ವಿದ್ಯಾರ್ಥಿಗಳಿಗೆ ಸಸ್ಯಗಳ ವೈಜ್ಞಾನಿಕ ಹೆಸರುಗಳು, ಅಳಿವಿನಂಚಿನಲ್ಲಿರುವ ಜೀವಿಗಳು ಹಾಗೂ ಪ್ಲಾಂಟ್ ಆ್ಯಪ್‌ಗಳ ಪರಿಚಯ ಮಾಡಿಕೊಡುವ ಮೂಲಕ ಅವರಲ್ಲಿ ಪ್ರಕೃತಿಯ ಕುರಿತು ಹೆಚ್ಚಿನ ಅರಿವು ಮೂಡಿಸುವ ಪ್ರಯತ್ನ ಅವರದ್ದಾಗಿದೆ.

ಗಂಗಾಧರ ಕೊಳಗಿ

ಸಿದ್ದಾಪುರ: ತಾಲೂಕಿನ ಗೋಳಿಕೈ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಜೀವ ವಿಜ್ಞಾನ ಪದವೀಧರ ಪ್ರಾಥಮಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಕುಮಾರ್ ಎಂ. ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಸೌಲಭ್ಯವನ್ನು ಬಳಸಿಕೊಂಡು ವಿಶಿಷ್ಟ ರೀತಿಯಲ್ಲಿ ಬೋಧನೆ ಮಾಡುತ್ತಾರೆ.

ಇಗ್ನೋದಲ್ಲಿ ಬಿಎಡ್ ಪದವಿ ಪಡೆದಿರುವ ಕುಮಾರ ಎಂ. ಗ್ರಾಮೀಣ ಪ್ರದೇಶದ ಶಾಲೆಯ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಲು ಪ್ರಯೋಗಾಧಾರಿತ ಪಾಠ ಬೋಧನೆ ಮಾಡುವ ವಿಧಾನವನ್ನು ರೂಢಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳಿಗೆ ಸಸ್ಯಗಳ ವೈಜ್ಞಾನಿಕ ಹೆಸರುಗಳು, ಅಳಿವಿನಂಚಿನಲ್ಲಿರುವ ಜೀವಿಗಳು ಹಾಗೂ ಪ್ಲಾಂಟ್ ಆ್ಯಪ್‌ಗಳ ಪರಿಚಯ ಮಾಡಿಕೊಡುವ ಮೂಲಕ ಅವರಲ್ಲಿ ಪ್ರಕೃತಿಯ ಕುರಿತು ಹೆಚ್ಚಿನ ಅರಿವು ಮೂಡಿಸುವ ಪ್ರಯತ್ನ ಅವರದ್ದಾಗಿದೆ.

ಯುಟ್ಯೂಬ್‌ನಲ್ಲಿ ನೂರಕ್ಕೂ ಹೆಚ್ಚು ವಿಜ್ಞಾನ ಪ್ರಯೋಗಗಳ ವಿಡಿಯೋ ಮಾಡಿ ತಮ್ಮ ಶಾಲೆಯ ವಿದ್ಯಾರ್ಥಿಗಳಿಗಳಲ್ಲದೇ, ಇತರ ವಿದ್ಯಾರ್ಥಿಗಳಿಗೂ ಅದರ ಪ್ರಯೋಜನ ದೊರೆಯುವಂತೆ ಮಾಡಿದ್ದಾರೆ.

ಇಕೋ ಕ್ಲಬ್ ನಿರ್ವಹಣೆಯ ಜತೆಗೆ ಕಿಚನ್ ಗಾರ್ಡನ್ ನಿರ್ಮಿಸಿ ಅದರಲ್ಲಿಯೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾಹಿತಿ ದೊರಕಿಸಲು ಪ್ರಯತ್ನಿಸುತ್ತಿದ್ದಾರೆ. ಯೋಗ ಮತ್ತು ಕ್ರೀಡೆ ಕುರಿತಾಗಿ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸುವಲ್ಲಿ ಗಮನ ಹರಿಸುತ್ತಿದ್ದಾರೆ.

ಕುಮಾರ ಎಂ. ಅವರು ಮೊದಲಿಗೆ ಕೊಡಗಿನ ಮೊನ್ನಂಗೇರಿಯಲ್ಲಿ ಶಿಕ್ಷಕನಾಗಿ ಸೇವೆ ಆರಂಭಿಸಿ ಹೊಸದೇವಾಡೆ, ನಾಪೊಕ್ಲು ಮುಂತಾದೆಡೆ ವೃತ್ತಿ ನಿರ್ವಹಿಸಿ 2019ರಲ್ಲಿ ಸಿದ್ದಾಪುರ ತಾಲೂಕಿನ ಬಾಳೇಸರ ಶಾಲೆಗೆ ವರ್ಗಾವಣೆಗೊಂಡು ಪ್ರಸ್ತುತ ಗೋಳಿಕೈ ಪ್ರಾಥಮಿಕ ಶಾಲೆಯಲ್ಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿನೂತನ ಮಾದರಿಯ ಪಾಠ ಮಾಡುವ ಶಂಕರಾನಂದ

ಶಂಕರ ಭಟ್ಟ ತಾರೀಮಕ್ಕಿ

ಯಲ್ಲಾಪುರ: ತಾಲೂಕಿನ ಗ್ರಾಮೀಣ ಪ್ರದೇಶದ ಚಿಕ್ಕಮಾವಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶಂಕರಾನಂದ ಗುಲಾಬರಾಯ ದೇವದಾಸ ಒಬ್ಬ ವಿನೂತನ ಮಾದರಿಯಲ್ಲಿ ಪಾಠ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಇವರು ವಿಜ್ಞಾನದಲ್ಲಿ ಪಾಠೋಪಕರಣ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ, ಇ- ಕಲಿಕೋತ್ಸವ ಜಿಲ್ಲಾ ಪ್ರಶಸ್ತಿ ಸೇರಿದಂತೆ ವಿವಿಧ ಹತ್ತಾರು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಗುಣಾತ್ಮಕ ಕಲಿಕೆಯ ಅನುಷ್ಠಾನದಲ್ಲಿ ಶಿಕ್ಷಣ ಇಲಾಖೆ ಮೆಚ್ಚುಗೆಗೆ ಪಾತ್ರರಾದವರು. ಪ್ರತಿ ಹಂತದಲ್ಲೂ ಪ್ರಯೋಗಾತ್ಮಕ ಟಿವಿ ಮೂಲಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಎಐ ಅಳವಡಿಸಿ ವೀಡಿಯೋಗಳ ಮೂಲಕ ಮಕ್ಕಳನ್ನು ವೈಜ್ಞಾನಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕ್ರಿಯಾತ್ಮಕ ಶಿಕ್ಷಣ ನೀಡುತ್ತಿದ್ದಾರೆ.

ಅನೇಕ ಬಾರಿ ಶಿಕ್ಷಕರ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಗಿ ಭಾಗವಹಿಸಿದ್ದಾರೆ. ೨೦೨೪ರಲ್ಲಿ ಶಿಕ್ಷಕರ ಸಂಘ ನೀಡುವ ಜಿಲ್ಲಾ ಮಟ್ಟದ ಡಾ. ಎಸ್. ರಾಧಾಕೃಷ್ಣನ್ ಪ್ರಶಸ್ತಿ ಲಭಿಸಿದೆ. ಅಲ್ಲದೇ ಬೋಧನೆಯ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಿದ್ಧಹಸ್ತರು. ನಾಟಕ, ಕಲೆ, ಲಘುಸಂಗೀತ, ವಿಜ್ಞಾನ ಗಣಿತ ಇವನ್ನು ಮನೋಜ್ಞವಾಗಿ ಪಾಠ ಮಾಡುವಲ್ಲಿ ಅತ್ಯಂತ ಪರಿಣತಿ ಗಳಿಸಿಕೊಂಡಿದ್ದಾರೆ.ಇವರ ಶಾಲೆಯಲ್ಲಿ ೨೯ ವಿದ್ಯಾರ್ಥಿಗಳಿದ್ದು, ೬ ಮತ್ತು ೭ ತರಗತಿಗೆ ಇಂಗ್ಲಿಷ್, ಗಣಿತ, ವಿಜ್ಞಾನ ಪಾಠ ಮಾಡುವ ಇವರು ಮಕ್ಕಳಿಗೆ ನಾಟಕ ತರಬೇತಿ, ಏಕಪಾತ್ರಾಭಿನಯ, ಸಿದ್ಧಭಾಷಣ ಇವೆಲ್ಲ ಇವರ ನಿತ್ಯ ಶಾಲೆಯ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳುತ್ತಾರೆ. ವಿಶೇಷವಾಗಿ ಇವರ ಮಡದಿ ಅಶ್ವಿನಿ ಸಂಗೀತಗಾರ್ತಿಯಾಗಿದ್ದು, ಇವರು ತಬಲಾ ವಾದಕರು ಕೂಡ.