ಸಾರಾಂಶ
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ದಲಿತರಿಗೆ ಸ್ವಾಭಿಮಾನಿ ಬದುಕು ಚಿಂತನೆಗಳ ಅನುಷ್ಠಾನಕ್ಕೆ ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ಅನುಷ್ಠಾನ ಮಾಡಿ ತೋರಿಸಿದವರು ಎಂದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಶೋಷಿತ ಸಮಾಜದ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ ಏಳಿಗೆಗಾಗಿ ತನ್ನನ್ನು ತಾನು ಸಮರ್ಪಿಸಿದ ಕುದ್ಮುಲ್ ರಂಗರಾಯರದ್ದು ಶ್ರೇಷ್ಠ ವ್ಯಕ್ತಿತ್ವ ಎಂದು ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಹೇಳಿದರು.ಕುದ್ಮುಲ್ ರಂಗರಾವ್ ಅವರ 97ನೇ ಪುಣ್ಯ ತಿಥಿ-ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಮಂಗಳೂರಿನ ಅಖಿಲ ಭಾರತ ಮುಂಡಾಲ ಯುವ ವೇದಿಕೆ, ಕುದ್ಮುಲ್ ರಂಗರಾವ್ ಎಜುಕೇಷನಲ್ ಟ್ರಸ್ಟ್ ಅತ್ತಾವರ, ಬಾಬುಗುಡ್ಡ ಹಾಗೂ ಚಳವಳಿ ಪ್ರಕಾಶನ ನಂಜನಗೂಡು ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಅತ್ತಾವರದಲ್ಲಿರುವ ಬಾಬುಗುಡ್ಡೆಯ ಕುದ್ಮುಲ್ ರಂಗರಾವ್ ಅವರ ಸಮಾಧಿ ಸ್ಥಳದಲ್ಲಿ ಮೈಸೂರಿನ ಸಾಹಿತಿ ಡಾ. ಕೆ.ಪಿ.ಮಹಾಲಿಂಗು ಕಲ್ಕುಂದ ಅವರ ‘ಶೋಷಿತರ ಬೆಳಕು ಕುದ್ಮುಲ್ ರಂಗರಾವ್’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ದಲಿತರಿಗೆ ಸ್ವಾಭಿಮಾನಿ ಬದುಕು ಚಿಂತನೆಗಳ ಅನುಷ್ಠಾನಕ್ಕೆ ಸಾಧ್ಯವಾಗದೇ ಇದ್ದ ಸಂದರ್ಭದಲ್ಲಿ ಅನುಷ್ಠಾನ ಮಾಡಿ ತೋರಿಸಿದವರು ಎಂದರು.
ಲೇಖಕ ಅಣ್ಣು, ಕುದ್ಮುಲ್ ರಂಗರಾವ್ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಹೃದಯನಾಥ್, ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷ ಪ್ರದೀಪ್ ಕಾಪಿಕಾಡ್, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ರಘುರಾಜ್ ಕದ್ರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಮಂಗಳೂರು ವಿವಿ ವಿಜ್ಞಾನ ಉಪಕರಣ ಕೇಂದ್ರ ಮುಖ್ಯಸ್ಥ ಎ.ಜಿ. ವಿವೇಕಾನಂದ, ಕ.ರಾ.ಮು.ವಿ. ಪ್ರಾದೇಶಿಕ ಕೇಂದ್ರ ಪ್ರಾದೇಶಿಕ ನಿರ್ದೇಶಕ ಡಾ. ಬಿ. ಬಸವರಾಜು, ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ಅಧ್ಯಯನ ಮತ್ತು ಅಭಿವೃದ್ದಿ ಟ್ರಸ್ಟ್ ಉಪಾಧ್ಯಕ್ಷ ಕೃಷ್ಣಾನಂದ, ಕುದ್ಮುಲ್ ರಂಗರಾವ್ ಸ್ಮಾರಕ ಸೇವಾ ಸಂಸ್ಥೆ ಗೌರವಾಧ್ಯಕ್ಷ ದೇವೇಂದ್ರ ಕೆ. ಮತ್ತಿತರರಿದ್ದರು.ಕೃತಿಕಾರ ಡಾ. ಮಹಾಲಿಂಗ ಕಲ್ಕುಂದ ಅವರನ್ನು ಸಮ್ಮಾನಿಸಲಾಯಿತು. ಕಿರಣ್ ಕುಮಾರ್ ಕೊಡಿಯಾಲಬೈಲು ಸ್ವಾಗತಿಸಿದರು.