ಕೂಡುಮಂಗಳೂರು: ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ ಸಂಭ್ರಮ

| Published : Aug 25 2024, 02:01 AM IST

ಸಾರಾಂಶ

ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾ.ಪಂ ಸಹಕಾರದೊಂದಿಗೆ ಕೂಡುಮಂಗಳೂರು - ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಗ್ರಾಮದ ದೇವಾಲಯ ಸಮಿತಿ ಆಶ್ರಯದಲ್ಲಿ ಗ್ರಾಮದ ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಅವರ ಗದ್ದೆಯಲ್ಲಿ ಮೂರನೇ ವರ್ಷದ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ ಸಡಗರದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾ.ಪಂ ಸಹಕಾರದೊಂದಿಗೆ ಕೂಡುಮಂಗಳೂರು - ಕೂಡ್ಲೂರು ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಗ್ರಾಮದ ದೇವಾಲಯ ಸಮಿತಿ ಆಶ್ರಯದಲ್ಲಿ ಗ್ರಾಮದ ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಅವರ ಗದ್ದೆಯಲ್ಲಿ ಮೂರನೇ ವರ್ಷದ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟ ಸಡಗರದಿಂದ ಜರುಗಿತು.

ವಿದ್ಯಾರ್ಥಿಗಳು ಕೆಸರು ಗದ್ದೆಯಲ್ಲಿ ಮಿಂದೆದ್ದು, ಆಟವಾಡುತ್ತಾ ಕುಣಿದು ಕುಪ್ಪಳಿಸಿದರು. ಮಕ್ಕಳ ಓಟದ ಸ್ಪರ್ಧೆ, ಹಗ್ಗ ಜಗ್ಗಾಟ, ವಾಲಿಬಾಲ್, ಥ್ರೋಬಾಲ್ ಟೂರ್ನಿ, ಬೊಗಸೆಯಿಂದ ಲೋಟಕ್ಕೆ ಸ್ಪರ್ಧೆ ಸೇರಿದಂತೆ ಇನ್ನಿತರ ಕ್ರೀಡಾ ಸ್ಪರ್ಧೆಗಳಲ್ಲಿ ಮಕ್ಕಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಕ್ರೀಡಾಕೂಟದಲ್ಲಿ ಮಕ್ಕಳೊಂದಿಗೆ ಕೆಸರುಗದ್ದೆಗೆ ಇಳಿದು ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಮುಖ್ಯೋಪಾಧ್ಯಾಯ, ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಜಿಲ್ಲಾ ಸಂಚಾಲಕ ಟಿ.ಜಿ.ಪ್ರೇಮಕುಮಾರ್, ಕೆಸರು ಗದ್ದೆ ಕ್ರೀಡೆಯ ಮಹತ್ವದ ಕುರಿತು ಮಾಹಿತಿ ನೀಡಿದರು.

ಜನಪದ ಶೈಲಿಯ ಗ್ರಾಮೀಣ ಕೆಸರು ಗದ್ದೆ ಕ್ರೀಡಾಕೂಟವನ್ನು ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಗಳು, ರೈತರ ಕೃಷಿ ಬದುಕು, ದೇಶದ ಕೃಷಿ ಜೀವನ ಬಗ್ಗೆ ಅರ್ಥ ಮಾಡಿಕೊಳ್ಳುವ ದಿಸೆಯಲ್ಲಿ ಶಾಲೆಯ ವತಿಯಿಂದ ಸತತವಾಗಿ 3 ನೇ ವರ್ಷ ಕೂಡ್ಲೂರು ಗ್ರಾಮದ ದೇವಾಲಯ ಸಮಿತಿ ಮತ್ತು ಜನರ ಸಹಕಾರದೊಂದಿಗೆ ಸಂಘಟಿಸಲಾಗಿದೆ ಎಂದರು.

ಎಸ್.ಡಿ.ಎಂ.ಸಿ.ಅಧ್ಯಕ್ಷ ಎ.ಎಂ.ಜವರಯ್ಯ ಮಾತನಾಡಿ, ನಮ್ಮ ಶಾಲಾ ಶಿಕ್ಷಕರ ತಂಡದ ಪ್ರೇರೇಪಣೆಯಿಂದ ಇಂತಹ ಕ್ರೀಡಾಕೂಟ ಸಂಘಟಿಸುವ ಮೂಲಕ ಮಕ್ಕಳಿಗೆ ಕೃಷಿ ಪಾಠದ ಮಹತ್ವ ತಿಳಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಕೂಡ್ಲೂರು ಗ್ರಾಮದ ಪ್ರಗತಿಪರ ರೈತ ಕೆ.ಎಸ್.ರಾಜಾಚಾರಿ ಮಾತನಾಡಿ, ಇಂತಹ ಕ್ರೀಡೆಗಳು ವಿದ್ಯಾರ್ಥಿಗಳಿಗೆ ಕೃಷಿ ಪರಿಚಯ ಮಾಡಿಕೊಡಲು ಸಹಕಾರಿಯಾಗಿವೆ ಎಂದರು.

ಕುಶಾಲನಗರ ಕಾವೇರಿ ಜೆ.ಸಿ.ಐ.ಸಂಸ್ಥೆಯ ಅಧ್ಯಕ್ಷ ಬಿ.ಜಗದೀಶ್, ತಾಲೂಕು ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂ.ಟಿ.ದಯಾನಂದ ಪ್ರಕಾಶ್, ಜಿಲ್ಲಾ ಗೈಡ್ಸ್ ಸಂಸ್ಥೆಯ ಕ್ಯಾಪ್ಟನ್ ಸಿ.ಎಂ.ಸುಲೋಚನಾ, ಎಸ್.ಡಿ.ಎಂ.ಸಿ.ಅಧ್ಯಕ್ಷ ಎ.ಎಂ.ಜವರಯ್ಯ, ಸದಸ್ಯರಾದ ಶೃತಿ, ಲಕ್ಷ್ಮಿ, ಕುಶಾಲನಗರ ಕಾವೇರಿ ಜೆ.ಸಿ.ಐ.ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಎಂ.ಜೆ.ರಜನೀಕಾಂತ್, ಶಿಕ್ಷಕರಾದ ಕೆ.ಗೋಪಾಲಕೃಷ್ಣ, ಎಂ.ಟಿ.ದಯಾನಂದ ಪ್ರಕಾಶ್, ಬಿ.ಎನ್.ಸುಜಾತಬಿ.ಡಿ.ರಮ್ಯ, ಎಸ್.ಎಂ.ಗೀತಾ, , ಅನ್ಸಿಲಾ ರೇಖಾ, ಕೆ.ಟಿ.ಸೌಮ್ಯ, ಕೃಷಿಕ ಕೆ.ಆರ್ ನಾಗರಾಜು, ಕೆ.ಎನ್. ಕುಶಾಲ್, ಇತರರು ಇದ್ದರು.ಮಕ್ಕಳಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಕೆ.ಟಿ.ಸೌಮ್ಯ ಕ್ರೀಡೆ ನಡೆಸಿಕೊಟ್ಟರು.