ಸಾರಾಂಶ
ಕನ್ನಡಪ್ರಭ ವಾರ್ತೆ ಕುದೂರು
ತಾಲೂಕಿನ ಅತಿದೊಡ್ಡದಾದ ಕೊಂಡದಲ್ಲಿ ಬಿಡಿ ಬಿಡಿಯಾಗಿ ಉರುಳಿದ ಕಗ್ಗಲಿಮರದ ದಪ್ಪನೆ ಕೆಂಡದ ಮೇಲೆ ಹರಕೆ ಹೊತ್ತ ಯುವಕರು ಓಡುವ ಸನ್ನಿವೇಶವನ್ನು ಕಂಡು ನೂರಾರು ಜನರು ಪುಳಕಿತರಾದರು.ಕುದೂರು ಗ್ರಾಮದ ಶ್ರೀ ಲಕ್ಷ್ಮೀದೇವಿ ಅಮ್ಮನವರ ಅಗ್ನಿಕುಂಡ ಮಹೋತ್ಸವದಲ್ಲಿ ಹರಕೆ ಹೊತ್ತ ವೀರಮಕ್ಕಳು ಕೆಂಡದಲ್ಲಿ ಓಡಿದರು.
450 ವರ್ಷಗಳ ಇತಿಹಾಸವುಳ್ಳ ಈ ಜಾತ್ರೆಯಲ್ಲಿ ಒಂದು ವಾರ ಕಾಲ ಮಾಂಸಾಹಾರ ಮಾಡುವಂತಿಲ್ಲ ಮತ್ತು ಸೇವಿಸುವಂತಿಲ್ಲ. ಮೆಣಸಿನಕಾಯಿ ಘಾಟು ಹಾಕುವಂತಿಲ್ಲ. ಏಕೆಂದರೆ ಕಂಬ ಸಾರಿದ ದಿನದಿಂದ ಲಕ್ಷ್ಮೀದೇವಿ ಅಮ್ಮನವರು ಗ್ರಾಮದಲ್ಲಿ ಸಂಚಾರ ಮಾಡುತ್ತಾರೆ. ಮನೆಮನೆಗೂ ಹರಸುತ್ತಾರೆ ಎಂಬ ಪ್ರತೀತಿಯಿರುವ ಕಾರಣ ಪದ್ಧತಿ ಅನೂಚೂನವಾಗಿ ನಡೆದುಕೊಂಡು ಬಂದಿದೆ. ಕುದೂರು ಗ್ರಾಮದಲ್ಲಿ ಎಂತಹದ್ದೇ ಬೇಸಿಗೆ ಬಂದರೂ ನೀರಿನ ಅಭಾವ ಇರುವುದಿಲ್ಲ. ಬರಗಾಲದಲ್ಲೂ ಅಷ್ಟಿಷ್ಟು ರಾಗಿ ಬೆಳೆ ಆಗುತ್ತದೆ. ಗ್ರಾಮದ ಹಿತವನ್ನು ಅಮ್ಮನವರು ಕಾಯುತ್ತಿದ್ದಾರೆ ಎಂಬುದು ಗ್ರಾಮಸ್ಥರ ಪ್ರಬಲ ನಂಬಿಕೆ.ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಬಡವ ಶ್ರೀಮಂತ ಎಂಬ ಅಂತರವಿಲ್ಲದೆ ಎಲ್ಲರೂ ಒಂದೆಡೆ ಒಡನಾಡಿಗಳಾಗಿ ಸೇರುವ ಸ್ಥಳ ಜಾತ್ರೆಗಳು. ಇದು ಇಂದಿಗೂ ಜಾನಪದ ಸಂಸ್ಕೃತಿಯ ಅತಿದೊಡ್ಡ ಕೊಂಡಿಯಾಗಿದೆ. ನಾವು ಇಲ್ಲಿ ಬೆರೆತಾಗ ನಮ್ಮ ಅಧಿಕಾರ ಸ್ಥಾನ ಇವುಗಳನ್ನೆಲ್ಲಾ ಮರೆತು ಜನರಲ್ಲಿ ಒಬ್ಬರಾಗಿ ಇರುತ್ತೇವೆ ಎಂದು ಹೇಳಿದರು.
ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ಕುದೂರು ಗ್ರಾಮದ ಜಾತ್ರೆಯ ಸ್ವರೂಪವೇ ಬೇರೆಯಾಗಿದೆ. ದೇವರು ಶ್ರೀಲಕ್ಷ್ಮೀದೇವಿ ಗ್ರಾಮವನ್ನು ಕಾಪಾಡುತ್ತಾಳೆ ಎಂಬ ನಂಬಿಕೆಯಿಂದ ಕುದೂರಮ್ಮ ಎಂದು ಕರೆದು ಪೂಜೆಗೈಯುತ್ತಾರೆ. ಗ್ರಾಮದ ಜನರು ರಾಜ್ಯದ ಯಾವುದೇ ಮೂಲೆಯಲಿದ್ದರೂ ಜಾತ್ರೆಯ ದಿನ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿಕೊಂಡು ಹೋಗುವುದು ವಾಡಿಕೆ ಎಂದು ತಿಳಿಸಿದರು.ಪ್ರಧಾನ ಅರ್ಚಕ ಮಲ್ಲೇಶಯ್ಯ ಮಾತನಾಡಿ, ಬೂಟಾಟಿಕೆಯಿಲ್ಲದ, ಆಡಂಬರವಿಲ್ಲದ, ಸರಳ ಭಕ್ತಿಯಿಂದ ಜನರು ಇಲ್ಲಿಗೆ ಬಂದು ಪೂಜೆ ಸಲ್ಲಿಸಿಕೊಂಡು ಹೋಗುತ್ತಾರೆ. ಹೊಂಬಾಳೆಯ ರೂಪದಲ್ಲಿ ಶ್ರೀ ಲಕ್ಷ್ಮೀದೇವಿ ಅಮ್ಮನವರನ್ನು ದರ್ಶಿಸಿ ಮನದ ಕ್ಷೇಶಗಳನ್ನು ಕಳೆದುಕೊಂಡ ಸಾವಿರಾರು ಉದಾಹರಣೆಗಳು ಇಲ್ಲಿವೆ. ನಂಬಿಕೆಯೇ ಪ್ರಧಾನವಾದ ದಾರಿಯಲ್ಲಿ ನಾವು ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ನೂರಾರು ಮಕ್ಕಳು, ಮಹಿಳೆಯರು ಮತ್ತು ಪುರುಷರು ಬಾಯಿಬೀಗ ಹರಕೆ ತೀರಿಸಿದರು. ಜನಪದ ನೃತ್ಯ, ವಾದ್ಯಗಳಿಂದ ಜಾತ್ರೆ ಕಂಗೊಳಿಸಿತು.ಗ್ರಾಪಂ ಅಧ್ಯಕ್ಷೆ ಕುಸುಮಾ, ಉಪಾಧ್ಯಕ್ಷೆ ರಮ್ಯಜ್ಯೋತಿ, ಸದಸ್ಯರಾದ ಲತ, ಗೀತಾ, ಸಂಧ್ಯ, ನಿರ್ಮಲ, ಹನುಮಂತರಾಯಪ್ಪ, ತಾಪಂ ಮಾಜಿ ಅಧ್ಯಕ್ಷ ಕೆ.ಆರ್,ಯತಿರಾಜ್, ಭರತೀಶ್, ಗೋವಿಂದರಾಜ್, ಪ್ರಕಾಶ್, ಮಾಜಿ ಅಧ್ಯಕ್ಷ ರಾಘವೇಂದ್ರ, ದಾನಿ ದಯಾನಂದ್, ಪುರುಷೋತ್ತಮ್, ವೆಂಕಟೇಶ್ ಮತ್ತಿತರರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))