ಕವಿವಿ ಕ್ರೀಡಾಂಗಣ ಕಾಮಗಾರಿ: ಸರ್ಕಾರಕ್ಕೆ ಹೊಸ ಪ್ರಸ್ತಾವನೆ

| Published : Jan 10 2024, 01:45 AM IST

ಸಾರಾಂಶ

ಮಂಗಳವಾರ ಕ್ರೀಡಾಂಗಣ ಸ್ಥಳಕ್ಕೆ ಭೇಟಿ ನೀಡಿದ ಸಚಿವ ಸಂತೋಷ ಲಾಡ್ ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡದಾಗಿ ಕ್ರೀಡಾಂಗಣ ನಿರ್ಮಿಸಲು 1996ರಲ್ಲಿಯೇ ಕಾಮಗಾರಿ ಆರಂಭಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ಕೆಲಸ ನಿಂತಿದೆ. ಈಗ ಪುನರ್ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಧಾರವಾಡ

ಕರ್ನಾಟಕ ವಿಶ್ವವಿದ್ಯಾಲಯ ಆವರಣದಲ್ಲಿ ಅರ್ಧಕ್ಕೆ ಕಾಮಗಾರಿಯಾಗಿರುವ ಅಂತಾರಾಷ್ಟ್ರೀಯ ಕ್ರೀಡಾಂಗಣವನ್ನು ಜಾಗತಿಕ ಗುಣಮಟ್ಟದ ಕ್ರೀಡಾಂಗಣವಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಮಂಗಳವಾರ ಕ್ರೀಡಾಂಗಣ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಮಾತನಾಡಿ, ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡದಾಗಿ ಕ್ರೀಡಾಂಗಣ ನಿರ್ಮಿಸಲು 1996ರಲ್ಲಿಯೇ ಕಾಮಗಾರಿ ಆರಂಭಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ಕೆಲಸ ನಿಂತಿದೆ. ಈಗ ಪುನರ್ ಆರಂಭಿಸಲಾಗುವುದು ಎಂದರು.

ಮುಂದಿನ ಒಂದು ವಾರದಲ್ಲಿ ಜೆಸಿಬಿ ಮೂಲಕ ಕ್ರೀಡಾಂಗಣ ಸ್ವಚತೆ ಕಾರ್ಯ ಕೈಗೊಳ್ಳಲಾಗುವುದು. ಕ್ರೀಡಾಂಗಣ ಸೌಂದರ್ಯಿಕರಣಕ್ಕೆ ಆದ್ಯತೆ ನೀಡಲಾಗುವುದು. ಬಹು ವಿಧದ ಕ್ರೀಡೆಗಳನ್ನು ಆಡಲು ಅನುಕೂಲವಾಗುವಂತೆ ಕ್ರೀಡಾಂಗಣ ರೂಪಿಸಲಾಗುವುದು. ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಹೊಸ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ, ಮೌಲ್ಯಮಾಪನ ಕುಲಸಚಿವ ಪ್ರೊ. ಎನ್.ವೈ. ಮಟ್ಟಿಹಾಳ, ಕವಿವಿ ಕ್ರೀಡಾ ವಿಭಾಗದ ಮಖ್ಯಸ್ಥ ಡಾ. ಬಿ.ಎಂ. ಪಾಟೀಲ, ಪಾಲಿಕೆ ಸದಸ್ಯ ಡಾ. ಮಯೂರ ಮೋರೆ ಇದ್ದರು.

ಅಭಿಪ್ರಾಯ ಸಂಗ್ರಹ, ಸಮೀಕ್ಷೆ ಬಳಿಕ ಅಭ್ಯರ್ಥಿ ಆಯ್ಕೆ

ಧಾರವಾಡ ಲೋಕಸಭಾ ಚುನಾವಣೆಯ ಅಭ್ಯರ್ಥಿ ಆಯ್ಕೆಗಾಗಿ ಪಕ್ಷದ ಮುಖಂಡರ, ಬ್ಲಾಕ್‌ ಮತ್ತು ತಾಲೂಕು ಅಧ್ಯಕ್ಷರು ಅಭಿಪ್ರಾಯ ಸಂಗ್ರಹಿಸಿದ್ದು, ಹೈಕಮಾಂಡ್‌ಗೆ ಸಲ್ಲಿಸಲಾಗುತ್ತದೆ. ಟಿಕೆಟ್‌ ಆಕಾಂಕ್ಷಿಗಳ ಸಮೀಕ್ಷೆ ಸಹ ನಡೆದು ಕೊನೆಗೆ ಅಭ್ಯರ್ಥಿಯನ್ನು ಹೈಕಮಾಂಡ್‌ ನಿರ್ಣಯ ಮಾಡಲಿದೆ ಎಂದು ಧಾರವಾಡ ಲೋಕಸಭಾ ಕ್ಷೇತ್ರದ ಸಂಯೋಜಕರಾದ ಸಚಿವ ಸಂತೋಷ ಲಾಡ್‌ ಹೇಳಿದರು.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಧಾರವಾಡ ಕ್ಷೇತ್ರದ ಸಂಯೋಜಕ ಜವಾಬ್ದಾರಿ ಕೊಟ್ಟಿದ್ದಾರೆ.ಕಾರ್ಯಕರ್ತರನ್ನು ಸಂಘಟಿಸುವ ಕೆಲಸ ಮಾಡುತ್ತೇವೆ. ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುತ್ತೇವೆ. ಮನೆ ಮನೆಗೆ ಹೋಗಿ ನಮ್ಮ ಕಾರ್ಯಕ್ರಮಗಳ ಬಗ್ಗೆ ಹೇಳುತ್ತೇವೆ. 2013-2018ರ ಅವಧಿಯ ಕಾರ್ಯಗಳು, ಕಳೆದ ಹತ್ತು ವರ್ಷದಲ್ಲಿ ಮೋದಿ ಹೇಳಿದ ಸುಳ್ಳುಗಳನ್ನು ಮನೆ ಮನೆಗೆ ಮುಟ್ಟಿಸುತ್ತೇವೆ ಎಂದರು.