ಕುಕ್ಕೆ ಸುಬ್ರಹ್ಮಣ್ಯದಲ್ಲಿ 24x7 ತುರ್ತು ಚಿಕಿತ್ಸಾ ಘಟಕಕ್ಕೆ ಮಂಜೂರಾತಿ ದೊರೆತಿದ್ದರೂ ವೈದ್ಯಾಧಿಕಾರಿಗಳ ನೇಮಕವಾಗದಿರುವುದನ್ನು ಖಂಡಿಸಿ ಬುಧವಾರ ನಾಗರಿಕರು, ಭಕ್ತರು ಹಾಗೂ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ 1000 ಪತ್ರಗಳ ಚಳವಳಿ ನಡೆಯಿತು.
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ 24x7 ತುರ್ತು ಚಿಕಿತ್ಸಾ ಘಟಕಕ್ಕೆ ಮಂಜೂರಾತಿ ದೊರೆತಿದ್ದರೂ ವೈದ್ಯಾಧಿಕಾರಿಗಳ ನೇಮಕವಾಗದಿರುವುದನ್ನು ಖಂಡಿಸಿ ಬುಧವಾರ ನಾಗರಿಕರು, ಭಕ್ತರು ಹಾಗೂ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ 1000 ಪತ್ರಗಳ ಚಳವಳಿ ನಡೆಯಿತು.
ತುರ್ತು ಚಿಕಿತ್ಸಾ ಘಟಕಕ್ಕೆ ಈಗಾಗಲೇ ಮಂಜೂರಾತಿ ದೊರೆತಿದ್ದು, ವೈದ್ಯಾಧಿಕಾರಿಗಳ ನೇಮಕಕ್ಕಾಗಿ ಹಲವು ಬಾರಿ ಮನವಿ ಹಾಗೂ ಹೋರಾಟ ನಡೆಸಲಾಗಿದೆ. ಆದರೂ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯಲು 1000ಕ್ಕೂ ಅಧಿಕ ಪತ್ರಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವ ಉದ್ದೇಶದಿಂದ ಚಳವಳಿ ನಡೆಸಲಾಯಿತು.ಈ ಸಂದರ್ಭ ವಿದ್ಯಾರ್ಥಿ ಸಂಘದ ಪ್ರಮುಖರು ಮಾತನಾಡಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುರ್ತು ಆರೋಗ್ಯ ಸಮಸ್ಯೆ ಎದುರಾದ ಸಂದರ್ಭದಲ್ಲಿ ತಕ್ಷಣ ಚಿಕಿತ್ಸೆ ದೊರೆಯುವುದು ಅತ್ಯಗತ್ಯ ಎಂದರು.ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ರಾಜ್ಯ ನಿರ್ದೇಶಕ ಬಿ.ಎನ್. ಮಹೇಶ್ ಕುಮಾರ್ ಮಾತನಾಡಿ, ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ಜಾಗ ಗುರುತಿಸಿದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸಾಧ್ಯವಿರುವ ಸಹಕಾರ ನೀಡಲು ಸಿದ್ಧರಿರುವುದಾಗಿ ಅವರು ತಿಳಿಸಿದರು.24x7 ತುರ್ತು ಚಿಕಿತ್ಸಾ ಘಟಕಕ್ಕೆ ಮಂಜೂರಾತಿ ದೊರೆತಿದ್ದರೂ ವೈದ್ಯಾಧಿಕಾರಿಗಳ ನೇಮಕಾತಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ 1000 ಪತ್ರಗಳ ಚಳವಳಿ ನಡೆಸಲಾಗಿದ್ದು, ಪತ್ರಗಳನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಲಾಗುವುದು ಎಂದು ಹೋರಾಟ ಸಮಿತಿ ತಿಳಿಸಿತು.24x7 ಆಸ್ಪತ್ರೆ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸೈನಿಕ ಸುಬ್ರಹ್ಮಣ್ಯ ಅತ್ಯಾಡಿ, ಡಾ. ರವಿ ಕಕ್ಕೆಪದವು, ಪವನ್ ಎಂ.ಡಿ., ದೀಪಕ್ ನಂಬಿಯಾರ್, ವಿಮಲಾ ರಂಗಯ್ಯ, ಗೋಪಾಲ್ ಎಣ್ಣೆಮಜಲು, ಕಡಬ ತಾಲೂಕು ಕೆಡಿಪಿ ಸದಸ್ಯ ಶಿವರಾಮ ರೈ ಸೇರಿದಂತೆ ಸ್ಥಳೀಯ ಗಣ್ಯರು, ನಾಗರಿಕರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.