ಉಡುಪಿಯಲ್ಲಿ ಯಶಸ್ವಿಯಾದ ಕುದ್ರೋಳಿ ಗಣೇಶ್‌ ‘ಮೈಂಡ್ ಮಿಸ್ಟರಿ ಜಾದೂ’

| Published : Dec 26 2024, 01:05 AM IST

ಉಡುಪಿಯಲ್ಲಿ ಯಶಸ್ವಿಯಾದ ಕುದ್ರೋಳಿ ಗಣೇಶ್‌ ‘ಮೈಂಡ್ ಮಿಸ್ಟರಿ ಜಾದೂ’
Share this Article
  • FB
  • TW
  • Linkdin
  • Email

ಸಾರಾಂಶ

ಯಕ್ಷಗಾನ, ರಂಗಭೂಮಿ, ಭರತನಾಟ್ಯ, ಸಂಗೀತ ಸೇರಿದಂತೆ ಹಲವು ಕಲಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವ ಉಡುಪಿ ಜಿಲ್ಲೆಯಲ್ಲಿ ಕಲಾಸಕ್ತರ ಸಮ್ಮುಖದಲ್ಲಿ ಹೊಸ ಪ್ರಯೋಗವನ್ನು ಪ್ರದರ್ಶಿಸಿ ಸಂತೋಷ ಪಟ್ಟಿದ್ದೇನೆ ಎಂದು ಜಾದೂಗಾರ ಕುದ್ರೋಳಿ ಗಣೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಜಾದೂಗಾರ ಕುದ್ರೋಳಿ ಗಣೇಶ್ ಪ್ರಸ್ತುತಪಡಿಸಿದ ಮೆಂಟಲಿಸಮ್ ಕಲೆ ಆಧಾರಿತ ಮೈಂಡ್ ಮಿಸ್ಟರಿ ಕಾರ್ಯಕ್ರಮವು ಉಡುಪಿಯಲ್ಲಿ ಯಶಸ್ವಿ ಪ್ರದರ್ಶನ ದಾಖಲಿಸಿತು.

ಇಲ್ಲಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಎರಡು ದಿನದಲ್ಲಿ ನಡೆದ ಮೂರೂ ಪ್ರದರ್ಶನದಲ್ಲಿ ಜಾದು ರಂಗದ ಹೊಚ್ಚ ಹೊಸ ಪ್ರಯೋಗವನ್ನು ವೀಕ್ಷಿಸಿ ದಂಗಾದರು.

ಸೇರಿದ್ದ ಸಭಿಕರ ಮನಸ್ಸಿನಲ್ಲಿರುವ ವಿಚಾರಗಳನ್ನು ಓದಿ ಹೇಳುವ ಮೈಂಡ್ ರೀಡಿಂಗ್, ನಿರ್ಜೀವ ವಸ್ತುವಿನ ಜೊತೆ ಸುಪ್ತ ಮನಸ್ಸಿನ ಸಂಪರ್ಕ ಏರ್ಪಡುವ ಪ್ರಯೋಗ, ಮನಸ್ಸಿನ ಶಕ್ತಿಯ ಬಲದಿಂದ ಟೇಬಲ್ ಗಾಳಿಯಲ್ಲಿ ಹಾರುವುದು, ಒಬ್ಬರ ಮನಸ್ಸಿನಲ್ಲಿರುವ ವಿಚಾರವನ್ನು ಮತ್ತೊಬ್ಬರು ತಿಳಿದುಕೊಳ್ಳುವ ಟೆಲಿಪತಿ ಮುಂತಾದ ಬೆರಗು ಹುಟ್ಟಿಸುವ ಪ್ರಯೋಗಗಳನ್ನು ನೋಡಿ ಜನರು ದಂಗಾದರು. ಮೂರೂ ಪ್ರದರ್ಶನ ಕೊನೆಯಲ್ಲಿ ಜನರೆಲ್ಲರೂ ಎದ್ದು ನಿಂತು ಗೌರವದ ಚಪ್ಪಾಳೆ ನೀಡಿದ್ದು ಮೈಂಡ್ ಮಿಸ್ಟರಿ ಪ್ರದರ್ಶನ ಯಶಸ್ವಿಗೆ ಸಾಕ್ಷಿಯಾಯಿತು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ಲಾಲಾಜಿ ಮೆಂಡನ್ ಸೇರಿದಂತೆ ಉಡುಪಿ ಜಿಲ್ಲೆಯ ಗಣ್ಯ ವೈದ್ಯರು, ಎಂಜಿನಿಯರ್, ಉದ್ಯಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆಚ್ಚುಗೆ ಸೂಚಿಸಿದರು.

ಯಕ್ಷಗಾನ, ರಂಗಭೂಮಿ, ಭರತನಾಟ್ಯ, ಸಂಗೀತ ಸೇರಿದಂತೆ ಹಲವು ಕಲಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವ ಉಡುಪಿ ಜಿಲ್ಲೆಯಲ್ಲಿ ಕಲಾಸಕ್ತರ ಸಮ್ಮುಖದಲ್ಲಿ ಹೊಸ ಪ್ರಯೋಗವನ್ನು ಪ್ರದರ್ಶಿಸಿ ಸಂತೋಷ ಪಟ್ಟಿದ್ದೇನೆ ಎಂದು ಜಾದೂಗಾರ ಕುದ್ರೋಳಿ ಗಣೇಶ್ ಹೇಳಿದರು.

ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ವಿದೇಶದ ಹಲವೆಡೆ ಮೈಂಡ್ ಮಿಸ್ಟರಿ ಕಾರ್ಯಕ್ರಮದ ನಿರಂತರ ಪ್ರದರ್ಶನ ನಡೆಯಲಿದೆ ಎಂದು ಅವರು ತಿಳಿಸಿದರು. ಪ್ರವೀಣ ಉಡುಪ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ ವಿಕ್ರಂ ಶೆಟ್ಟಿ ವಂದಿಸಿದರು.