ಶತಮಾನದ ಇತಿಹಾಸವಿರುವ ಕುಡಚಿ-ಬಾಗಲಕೋಟೆ ರೈಲು ಮಾರ್ಗ (೧೪೨ ಕಿ.ಮೀ) ಕಾಮಗಾರಿ ೨೦೦೮ರಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಪ್ರತಿಧ್ವನಿಸಿದ್ದರ ಪರಿಣಾಮ ೨೦೧೦ರಲ್ಲಿ ಪುನಃ ಕಾರ್ಯಾರಂಭಗೊಂಡ ಯೋಜನೆ ಆಮೆಗತಿಯಲ್ಲಿಯೇ ಮುನ್ನಡೆದು ಇದೀಗ ಮತ್ತೇ ನೇಪಥ್ಯಕ್ಕೆ ಸರಿಯುವಂತಾಗಿದೆ.
ಶಿವಾನಂದ ಮಹಾಬಲಶೆಟ್ಟಿ
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿಶತಮಾನದ ಇತಿಹಾಸವಿರುವ ಕುಡಚಿ-ಬಾಗಲಕೋಟೆ ರೈಲು ಮಾರ್ಗ (೧೪೨ ಕಿ.ಮೀ) ಕಾಮಗಾರಿ ೨೦೦೮ರಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ನೇತೃತ್ವದಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಪ್ರತಿಧ್ವನಿಸಿದ್ದರ ಪರಿಣಾಮ ೨೦೧೦ರಲ್ಲಿ ಪುನಃ ಕಾರ್ಯಾರಂಭಗೊಂಡ ಯೋಜನೆ ಆಮೆಗತಿಯಲ್ಲಿಯೇ ಮುನ್ನಡೆದು ಇದೀಗ ಮತ್ತೇ ನೇಪಥ್ಯಕ್ಕೆ ಸರಿಯುವಂತಾಗಿದೆ.
2012ರಲ್ಲಿ ಶುರುವಾದ ರೈಲು ಮಾರ್ಗ ಕಾರ್ಯ 142 ಕಿಮೀ ಪೈಕಿ ಈವರೆಗೆ ಕೇವಲ 41 ಕಿಮೀನಷ್ಟು ಕಾಮಗಾರಿ ನಡೆದಿದೆ. ಇನ್ನುಳಿದ 101 ಕಿಮೀನಷ್ಟು ಕಾರ್ಯದಲ್ಲಿ ಲೋಕಾಪುರದಿಂದ ಯಾದವಾಡವರೆಗೆ 22 ಕಿಮೀನಷ್ಟು ಕಾಮಗಾರಿ ಪ್ರಗತಿಯಲ್ಲಿದ್ದರೆ ಯಾದವಾಡದಿಂದ ಜಮಖಂಡಿವರೆಗಿನ 28 ಕಿ.ಮೀ.ನಷ್ಟು ಕಾರ್ಯ ಇನ್ನೂ ನಡೆದಿಲ್ಲ. ಕಳೆದ ತಿಂಗಳಷ್ಟೇ ಹೋರಾಟ ಸಮಿತಿಯಿಂದ ಕುಡಚಿಯಲ್ಲಿ ಸತ್ಯಾಗ್ರಹ ನಡೆಸಿದ್ದರ ಫಲವಾಗಿ ಕುಡಚಿಯಿಂದ-ಜಮಖಂಡಿವರೆಗಿನ ೫೧ ಕಿ.ಮೀ. ಕೆಲಸ ಪ್ರಾರಂಭಿಸುವುದಾಗಿ ಜನಪ್ರತಿನಿಧಿಗಳ ಆಶ್ವಾಸನೆಯಿಂದ ಸತ್ಯಾಗ್ರಹ ಕೈ ಬಿಡಲಾಗಿತ್ತು. ಆದರೆ ಆ ಕಾರ್ಯವೂ ಮಂದಗತಿಯಲ್ಲಿಯೇ ಸಾಗುತ್ತಿದೆ.೨ ವರ್ಷಗಳ ಹಿಂದೆಯೇ ಕುಡಚಿ-ಜಮಖಂಡಿವರೆಗಿನ ಭೂಸ್ವಾಧೀನ ಪ್ರದೇಶದ ಸ್ವಚ್ಛತೆ ಹಾಗೂ ಜಾಗ ಗುರುತು ಬಗ್ಗೆ ₹೬.೫ ಕೋಟಿ ವೆಚ್ಚದಲ್ಲಿ ಟೆಂಡರ್ ಆಗಿದ್ದರೂ ಗುತ್ತಿಗೆದಾರ ಮಾತ್ರ ಇನ್ನೂ ಕಾರ್ಯ ನಡೆಸಿಲ್ಲ.
ರಾಜ್ಯ ಸರ್ಕಾರದಿಂದ ನಡೆಯಬೇಕಿದ್ದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕೇಂದ್ರ ರೈಲ್ವೆ ಇಲಾಖೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿಯೋಜನೆ ಮಾಡದಿರುವುದೇ ನಿರ್ಲಕ್ಷ್ಯಕ್ಕೆ ಕಾರಣ ಎನ್ನಲಾಗಿದೆ.ಸಮಿತಿ ಸುಸ್ತು, ಜನಬೆಂಬಲದ ಕೊರತೆ: ರೈಲ್ವೆ ಹೋರಾಟ ಸಮಿತಿ ಕಳೆದೆರಡು ದಶಕಗಳಿಂದ ಹೋರಾಟ ನಡೆಸುತ್ತ ಇದೀಗ ಸುಸ್ತಿನ ಹಾದಿ ತುಳಿಯುತ್ತಿದೆ. ಆಯಾ ತಾಲೂಕಾಧ್ಯಕ್ಷರ ನೇತೃತ್ವದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಬಲ ಸೂಚಿಸಿದ ಕಾರಣ ಇಂದು ರೈಲು ಮಾರ್ಗ ಚುರುಕು ಪಡೆದುಕೊಂಡಿತ್ತು. ಕಳೆದೆರಡು ವರ್ಷಗಳಿಂದ ಹೋರಾಟದ ಬಿಸಿ ಕಡಿಮೆಯಾಗಿದ್ದಲ್ಲದೆ ಹೋರಾಟಗಾರರಿಗೆ ಜನತೆಯ ಬೆಂಬಲ ಕಡಿಮೆಯಾಗಿರುವುದು ಕಾಮಗಾರಿ ಹಿನ್ನೆಡೆಗೆ ಕಾರಣ ಎನ್ನಲಾಗುತ್ತಿದೆ.
ವಿನೂತನ ಹೋರಾಟಕ್ಕೆ ಅಣಿ : ರೈಲು ಹೋರಾಟ ಸಮಿತಿ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಪತ್ರಿಕೆಯೊಂದಿಗೆ ಮಾತನಾಡಿ, ಈಗಾಗಲೇ ಎಲ್ಲ ರೀತಿಯಲ್ಲಿ ಹೋರಾಟ ನಡೆಸಲಾಗಿದೆ. ಮತ್ತೊಂದು ಬಾರಿ ವಿನೂತನ ಶೈಲಿಯಲ್ಲಿ ಹೋರಾಟ ನಡೆಸುವ ಮೂಲಕ ಈ ಬಾರಿ ಕುಡಚಿ-ಬಾಗಲಕೋಟೆ ಕಾಮಗಾರಿ ಪೂರ್ಣಗೊಳ್ಳುವವರೆಗೂ ಹೋರಾಟ ನಿರಂತರವೆಂದು ತಿಳಿಸಿದರು.ಹೋರಾಟ ಸಮಿತಿಗೆ ನಾಗರಿಕರ ಬೆಂಬಲ ಕಡಿಮೆಯಾಗುತ್ತಿರುವುದು ಬೇಸರ ತಂದಿದೆ. ಆದರೂ ರೈಲು ಮಾರ್ಗ ಶೀಘ್ರ ಮುಕ್ತಾಯಗೊಳ್ಳಬೇಕು. ಅಲ್ಲಿಯವರೆಗೂ ಹೋರಾಟ ಸಮಿತಿ ಹೋರಾಟದ ಕಾವು ಇರಲಿದೆ.
-ಕುತ್ಬುದ್ದೀನ್ ಖಾಜಿ, ಅಧ್ಯಕ್ಷರು, ರೈಲು ಹೋರಾಟ ಸಮಿತಿ ಬಾಗಲಕೋಟೆ