ಕೂಡಿಗೆ: ರಾಷ್ಟ್ರಮಟ್ಟದ ಬಾಲಕಿಯರ ಹಾಕಿ ಪಂದ್ಯಾವಳಿಗೆ ಚಾಲನೆ

| Published : Jan 04 2024, 01:45 AM IST

ಸಾರಾಂಶ

ರಾಷ್ಟ್ರ ಮಟ್ಟದ 17 ವರ್ಷ ವಯೋಮಿತಿಯ ಬಾಲಕಿಯರ ಹಾಕಿ ಪಂದ್ಯಾವಳಿಗೆ ಕುಶಾಲನಗರ ತಾಲೂಕು ಕೂಡಿಗೆ ಕ್ರೀಡಾ ಶಾಲೆಯ ಆವರಣದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಚಾಲನೆ ನೀಡಿದರು. ಕರ್ನಾಟಕ ಸೇರಿದಂತೆ ದೇಶದ ಸುಮಾರು 18 ರಾಜ್ಯಗಳ ತಂಡದ ಕ್ರೀಡಾಪಟುಗಳು ಪಥಸಂಚಲದಲ್ಲಿ ಪಾಲ್ಗೊಂಡಿದ್ದವು.

ಕನ್ನಡಪ್ರಭ ವಾರ್ತೆ ಕುಶಾಲನಗರ

ರಾಷ್ಟ್ರ ಮಟ್ಟದ 17 ವರ್ಷ ವಯೋಮಿತಿಯ ಬಾಲಕಿಯರ ಹಾಕಿ ಪಂದ್ಯಾವಳಿಗೆ ಕುಶಾಲನಗರ ತಾಲೂಕು ಕೂಡಿಗೆ ಕ್ರೀಡಾ ಶಾಲೆಯ ಆವರಣದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆ ಜನತೆಯಲ್ಲಿ ರಕ್ತಗತವಾಗಿ ಬಂದಿದೆ. ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಕ್ರೀಡಾಪಟುಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯ ಅಲ್ಲ ಪಾಲ್ಗೊಳ್ಳುವುದು ಪ್ರಮುಖವಾಗಿದೆ ಎಂದ ಸಚಿವರು ಕ್ರೀಡೆಗೆ ಪ್ರತಿಯೊಬ್ಬರು ಪ್ರೋತ್ಸಾಹ ಸಹಕಾರ ನೀಡಬೇಕಾಗಿದೆ. ಸರ್ಕಾರ ಎಲ್ಲ ರೀತಿಯಲ್ಲಿ ಕ್ರೀಡೆಗಳಿಗೆ ಬೆಂಬಲ ನೀಡುತ್ತದೆ ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಬಾಲಕಿಯರ ಹಾಕಿ ಕ್ರೀಡಾಕೂಟ ಉತ್ತಮವಾಗಿ ನಡೆಯಲಿ ಎಂದು ಹಾರೈಸಿದ ಅವರು ಕ್ರೀಡಾಕೂಟದ ಯಶಸ್ಸಿಗೆ ಸ್ಥಳೀಯ ಜಿಲ್ಲಾಡಳಿತದಿಂದ ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದರು.

ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆ ವಹಿಸಿದ್ದರು. ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ ಕೊಡಗು ಜಿಲ್ಲೆ ರಾಷ್ಟ್ರಕ್ಕೆ ಅಂತಾರರಾಷ್ಟ್ರೀಯ ಮಟ್ಟಕ್ಕೆ ಅತಿಹೆಚ್ಚಿನ ಹಾಕಿ ಕ್ರೀಡಾಪಟುಗಳನ್ನು ನೀಡಿದ ನಾಡಾಗಿದೆ. ಹಾಕಿ ಕ್ರೀಡಾಕೂಟ ಕ್ರೀಡಾ ಪ್ರತಿಭೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ಉತ್ತಮ ಪ್ರದರ್ಶನ ಮೂಲಕ ಜಯ ಲಭಿಸಲು ಸಾಧ್ಯ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ. ಮಂತರ್ ಗೌಡ ಮಾತನಾಡಿ ಜಿಲ್ಲೆಯಲ್ಲಿ ನಡೆಯಲಿರುವ ಹಾಕಿ ಪಂದ್ಯಾವಳಿಗೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕ್ರೀಡಾಪಟುಗಳಿಗೆ ಹುಮ್ಮಸ್ಸು ನೀಡಬೇಕಾಗಿದೆ. ಕ್ರೀಡಾಪಟುಗಳು ಆಯಾ ರಾಜ್ಯಗಳನ್ನು ಪ್ರತಿನಿಧಿಸುವ ಪ್ರತಿನಿಧಿಗಳಾಗಿದ್ದು ಯಶಸ್ವಿ ಕ್ರೀಡಾಕೂಟ ನಡೆಯಲಿ ಎಂದು ಶುಭ ಹಾರೈಸಿದರು. ಪಂದ್ಯಾವಳಿ ಅವಧಿಯಲ್ಲಿ ಜಿಲ್ಲಾಡಳಿತ ಎಲ್ಲ ರೀತಿಯ ಸಹಕಾರವನ್ನು ಕ್ರೀಡಾಪಟುಗಳಿಗೆ ನೀಡಲಿದೆ ಎಂದು ಅವರು ಹೇಳಿದರು.ಆಕರ್ಷಕ ಪಥಸಂಚಲನ: ಕಾರ್ಯಕ್ರಮಕ್ಕೆ ಮುನ್ನ ಕ್ರೀಡಾ ತಂಡಗಳಿಂದ ಆಕರ್ಷಕ ಪಥಸಂಚಲ ನಡೆಯಿತು. ಕರ್ನಾಟಕ ಸೇರಿದಂತೆ ದೇಶದ ಸುಮಾರು 18 ರಾಜ್ಯಗಳ ತಂಡದ ಕ್ರೀಡಾಪಟುಗಳು ಪಥಸಂಚಲದಲ್ಲಿ ಪಾಲ್ಗೊಂಡಿದ್ದವು. ಇಂದಿನಿಂದ ಕೊಡಗು ಜಿಲ್ಲೆಯ ಕೂಡಿಗೆ ಮಡಿಕೇರಿ ಪೊನ್ನಂಪೇಟೆ, ಸೋಮವಾರಪೇಟೆ ಮೈದಾನಗಳಲ್ಲಿ ವಿವಿಧ ರಾಜ್ಯಗಳ ಬಾಲಕಿಯರ ಹಾಕಿ ತಂಡಗಳು ಸೆಣಸಾಡಲಿವೆ.

ಈ ಸಂದರ್ಭ ಗ್ರಾಮ ಪಂಚಾಯತಿ ಅಧ್ಯಕ್ಷjeo ಭಾಸ್ಕರ ನಾಯಕ್, ಗಿರೀಶ್‌, ಜಿಲ್ಲಾಧಿಕಾರಿ ವೆಂಕಟ್ ರಾಜ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣಾಧಿಕಾರಿ ವರ್ಣಿತ್‌ ನೇಗಿ, ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್, ಮಡಿಕೇರಿ ವಿಭಾಗ ಅಧಿಕಾರಿ ವಿನಾಯಕ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ನಿರ್ದೇಶಕ ಜಿಎಸ್ ರಘುವೀರ್, ದೈಹಿಕ ಶಿಕ್ಷಣ ಜಂಟಿ ನಿರ್ದೇಶಕ ಎಸ್‌.ಎನ್‌. ರಮೇಶ್, ಶಾಲಾ ಶಿಕ್ಷಣ ಇಲಾಖೆಯ ಸಹ ನಿರ್ದೇಶಕ ಪಾಂಡುರಂಗ, ಕುಶಾಲನಗರ ತಾಲೂಕು ತಹಸಿಲ್ದಾರ್ ಕಿರಣ್ ಗೌರಯ್ಯ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೆದ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್. ಚಂದ್ರಕಾಂತ್ ಮತ್ತಿತರರು ಇದ್ದರು.