ಕುದರಿಮೋತಿ: 3 ಮಸೀದಿಯ 21 ಅಲಾಯಿ ದೇವರ ಮೆರವಣಿಗೆ

| Published : Jul 18 2024, 01:32 AM IST

ಸಾರಾಂಶ

ಎಲ್ಲಿ ನೋಡಿದರೂ ಜನವೋ ಜನ. ಎಲ್ಲಿ ಕಣ್ಣು ಹಾಯಿಸಿದರೂ ಅಲಂಕಾರಗೊಂಡ ಅಲಾಯಿ ದೇವರುಗಳು, ಲೆಕ್ಕಕ್ಕೆ ಸಿಗದ ಜನ...

ಕನ್ನಡಪ್ರಭ ವಾರ್ತೆ ಕುಕನೂರು

ಎಲ್ಲಿ ನೋಡಿದರೂ ಜನವೋ ಜನ. ಎಲ್ಲಿ ಕಣ್ಣು ಹಾಯಿಸಿದರೂ ಅಲಂಕಾರಗೊಂಡ ಅಲಾಯಿ ದೇವರುಗಳು, ಲೆಕ್ಕಕ್ಕೆ ಸಿಗದ ಜನ...

ಇದು ತಾಲೂಕಿನ ಕುದರಿಮೋತಿ ಗ್ರಾಮದಲ್ಲಿ ಮೊಹರಂ ಆಚರಣೆ ವೇಳೆ ಕಂಡುಬಂದ ದೃಶ್ಯ.ತಾಲೂಕಿನ ಕುದರಿಮೋತಿ ಮೊಹರಂನಲ್ಲಿ ಗ್ರಾಮದ ಮೂರು ಮಸೀದಿಯ 21 ಅಲಾಯಿ ದೇವರ ಮೆರವಣಿಗೆ ಅಪಾರ ಜನಸ್ತೋಮ ಮಧ್ಯೆ ಜರುಗಿತು. ಅದ್ಧೂರಿ ಮೊಹರಂನ್ನು ಜನರು ಕಣ್ಣುಂಬಿಕೊಂಡರು.

ಗ್ರಾಮದ ಮೂರು ಮಸೀದಿಯ ಒಟ್ಟು 21 ಅಲಾಯಿ ದೇವರ ಸಂಗಮವನ್ನು ಕಣ್ಣುಂಬಿಕೊಳ್ಳಲು ಜನರು ವಿವಿಧೆಡೆಗಳಿಂದ ಆಗಮಿಸಿದ್ದರು. ವಿಶೇಷವಾಗಿ ಕುದರಿಮೋತಿ ಮೊಹರಂ ಅಲೆಮಾರಿಗಳ ಮಾತೃಹಬ್ಬವೇ ಆಗಿದ್ದು, ಅಲೆದಾಡುತ್ತಾ ಜೀವನ ಸಾಗಿಸುವ ಅಲೆಮಾರಿಗಳು ಮೊಹರಂ ದಿನ ಕುದರಿ ಮೋತಿಗೆ ಆಗಮಿಸಿ ಸೇರಿದ್ದರು. ಸಂಜೆ ಆಗುತ್ತಿದ್ದಂತೆ ಮಸೀದಿಗಳಿಂದ ಆಗಮಿಸುವ ಅಲಾಯಿ ದೇವರು ಭಕ್ತರ ಮನೆಗೆ ತೆರಳಿ ಹರಕೆ ತೀರಿಸಿ ದರ್ಶನ ಭಾಗ್ಯ ನೀಡಿದವು.

ಗ್ರಾಮದಲ್ಲಿ ಒಟ್ಟು ಮೂರು ಮಸೀದಿಗಳಿದ್ದು, ಹಿರೇಮಸೀದಿ ಹಜರತ್ ಹುಸೇನಿ ಅಲಂದ ದರ್ಗಾದಲ್ಲಿ 8 ದೇವರು, ನಡುಲ ಮಸೀದಿ ದರ್ಗಾದಲ್ಲಿ 8 ದೇವರು, ಕಡೆ ಮಸೀದಿಯಲ್ಲಿ 5 ದೇವರನ್ನು ಪ್ರತಿಷ್ಠಾಪಿಸಲಾಗಿತ್ತು. ಸಂಜೆ ವೇಳೆಗೆ ಈ ಎಲ್ಲ ದೇವರು ಗ್ರಾಮದಲ್ಲಿ ಒಂದೆಡೆ ಸೇರುವ ದೃಶ್ಯವೇ ಕಣ್ಣುಂಬಿಕೊಳ್ಳುವಂಥದ್ದು, ಇಂತಹ ದೃಶ್ಯ ಕಣ್ಣುಂಬಿಕೊಳ್ಳಲು ಜನರು ಕಿಕ್ಕಿರಿದು ಸೇರಿದ್ದರು. ಮನೆಗಳ ಮಹಡಿ ಹತ್ತಿ ನಿಂತಿದ್ದರು. ಜಯಘೋಷಗಳು ಮುಗಿಲು ಮುಟ್ಟಿದ್ದವು. ರಾಷ್ಟ್ರದ ಮೂಲೆ ಮೂಲೆಗಳಿಂದ ಅಲೆಮಾರಿ, ಬುಡಕಟ್ಟು, ಬುಡ್ಗ ಜಂಗಮರು, ಮೂಲ ಜಂಗಮರು, ಸುಡುಗಾಡು ಸಿದ್ದರು, ಹಾವಾಡಿಗರು, ಪರ್ವತ ಮಲ್ಲಯ್ಯನವರು, ಜಾತಿಗಾರರು, ಗೊಂದಲಿಗರು, ಶಂಧೂಳ ಮುಂತಾದ ಜನಾಂಗದವರು ಆಗಮಿಸಿದ್ದರು.

ಬೆಳಗ್ಗೆಯಿಂದ ಜನರು ಅಲಾಯಿ ದೇವರುಗಳಿಗೆ ನಾನಾ ಹರಕೆ ತೀರಿಸಿದರು. ಹುಲಿವೇಷಧಾರಿಗಳಾಗಿ ಗಮನ ಸೆಳೆದರು. ಅಲ್ಲದೆ ಹುಲಿ ಕುಣಿತ ಹಾಗೂ ಜನರ ಹೆಜ್ಜೆ ಕುಣಿತ ನೋಡುಗರ ಗಮನ ಸೆಳೆದವು.