ಸಾರಾಂಶ
ನಮ್ಮದು ನಿಜವಾದ ಕೆಎಸ್ಸಾರ್ಟಿಸಿ ಎಂದಿದ್ದ ಕೇರಳ. ಹೆಸರು ಬಳಕೆಗೆ ಅಡ್ಡಿಯಿಲ್ಲ: ಮದ್ರಾಸ್ ಹೈಕೋರ್ಟ್.
ಏನಿದು ವಿವಾದ?- ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹೆಸರೂ ಕೆಎಸ್‌ಆರ್‌ಟಿಸಿ- ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೆಎಸ್‌ಆರ್‌ಟಿಸಿ ಹೆಸರು ಬಳಸುವುದರ ವಿರುದ್ಧ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಗೆ ಅರ್ಜಿ ಸಲ್ಲಿಸಿದ್ದ ಕೇರಳ ಸಂಸ್ಥೆ- ಅರ್ಜಿ ವಿಚಾರಣೆಯಲ್ಲಿರುವಾಗ ಬೌದ್ಧಿಕ ಆಸ್ತಿ ಮಂಡಳಿಯೇ ರದ್ದು- ಹೀಗಾಗಿ ಮದ್ರಾಸ್ ಹೈಕೋರ್ಟ್‌ಗೆ ವರ್ಗಾವಣೆಯಾಗಿದ್ದ ಅರ್ಜಿ- ಇಬ್ಬರೂ ಕೆಎಸ್‌ಆರ್‌ಟಿಸಿ ಹೆಸರು ಬಳಸಬಹುದು: ಹೈಕೋರ್ಟ್-----ಕನ್ನಡಪ್ರಭ ವಾರ್ತೆ ಬೆಂಗಳೂರು
‘ಕೆಎಸ್‌ಆರ್‌ಟಿಸಿ’ ಹೆಸರು ಬಳಕೆ ವಿವಾದದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಜಯ ದೊರೆತಿದ್ದು, ಕೆಎಸ್‌ಆರ್‌ಟಿಸಿ ಹೆಸರು ಬಳಕೆಗೆ ಆಕ್ಷೇಪ ವ್ಯಕ್ತಪಡಿಸಿ ಕೇರಳ ರಸ್ತೆ ಸಾರಿಗೆ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ‘ಕೆಎಸ್‌ಆರ್‌ಟಿಸಿ’ ಎಂಬ ಸಂಕ್ಷಿಪ್ತ ಹೆಸರು ಬಳಸುತ್ತಿದ್ದು, ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 2015ರಲ್ಲಿ ಚೆನ್ನೈನ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯಲ್ಲಿ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ‘ಕೆಎಸ್‌ಆರ್‌ಟಿಸಿ’ ಎಂದು ಬಳಸುತ್ತಿದೆ. ಕರ್ನಾಟಕದ ಸಾರಿಗೆ ನಿಗಮವೂ ಕೆಎಸ್‌ಆರ್‌ಟಿಸಿ ಎಂದು ಬಳಸುತ್ತಿದೆ. ಆದರೆ, ಕೆಎಸ್‌ಆರ್‌ಟಿಸಿ ಎಂಬ ಹೆಸರು ಬಳಸುವುದಕ್ಕೆ ಕೇರಳ ಆರ್‌ಟಿಸಿಗೆ ಮಾತ್ರ ಅವಕಾಶವಿದೆ. ಹೀಗಾಗಿ ಕರ್ನಾಟಕ ಸಾರಿಗೆ ನಿಗಮಕ್ಕೆ ಕೆಎಸ್‌ಆರ್‌ಟಿಸಿ ಎಂದು ಬಳಸದಂತೆ ಸೂಚಿಸುವಂತೆ ಕೋರಿತ್ತು.ಈ ಅರ್ಜಿ ವಿಚಾರಣೆಯಲ್ಲಿರುವಾಗಲೇ ಕೇಂದ್ರ ಸರ್ಕಾರವು ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಯನ್ನು ರದ್ದು ಮಾಡಿತ್ತು. ಹೀಗಾಗಿ 2023ರಲ್ಲಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್, ಟ್ರೇಡ್ ಮಾರ್ಕ್ ಆ್ಯಕ್ಟ್‌ನ ಸೆಕ್ಷನ್ 12ರಲ್ಲಿ ಒಂದೇ ಮಾದರಿಯ ಸೇವೆಗೆ ಒಂದಕ್ಕಿಂತ ಹೆಚ್ಚಿನ ಹೆಸರು ನೋಂದಣಿ ಮಾಡಲು ಅವಕಾಶವಿದೆ. ಕೇರಳ ಮತ್ತು ಕರ್ನಾಟಕ ಒಂದೇ ಮಾದರಿಯ ಸೇವೆ ನೀಡುತ್ತಿರುವುದರಿಂದ ಟ್ರೇಡ್ ಮಾರ್ಕ್ ಆ್ಯಕ್ಟ್‌ನ ಸೆಕ್ಷನ್ 12ರ ಅನ್ವಯ ಎರಡೂ ಸಂಸ್ಥೆಗಳು ಕೆಎಸ್‌ಆರ್‌ಟಿಸಿ ಹೆಸರು ಬಳಕೆ ಮಾಡಬಹುದಾಗಿದೆ ಎಂದು ಆದೇಶಿಸಿ ಕೇರಳ ಸಾರಿಗೆ ಸಂಸ್ಥೆಯ ಅರ್ಜಿಯನ್ನು ವಜಾಗೊಳಿಸಿದೆ.