ಸಾರಾಂಶ
ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಘಟ್ಟಪ್ರದೇಶ, ಕುಮಾರಪರ್ವತ ಭಾಗಗಳಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ತನಕವೂ ಸುರಿದ ಕುಂಭದ್ರೋಣ ಮಳೆಗೆ ಪುಣ್ಯ ನದಿ ಕುಮಾರಧಾರವು ಮೈದುಂಬಿ ಹರಿಯುತ್ತಿದೆ. ನದಿಯ ಪ್ರವಾಹದಿಂದಾಗಿ ಗುರುವಾರ ಕುಮಾರಧಾರ ಸ್ನಾನಘಟ್ಟವು ಮುಳುಗಡೆಗೊಂಡಿದೆ. ಅಲ್ಲದೆ ಶ್ರೀ ದೇವರ ಅವಭೃತ ಕಟ್ಟೆಯು ಜಲಾವೃತವಾಗಿದೆ.
ನದಿ ದಡದಲ್ಲಿ ತೀರ್ಥಸ್ನಾನ: ಪ್ರವಾಹದಿಂದ ಕುಮಾರಧಾರ ಕಿಂಡಿ ಆಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದೆ. ಕುಮಾರಧಾರ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಭಕ್ತರಿಗೆ ಮುಂಜಾಗ್ರತಾ ಕ್ರಮವಾಗಿ ನದಿಯಲ್ಲಿ ಸ್ನಾನ ಮಾಡಲು ಅವಕಾಶ ನಿರ್ಬಂಧಿಸಲಾಗಿದೆ. ಇದರಿಂದಾಗಿ ಭಕ್ತರು ನದಿ ದಡದಲ್ಲೇ ತೀರ್ಥಸ್ನಾನ ಮಾಡಿದರು. ನಿರಂತರ ಪಹರೆ: ನದಿ ದಡದಲ್ಲಿ ವಿಪತ್ತು ನಿರ್ವಹಣೆ ಪಡೆ ಸನ್ನದ್ಧವಾಗಿದ್ದು, ತೆಪ್ಪ ಸೇರಿದಂತೆ ಇತರ ಪರಿಕರಗಳೊಂದಿಗೆ ದಡದಲ್ಲಿ ಬೀಡುಬಿಟ್ಟಿದೆ.
ನದಿ ದಡದಲ್ಲಿ ಶ್ರೀ ದೇವಳದ ಭದ್ರತಾ ಸಿಬ್ಬಂದಿಗಳು ಮತ್ತು ಗೃಹ ರಕ್ಷಕ ಸಿಬ್ಬಂದಿಗಳು ನಿರಂತರವಾಗಿ ಪಹರೆ ಕಾರ್ಯವನ್ನು ದಿನದ ೨೪ ಗಂಟೆಯೂ ಮಾಡುತ್ತಿದ್ದಾರೆ. ಜಳಕದ ಕಟ್ಟೆ ಜಲಾವೃತ: ಕುಮಾರಧಾರ ನದಿಯಲ್ಲಿನ ಪ್ರವಾಹದಿಂದಾಗಿ ನದಿ ತಟದಲ್ಲಿನ ಶ್ರೀ ದೇವರ ಜಳಕದ ಕಟ್ಟೆ ಜಲಾವೃತಗೊಂಡಿದೆ.ನದಿ ತಟದಲ್ಲಿನ ಶೌಚಾಲಯ ಕಟ್ಟಡ, ಡ್ರೆಸ್ಸಿಂಗ್ ಕೊಠಡಿಗಳು ನೀರಿನಿಂದ ಆವೃತ್ತವಾಗಿದೆ. ಗ್ರಾಮೀಣ ಭಾಗಳಾದ ಹರಿಹರ ಪಲ್ಲತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು,ಗುತ್ತಿಗಾರು, ಪಂಜ,ಅಲೆಕ್ಕಾಡಿ, ನಿಂತಿಕಲ್ಲು, ನೆಟ್ಟಣ, ಬಿಳಿನೆಲೆ ಭಾಗದಲ್ಲಿ ಭಾರೀ ಮಳೆಯಾಗಿದೆ.ಇದರಿಂದ ಈ ಭಾಗದ ನದಿ, ತೊರೆಗಳು ತುಂಬಿ ಹರಿಯುತ್ತಿದೆ. ಹರಿಹರ ಹೊಳೆ, ಕಲ್ಲಾಜೆ ಹೊಳೆ ಇತ್ಯಾದಿಗಳು ತುಂಬಿ ಹರಿಯುತ್ತಿದೆ.