ಕೆ.ಟಿ. ವೀರಪ್ಪ ಮಂದಹಾಸ ಮೂಲಕ ಜನಸ್ನೇಹಿಯಾಗಿ ಬದುಕಿದ್ದಾರೆ

| Published : Oct 28 2024, 01:10 AM IST / Updated: Oct 28 2024, 01:11 AM IST

ಸಾರಾಂಶ

ಕವಿ, ನಾಟಕಕಾರನಾದ ಷೇಕ್ಸ್‌ ಪಿಯರ್ ನಗುವ ವ್ಯಕ್ತಿ ಧೂರ್ತ ಇರಬಹುದು ಎಂದು ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಕೆ.ಟಿ. ವೀರಪ್ಪ ಅವರು ತಮ್ಮ ಮಂದಹಾಸ ಮೂಲಕ ಜನಸ್ನೇಹಿಯಾಗಿ ಬದುಕಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ತಿಳಿಸಿದರು.

ನಗರದ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಪಿ.ಎಂ. ಚಿಕ್ಕಬೋರಯ್ಯ ಸಭಾಂಗಣದಲ್ಲಿ ಕೆ.ಟಿ. ವೀರಪ್ಪ ಅಭಿಮಾನಿಗಳ ಬಳಗವು ಭಾನುವಾರ ಆಯೋಜಿಸಿದ್ದ ಕೆ.ಟಿ. ವೀರಪ್ಪ- 90 ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕವಿ, ನಾಟಕಕಾರನಾದ ಷೇಕ್ಸ್‌ ಪಿಯರ್ ನಗುವ ವ್ಯಕ್ತಿ ಧೂರ್ತ ಇರಬಹುದು ಎಂದು ಹೇಳಿದ್ದಾರೆ. ಆದರೆ, ಕೆ.ಟಿ. ವೀರಪ್ಪ ಅವರು ನಗುಮುಖ ಹಾಗೂ ಮಂದಹಾಸದಿಂದ ಇದ್ದರೂ ಧೂರ್ತನಲ್ಲ, ದೇವಧೂತರಾಗಿದ್ದಾರೆ ಎಂದರು.

ಕೆ.ಟಿ. ವೀರಪ್ಪ ಅವರು ಕನ್ನಡಕ್ಕೆ ವಿಶ್ವಕೋಶ ಕೊಟ್ಟ ಮಹನೀಯ. ಇವರು ಇರದೆ ಹೋಗಿದ್ದರೆ, ವಿಶ್ವಕೋಶದ ಭಾಗ್ಯ ದೊರೆಯುತ್ತಿರಲಿಲ್ಲವೇನೋ? ಅಷ್ಟರ ಮಟ್ಟಿಗೆ ವಿಶ್ವಕೋಶದ ಮೇಲೆ ಕಾಳಜಿ ವಹಿಸಿದ್ದರು. ಅವರು ಗಾಂಧಿ ಮಾರ್ಗಿಯಾಗಿಯೂ ಜೀವನದಲ್ಲಿ ನಡೆದುಕೊಂಡಿದ್ದಾರೆ. ಅವರು ಸ್ನೇಹವೀರ ಹಾಗೂ ನಗೆವೀರನು ಹೌದು ಎಂದು ಅವರು ಬಣ್ಣಿಸಿದರು.

ಚಿತ್ರಸಂಪುಟ ಬಿಡುಗಡೆಗಳಿಸಿದ ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಮಾತನಾಡಿ, ಕೆ.ಟಿ. ವೀರಪ್ಪ ಅವರದು ನಿಷ್ಕಳಂಕ ಮನಸ್ಸು. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಕೆ.ಟಿ. ವೀರಪ್ಪ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಅವರ ಮನೆ ಮಿನಿ ಹಾಸ್ಟೆಲ್ ತರ ಇತ್ತು, ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಅವರ ಸೇವೆಯಿಂದ ಸಮಾಜಕ್ಕೆ ಸಾಕಷ್ಟು ಅನುಕೂಲವಾಗಿದೆ ಎಂದು ಹೇಳಿದರು.

ಇದೇ ವೇಳೆ ಕೆ.ಟಿ. ವೀರಪ್ಪ ಹಾಗೂ ಅವರ ಪತ್ನಿಯನ್ನು ಅಭಿಮಾನಿಗಳು ಆತ್ಮೀಯವಾಗಿ ಅಭಿನಂದಿಸಿದರು. ವಿಶ್ರಾಂತ ಕುಲಪತಿ ಡಾ.ಎನ್.ಎಸ್. ರಾಮೇಗೌಡ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಸಂಚಾಲಕ ಡಾ.ಪಿ. ಬೋರೇಗೌಡ, ಡಾ. ರಾಜೇಂದ್ರ, ಡಾ.ಸಿ. ನಾಗಣ್ಣ ಮೊದಲಾದವರು ಇದ್ದರು.