚಾಲಕ ಹುದ್ದೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಅನುಭವ ಕೊರತೆಯಿಂದ ಹೊರಗುತ್ತಿಗೆ ಚಾಲಕರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿದೆ. ಜನರ ಪ್ರಾಣದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ವಾಹನ ಚಾಲಕ ತರಬೇತಿ ಪಾಸಾಗಿರುವ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ತನಿಖೆ ನಡೆಸಿ, ಚಾಲಕ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರ ವಿರುದ್ಧ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು, ಏಜೆನ್ಸಿ ವಿರುದ್ಧ ಕ್ರಮಕೈಗೊಳ್ಳಬೇಕು. ಅರ್ಹತೆ ಉಳ್ಳುವರಿಗೆ ಚಾಲಕರ ನೇಮಕಾತಿಯಲ್ಲಿ ಅವಕಾಶ ಮಾಡಬೇಕು ಇಲ್ಲದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಅರ್ಜುನ್, ಉಪಾಧ್ಯಕ್ಷ ಅವಿನಾಶ್, ರಾಮಸಮುದ್ರ ಬಾಬು, ಕಾರ್ಮಿಕ ಘಟಕದ ಅಧ್ಯಕ್ಷ ಹರೀಶ್ ಹಾಜರಿದ್ದರು.