ಕುಮಾರದಾಸ್‌, ವಿನಾಯಕಗೆ ಮನಸೂರ ಪ್ರಶಸ್ತಿ ಪ್ರದಾನ

| Published : Mar 11 2025, 12:46 AM IST

ಸಾರಾಂಶ

ಖ್ಯಾತ ಹಿಂದೂಸ್ತಾನಿ ಸಂಗೀತಗಾರ ಡಾ. ಮಲ್ಲಿಕಾರ್ಜುನ ಮನಸೂರ ಅವರ ಹೆಸರಿನ ರಾಷ್ಟ್ರೀಯ ಪ್ರಶಸ್ತಿಯನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪಂಡಿತ ಡಿ. ಕುಮಾರದಾಸ್ ಅವರಿಗೆ ಪ್ರದಾನ ಮಾಡಲಾಯಿತು.

ಧಾರವಾಡ: ಖ್ಯಾತ ಹಿಂದೂಸ್ತಾನಿ ಸಂಗೀತಗಾರ ಡಾ. ಮಲ್ಲಿಕಾರ್ಜುನ ಮನಸೂರ ಅವರ ಹೆಸರಿನ ರಾಷ್ಟ್ರೀಯ ಪ್ರಶಸ್ತಿಯನ್ನು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪಂ.ಡಿ. ಕುಮಾರದಾಸ್ ಹಾಗೂ ಯುವ ಪ್ರಶಸ್ತಿಯನ್ನು ವಿನಾಯಕ ಹೆಗಡೆ ಅವರಿಗೆ ಸೋಮವಾರ ಇಲ್ಲಿಯ ಆಲೂರು ವೆಂಕಟರಾವ್‌ ಭವನದಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಸಂಗೀತ ಸತ್ತವರನ್ನು ಬದುಕಿಸುವ ಶಕ್ತಿ ಹೊಂದಿದೆ. ಧಾರವಾಡ ನೆಲದಲ್ಲಿ ಸಂಗೀತಕ್ಕೆ ಅನೇಕ ಮಹನೀಯರು ಕೊಡುಗೆ ನೀಡಿದ್ದಾರೆ ಎಂದರು.

ಹುಡಾ ಅಧ್ಯಕ್ಷ ಶಾಕಿರ್ ಸನದಿ ಮಾತನಾಡಿ, ಪದ್ಮವಿಭೂಷಣ ಡಾ. ಮಲ್ಲಿಕಾರ್ಜುನ ಮನಸೂರ ಅವರು ಸಂಗೀತ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಧಾರವಾಡ ಜಿಲ್ಲೆ ಸಾಹಿತ್ಯದ ಕೋಟೆ. ಇಲ್ಲಿ ಅನೇಕ ಮಹನೀಯರು ಸಂಗೀತಕ್ಕೆ ಶ್ರಮಿಸಿದ್ದಾರೆ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂ.ಡಿ. ಕುಮಾರದಾಸ್‌, ಕಲಾವಿದ ತನ್ನ ತಪಸ್ಸಿನ ಫಲವಾಗಿ ಕಲೆಯಲ್ಲಿ ಸಿದ್ದಿ ಪಡೆಯುತ್ತಾನೆ. ಒಂದು ಸಣ್ಣ ಹಳ್ಳಿಯಿಂದ ಬಂದ ನನಗೆ ದೊಡ್ಡ ಪ್ರಶಸ್ತಿ ಸಿಕ್ಕಿದ್ದು ಬಹಳಷ್ಟು ಖುಷಿಯಾಗಿದೆ. ನನ್ನ ಅಲ್ಪ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿದರು. ಪ್ರಶಸ್ತಿ ಪ್ರದಾನ ನಂತರ ಸಂಗೀತೋತ್ಸವ ನಡೆಯಿತು. ಸಮಾರಂಭದಲ್ಲಿ ಪದ್ಮಶ್ರೀ ಪಂ. ವೆಂಕಟೇಶ ಕುಮಾರ, ಶಂಕರ ಕುಂಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಇದ್ದರು.