ಸಾರಾಂಶ
ರಾಜ್ಯ ರಸ್ತೆ ಸಾರಿಗೆ ನಿಗಮ ಅರಕಲಗೂಡು ಡಿಪೋದಿಂದ ಮಾಗಲು, ಅಂಕನಹಳ್ಳಿ ಮೂಲಕ ಮನೆಹಳ್ಳಿ ಮಠಕ್ಕೆ ಬರುವ ಕೆ.ಎಸ್ ಆರ್.ಟಿ.ಸಿ. ನೂತನ ಬಸ್ ಮಾರ್ಗಕ್ಕೆ ಮಠದ ಆವರಣದಲ್ಲಿ ತಪೋಕ್ಷೇತ್ರ ಮನೇಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಗ್ರಾಮೀಣ ಪ್ರದೇಶಗಳಿಗೆ ಅಗತ್ಯ ಸಾರಿಗೆ ಸೌಲಭ್ಯ ದೊರಕುವಂತಾಗಬೇಕು ಎಂದು ತಪೋಕ್ಷೇತ್ರ ಮನೇಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ.ರಾಜ್ಯ ರಸ್ತೆ ಸಾರಿಗೆ ನಿಗಮ ಅರಕಲಗೂಡು ಡಿಪೋದಿಂದ ಮಾಗಲು, ಅಂಕನಹಳ್ಳಿ ಮೂಲಕ ಮನೆಹಳ್ಳಿ ಮಠಕ್ಕೆ ಬರುವ ಕೆ.ಎಸ್ ಆರ್.ಟಿ.ಸಿ. ನೂತನ ಬಸ್ ಮಾರ್ಗಕ್ಕೆ ಮಠದ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಕಳೆದ ಹಲವು ವರ್ಷಗಳಿಂದ ಈ ಭಾಗಕ್ಕೆ ಸರ್ಕಾರಿ ಬಸ್ ಬೇಡಿಕೆ ಇತ್ತು. ಇಲ್ಲಿನ ವಿದ್ಯಾರ್ಥಿಗಳು, ಗ್ರಾಮಸ್ಥರು ನಗರ ಪ್ರದೇಶಗಳಿಗೆ ತೆರಳಲು ಪರದಾಡುತ್ತಿದ್ದರು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಸಚಿವರು ಇಂದಿನಿಂದ ಬಸ್ ಸೌಲಭ್ಯ ಕಲ್ಪಿಸಿದ್ದಾರೆ ಎಂದರು.ಬೆಳಗ್ಗೆ 8.30ಕ್ಕೆ ಅರಕಲಗೂಡಿನಿಂದ ಹೊರಟು ಮಾಗಲು, ಅಂಕನಹಳ್ಳಿ ಮೂಲಕ ಶನಿವಾರಸಂತೆ ನಂತರ ಅರಕಲಗೂಡಿಗೆ ತೆರಳಲಿದೆ. ಸಂಜೆ 4 ಗಂಟೆಗೆ ಮತ್ತೊಂದು ಬಸ್ ಇದೇ ಮಾರ್ಗವಾಗಿ ಸಂಚರಿಸಲಿದೆ ಎಂದರು.
ಹಿಂದುಳಿದಿರುವ ಅಂಕನಳ್ಳಿ, ಮನೇಹಳ್ಳಿಯಂತ ಗ್ರಾಮಗಳಿಗೆ ಸರ್ಕಾರಿ ಬಸ್ಸ್ ಸೌಲಭ್ಯ ಮರೀಚಿಕೆಯಾಗಿತ್ತು. ಮಠ ಹಾಗೂ ಸ್ವಾಮೀಜಿಗಳ ಪ್ರಯತ್ನದಿಂದ ಸರ್ಕಾರಿ ಬಸ್ ಓಡಾಡುವಂತಾಗಿದ್ದು ಶಾಲಾ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ಅನುಕೂಲವಾಗಿದೆ ಎಂದು ಗ್ರಾಮಸ್ಥರು ಹರ್ಷ ವ್ಯಕ್ತ ಪಡಿಸಿದರು.ಮನೆ ಹಳ್ಳಿ ಮಠದ ಸಮಿತಿ ಪದಾಧಿಕಾರಿಗಳಾದ ಮಂಜುನಾಥ್, ಚಂದ್ರಶೇಖರ್, ಸೋಮಣ್ಣ, ಪ್ರಮುಖರಾದ ಬಸಪ್ಪ, ರಾಜಣ್ಣ, ಮಲ್ಲೇಶ್, ಬಿ. ಪಿ.ಬಸಪ್ಪ, ಚಂದ್ರಶೇಖರ್, ಧರ್ಮಪ್ಪ, ಶೈಲಮ್ಮ, ಶೀಲಮ್ಮ, ಉಮಾ, ಪುಷ್ಪ, ಕಮಲ ಮತ್ತಿತರರು ಹಾಜರಿದ್ದರು.
ಅರ್ಚಕ ಮಲ್ಲೇಶಪ್ಪ ಹಾಗು ಚಿಕ್ಕ ವೀರರಾಜು ಪೌರೋಹಿತ್ವದಲ್ಲಿ ಕ್ಷೇತ್ರದಲ್ಲಿ ವಿಶೇಷ ಪೂಜೆ ನಡೆಯಿತು.