ನಿರೀಕ್ಷೆಯಂತೆ ಕೂಡ್ಲಿಗಿ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ತೆಕ್ಕೆಗೆ

| Published : Aug 20 2024, 12:58 AM IST

ಸಾರಾಂಶ

ಕೂಡ್ಲಿಗಿ ಪಪಂ ನಿರೀಕ್ಷೆಯಂತೆ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು, ಅಧ್ಯಕ್ಷರಾಗಿ ಕಾವಲ್ಲಿ ಶಿವಪ್ಪನಾಯಕ ಹಾಗೂ ಉಪಾಧ್ಯಕ್ಷರಾಗಿ ಲೀಲಾವತಿ ಪ್ರಭಾಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೂಡ್ಲಿಗಿ: ಕೂಡ್ಲಿಗಿ ಪಪಂ ನಿರೀಕ್ಷೆಯಂತೆ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು, ಅಧ್ಯಕ್ಷರಾಗಿ ಕಾವಲ್ಲಿ ಶಿವಪ್ಪನಾಯಕ ಹಾಗೂ ಉಪಾಧ್ಯಕ್ಷರಾಗಿ ಲೀಲಾವತಿ ಪ್ರಭಾಕರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋಮವಾರ ಪಟ್ಟಣ ಪಂಚಾಯತಿಯ ಸಭಾಂಗಣದಲ್ಲಿ ನಡೆದ ಕೂಡ್ಲಿಗಿ ಪಟ್ಟಣ ಪಂಚಾಯಿತಿಯ 2ನೇ ಅವಧಿಗೆ ಅಧ್ಯಕ್ಷ -ಉಪಾಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ, ಕೂಡ್ಲಿಗಿ ತಹಸೀಲ್ದಾರ್ ಎಂ. ರೇಣುಕಾ ಆಯ್ಕೆಯನ್ನು ಘೋಷಿಸಿದ್ದಾರೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಬೆಳಗ್ಗೆ 10 ಗಂಟೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುರುವಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸದಸ್ಯರಾದ ಕಾವಲ್ಲಿ ಶಿವಪ್ಪನಾಯಕ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಡಾಣಿ ಚೌಡಮ್ಮ ಮತ್ತು ಲೀಲಾವತಿ ಪ್ರಭಾಕರ ನಾಮಪತ್ರ ಸಲ್ಲಿಸಿದರು. ಆನಂತರ ಶಾಸಕರ ಮಧ್ಯಸ್ಥಿಕೆಯಲ್ಲಿ ಡಾಣಿ ಚೌಡಮ್ಮ ನಾಮಪತ್ರ ವಾಪಸ್‌ ಪಡೆದರು.

ಕೂಡ್ಲಿಗಿ ಪಪಂನಲ್ಲಿ 20 ಸದಸ್ಯರ ಬಲಾಬಲ ಇದ್ದು, ಕಾಂಗ್ರೆಸ್‌ನ 7 ಸದಸ್ಯರಿದ್ದಾರೆ. ಅವರ ಜೊತೆ ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ ಎನ್.ಟಿ. ಹಾಗೂ ಬಳ್ಳಾರಿ ಸಂಸದ ಈ. ತುಕಾರಾಂ ಮತ ಸೇರಿ 9 ಮತಗಳಾಗುತ್ತವೆ. ಇಬ್ಬರು ಪಕ್ಷೇತರ ಸದಸ್ಯರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ 11 ಸದಸ್ಯರು ಕಾಂಗ್ರೆಸ್ ಪರವಾಗಿದ್ದಾರೆ.

ಬಿಜೆಪಿಯಿಂದ ವಿಪ್ ಜಾರಿ: ಪಪಂ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ 6 ಸದಸ್ಯರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ವಿಪ್‌ ಜಾರಿ ಮಾಡಿದ್ದರು. 9ನೇ ವಾರ್ಡಿನ ಸದಸ್ಯೆ ಬಂಗಾರು ಹುಲಿಗೆಮ್ಮ ಸೋಮಣ್ಣ ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದರಿಂದ ಅವರು ಗೈರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಜೆಡಿಎಸ್ ಸದಸ್ಯ ತಳಾಸ್ ವೆಂಕಟೇಶ, ಸದಸ್ಯರಾದ ಈಶಪ್ಪ, ಸಿರಿಬಿ ಮಂಜುನಾಥ, ಪೂರ್ಯಾನಾಯ್ಕ್, ಸರಸ್ವತಿ ರಾಘವೇಂದ್ರ ತಡವಾಗಿ ಬಂದರು. ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ ಹಾಗೂ ಸಂಸದ ಈ. ತುಕಾರಾಂ ಸಹ ಹಾಜರಿದ್ದರು.

ಡಿವೈಎಸ್ಪಿ ಮಲ್ಲೇಶಪ್ಪ ನೇತೃತ್ವದಲ್ಲಿ ಕೂಡ್ಲಿಗಿ ಪಿಎಸ್ಐ ಪ್ರಕಾಶ, ಕೊಟ್ಟೂರು ಪಿಎಸ್ಐ ಗೀತಾಂಜಲಿ ಶಿಂಧೆ ಹಾಗೂ ಸಿಬ್ಬಂದಿ ಬಂದೋಬಸ್ತ್ ನೀಡಿದ್ದರು. ಚುನಾವಣಾಧಿಕಾರಿಗಳಿಗೆ ಸಹಾಯಕರಾಗಿ ತಾಲೂಕು ಕಚೇರಿಯ ಚುನಾವಣೆ ಸಿಬ್ಬಂದಿ ಶಿವಕುಮಾರ್, ವಾಸುದೇವ, ಕಂದಾಯ ಪರಿವೀಕ್ಷಕ ಕುಮಾರಸ್ವಾಮಿ, ಪ್ರಭು ತಳವಾರ ಮತ್ತು ಕೂಡ್ಲಿಗಿ ಪಪಂ ಮುಖ್ಯಾಧಿಕಾರಿ ಎಂ.ಕೆ. ಮುಗಳಿ, ಸಿಬ್ಬಂದಿ ರಮೇಶ, ರಾಘವೇಂದ್ರರಾವ್, ರಾಜಾಭಕ್ಷಿ ಇತರರಿದ್ದರು.

ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ: ಅಧ್ಯಕ್ಷ -ಉಪಾಧ್ಯಕ್ಷರ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಅಂಬೇಡ್ಕರ್ ವೃತ್ತ ಹಾಗೂ ಮದಕರಿ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.