ಸಾರಾಂಶ
ಫೈನಲ್ ನಲ್ಲಿ ಪೊಲೀಸ್ ಪಬ್ಲಿಕ್ ಶಾಲೆಯ ತಂಡದ ವಿರುದ್ಧ ವಿರೋಚಿತ ಸೋಲ
ಕನ್ನಡಪ್ರಭ ವಾರ್ತೆ ಮೈಸೂರು
ಬಸವ ಮಾರ್ಗ ಸಂಸ್ಥೆ ದತ್ತು ಪಡೆದ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ಪಡೆದು, ಪ್ರಶಸ್ತಿ ತಮ್ಮದಾಗಿಸಿಕೊಂಡರು.ಐದು ಜಿಲ್ಲೆಯ ದೈಹಿಕ ಶಿಕ್ಷಕ ಶಿಕ್ಷಕರ ಸಂಘದಿಂದ ಇತ್ತೀಚೆಗೆ ನಗರದ ಮಹಾರಾಜ ಮೈದಾನದಲ್ಲಿ ಪಂದ್ಯಾವಳಿ ಆಯೋಜಿಸಿತ್ತು. ಐದು ಜಿಲ್ಲೆಯ 100ಕ್ಕೂ ಹೆಚ್ಚು ಶಾಲೆಯ ವಿದ್ಯಾರ್ಥಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು.
ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಸತತ ಆರು ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು, ಫೈನಲ್ ನಲ್ಲಿ ಪೊಲೀಸ್ ಪಬ್ಲಿಕ್ ಶಾಲೆಯ ತಂಡದ ವಿರುದ್ಧ ವಿರೋಚಿತ ಸೋಲನ್ನೊಪ್ಪಿದರು. ಕೇವಲ ಎರಡು ಅಂಕದಿಂದ ಪರಾಭವಗೊಂಡು ಜಿಲ್ಲಾ ಮಟ್ಟದಲ್ಲಿ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಾದ ಚಂದು, ಎಚ್. ಚೆಲುವರಾಜು, ಪ್ರತಾಪ್, ಆರ್. ಹೇಮಂತ್, ಎನ್. ಹೇಮಂತ್ ಕುಮಾರ್, ರಾಕೇಶ್, ಪುನೀತ್, ದರ್ಶನ್, ಎಚ್. ಅಭಿಲಾಶ್, ಬಿ. ಜೀವನ್, ಬಸವಶೆಟ್ಟಿ, ಎಚ್. ಆದರ್ಶ್ ಅವರನ್ನು ಶಾಲೆ ವತಿಯಿಂದ ಅಭಿನಂದಿಸಲಾಯಿತು.
ಬಸವ ಮಾರ್ಗ ಸಂಸ್ಥೆಯ ಸಂಸ್ಥಾಪಕ ಬಸವಣ್ಣ, ಸರ್ಕಾರಿ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಅಡಗಿದೆ. ಅದನ್ನು ಹೊರ ತೆಗೆಯಲು ಮಕ್ಕಳಿಗೆ ವೇದಿಕೆ ನೀಡಬೇಕು ಅಷ್ಟೆ. ಈ ನಿಟ್ಟಿನಲ್ಲಿ ಬಸವ ಮಾರ್ಗ ಸಂಸ್ಥೆ ಕುಕ್ಕರಹಳ್ಳಿ ಸರ್ಕಾರಿ ಪ್ರೌಢ ಶಾಲೆಯನ್ನು ದತ್ತು ಪಡೆದು ಅಗತ್ಯ ಮೂಲಸೌಕರ್ಯ ಕಲ್ಪಿಸುತ್ತಿದೆ. ಆ ಮೂಲಕ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಸರ್ವತೋಮು ಬೆಳವಣಿಗೆಗೆ ಕೆಲಸ ಮಾಡುತ್ತಿದೆ ಎಂದರು.ಉತ್ತಮ ಶಿಕ್ಷಣದ ಜತೆ ಕ್ರೀಡೆಗೂ ಹೆಚ್ಚು ಒತ್ತುಕೊಡುವಂತಾಗಬೇಕು.
ವಾಲಿಬಾಲ್‌ಗೆಂದೆ ಸಂಸ್ಥೆಯಿಂದಲೇ ಕೋಚ್ ನೇಮಿಸಲಾಗಿದೆ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಕೂಡ ಮಕ್ಕಳ ಸಾಧನೆಗೆ ಸಹಕಾರ ನೀಡಿದ್ದಾರೆ. ಮಕ್ಕಳು ಕಠಿಣ ಪರಿಶ್ರಮ ವಹಿಸಿದ್ದಾರೆ. ಪ್ರಥಮ ಪ್ರಯತ್ನದಲ್ಲೇ ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸರ್ಕಾರಿ ಶಾಲೆಯ ಮಕ್ಕಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಂಡು ದೇಶದ ಕೀರ್ತಿಯನ್ನು ಹೆಚ್ಚಿಸಬೇಕು ಎನ್ನುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಸಾಧನೆಗೆ ಬೇಕಾಗದ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.ಶಾಲೆಯ ಮುಖ್ಯ ಶಿಕ್ಷಕ ಚಂದ್ರು, ದೈಹಿಕ ಶಿಕ್ಷಣ ಶಿಕ್ಷಿಕಿ ಜಿ. ಸಾವಿತ್ರಿ, ಶಿಕ್ಷಕ ಜಿ. ಮಹೇಶ್, ತರಬೇತುದಾರ ಅನಿಲ್ ಇದ್ದರು.