ಸಾರಾಂಶ
ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ
ಕುಕ್ಕೆ ಸುಬ್ರಹ್ಮಣ್ಯ ಪರಿಸರ ಸೇರಿದಂತೆ ಪಶ್ಚಿಮ ಘಟ್ಟ ಮತ್ತು ಘಟ್ಟ ಪ್ರದೇಶದಲ್ಲಿ ಸೋಮವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯು ಅವಾಂತರವನ್ನೇ ಸೃಷ್ಟಿಸಿದೆ.ಮಂಗಳವಾರ ಬೆಳಗ್ಗಿನಿಂದಲೇ ಮಳೆಯು ತನ್ನ ತೀವ್ರತೆಯನ್ನು ಹೆಚ್ಚಿಸಿದ ಕಾರಣ ಕುಮಾರಧಾರ ನದಿ ಉಕ್ಕಿಹರಿಯುತ್ತಿದ್ದು ಅಪಾಯ ಮಟ್ಟದಲ್ಲಿದೆ. ಕುಕ್ಕೆ ಕ್ಷೇತ್ರ ಸಂಪರ್ಕಿಸುವ ಮೂರು ಹೆದ್ದಾರಿಗಳಲ್ಲಿ ಸಂಪರ್ಕ ಸೇತುವೆಗಳು ಮತ್ತು ರಸ್ತೆ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ.
ತ್ರಿವಳಿ ರಸ್ತೆ ಬ್ಲಾಕ್: ಸುಬ್ರಹ್ಮಣ್ಯ- ಪುತ್ತೂರು ಸಂಪರ್ಕ ರಸ್ತೆ ಮತ್ತು ಸೇತುವೆ ಸುಬ್ರಹ್ಮಣ್ಯದಲ್ಲಿ ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿದೆ. ಸುಬ್ರಹ್ಮಣ್ಯ- ನೆಟ್ಟಣ- ಉಪ್ಪಿನಂಗಡಿ- ಮಂಗಳೂರು ರಸ್ತೆಗೆ ಕೈಕಂಬದ ಕೋಟೆಸಾರ್ ಹೊಳೆಗೆ ಅಡ್ಡಲಾಗಿರುವ ಸೇತುವೆ ಬ್ಲಾಕ್ ಆಗಿದೆ. ಇದರಿಂದಾಗಿ ಸುಬ್ರಹ್ಮಣ್ಯ- ಉಪ್ಪಿನಂಗಡಿ- ಮಂಗಳೂರು ಮತ್ತು ಸುಬ್ರಹ್ಮಣ್ಯ-ನೆಟ್ಟಣ- ಮರ್ಧಾಳ- ಇಚ್ಲಂಪಾಡಿ- ಧರ್ಮಸ್ಥಳ ರಸ್ತೆ ಸಂಚಾರ ಸ್ಥಗಿತವಾಗಿದೆ. ಸುಬ್ರಹ್ಮಣ್ಯ- ಕೈಕಂಬ- ಗುಂಡ್ಯ- ಧರ್ಮಸ್ಥಳ ರಸ್ತೆಯ ಚೇರು ಎಂಬಲ್ಲಿ ರಸ್ತೆಗೆ ನೀರು ನುಗ್ಗಿ ಸಂಪರ್ಕ ಕಡಿತಗೊಂಡಿದೆ. ಈ ಕಾರಣದಿಂದ ಕುಕ್ಕೆ ಕ್ಷೇತ್ರಕ್ಕೆ ಸಂಪರ್ಕ ನೀಡುವ ಮೂರು ಹೆದ್ದಾರಿಗಳು ಬಂದ್ ಆದಂತಾಗಿವೆ. ಇದಲ್ಲದೆ ಶಿರಾಡಿ ಘಾಟ್ ಕುಸಿತದಿಂದ ಬೆಂಗಳೂರು- ಸುಬ್ರಹ್ಮಣ್ಯ ಸಂಚಾರವೂ ಸ್ಥಗಿತಗೊಂಡಿದೆ.ದೇವರ ಜಳಕದ ಕಟ್ಟೆ ಮುಳುಗಡೆ:
ಸುಬ್ರಹ್ಮಣ್ಯ ಸೇರಿದಂತೆ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಪುಣ್ಯ ನದಿ ಕುಮಾರಧಾರವು ಭಾರೀ ಪ್ರವಾಹದಿಂದ ಹರಿಯುತ್ತಿದೆ. ಕುಮಾರಧಾರ ಸ್ನಾನಘಟ್ಟವು ಮುಳುಗಡೆಗೊಂಡಿದೆ. ಸ್ನಾನಘಟ್ಟದ ಮೇಲೆ ಪ್ರವಾಹದಿಂದ ಕುಮಾರಧಾರ ಹರಿಯುತ್ತಿದ್ದಾಳೆ. ನದಿ ತೀರದಲ್ಲಿರುವ ಶ್ರೀ ದೇವರ ಜಳಗದ ಕಟ್ಟೆಯು ನದಿಯ ಪ್ರವಾಹದಿಂದ ಮುಳುಗಡೆಗೊಂಡಿದೆ. ಇಲ್ಲಿನ ಶೌಚಾಲಯ ಕಟ್ಟಡವು ಮುಕ್ಕಾಲು ಭಾಗ ಮುಳುಗಡೆಗೊಂಡಿದ್ದು ಛಾವಣಿ ಮಾತ್ರ ಗೋಚರಿಸುತ್ತಿದೆ. ಇಲ್ಲಿನ ಡ್ರೆಸ್ಸಿಂಗ್ ಕೊಠಡಿಗಳು ಸಂಪೂರ್ಣ ಮುಳುಗಡೆಗೊಂಡಿದೆ.ಲಗೇಜ್ ಕೊಠಡಿ, ಅಂಗಡಿಗಳು ಜಲಾವೃತ: ಕುಮಾರಧಾರ ನದಿಯ ಪ್ರವಾಹವು ಮಂಗಳವಾರ ವಿಪರೀತವಾಗಿ ಏರುತ್ತಿದೆ. ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ನದಿಯು ಕುಮಾರಧಾರ ವೃತ್ತದ ಸಮೀಪ ಬಂದಿದೆ. ಸ್ನಾನಘಟ್ಟದಿಂದ ಸುಮಾರು ೧೦೦ ಮೀಟರ್‌ಗೂ ಅಧಿಕ ದೂರ ನೀರು ವ್ಯಾಪಿಸಿದ್ದು, ಕುಮಾರಧಾರ ಧ್ವಾರದ ತನಕ ನೀರು ಆಗಮಿಸುವ ನಿರೀಕ್ಷೆ ಇದೆ. ಇದರಿಂದಾಗಿ ಅಕ್ಕ ಪಕ್ಕದ ಮನೆಯವರು ಆತಂಕಿತರಾಗಿದ್ದಾರೆ. ಅಲ್ಲದೆ ಕುಮಾರಧಾರದ ಲಗೇಜ್ ಕೊಠಡಿಯ ಕಟ್ಟಡ, ಅಂಗಡಿ ಮುಂಗಟ್ಟುಗಳು ಜಲಾವೃತ್ತವಾಗಿದ್ದು ಅಂಗಡಿಯ ಒಳಗೆ ನೀರು ನುಗ್ಗಿದೆ. ಸ್ನಾಘಟ್ಟದ ಸಮೀಪವಿದ್ದ ಅಂಗಡಿಯು ಸಂಪೂರ್ಣ ಮುಳುಗಡೆಗೊಂಡಿದೆ.
ಕುಕ್ಕೆ-ಮಂಜೇಶ್ವರ ಸಂಪರ್ಕ ಬಂದ್: ದರ್ಪಣತೀರ್ಥ ನದಿಯು ತುಂಬಿ ಹರಿದ ಕಾರಣ ಕುಕ್ಕೆಸುಬ್ರಹ್ಮಣ್ಯ- ಪುತ್ತೂರು-ಮಂಜೇಶ್ವರ ಅಂತರ್ ರಾಜ್ಯ ಹೆದ್ದಾರಿಯ ದರ್ಪಣತೀರ್ಥ ಸೇತುವೆಯು ಮುಳುಗಡೆಗೊಂಡಿತು. ನದಿ ನೀರು ಸುಮಾರು ಅರ್ಧ ಕಿ.ಮೀ. ದೂರದ ತನಕ ಹೆದ್ದಾರಿಯನ್ನು ಆಕ್ರಮಿಸಿಕೊಂಡಿತ್ತು. ದರ್ಪಣತೀರ್ಥ ಸೇತುವೆಯಿಂದ ಸುಮಾರು ೧೦೦ ಮೀ ದೂರವಿರುವ ತಿರುಗಣೆಗುಂಡಿ ತನಕ ಹೆದ್ದಾರಿಯನ್ನು ಪ್ರವಾಹ ಆಕ್ರಮಿಸಿಕೊಂಡಿದೆ. ದರ್ಪಣ ತೀರ್ಥ ನದಿ ದಡದ ಎಲ್ಲ ಕೃಷಿ ತೋಟಗಳು ನೀರಿನಿಂದ ತುಂಬಿತ್ತು. ಸಮೀಪದ ಮನೆಗಳು ಜಲಾವೃತಗೊಂಡಿತ್ತು.ತೋಟ ಜಲಾವೃತ: ಕುಮಾರಧಾರ ನದಿಯ ಪ್ರವಾಹದಿಂದಾಗಿ ದೋಣಿಮಕ್ಕಿ, ಕುಲ್ಕುಂದ ಕಾಲನಿ, ನೂಚಿಲ ಬೈಲು, ಕುದುರೆಮಜಲು, ಕುಮಾರಧಾರ ಮೊದಲಾದ ಕಡೆ ತೋಟಗಳಿಗೆ ನೀರು ನುಗ್ಗಿದೆ. ಅಡಕೆ, ತೆಂಗಿನ ಫಲಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಬಾಳೆಗಿಡಗಳು ಧರಾಶಾಹಿಯಾಗಿದೆ.
ಭಾಗಶಃ ದ್ವೀಪವಾದ ದೋಣಿಮಕ್ಕಿ: ದರ್ಪಣ ತೀರ್ಥ ನದಿಯಲ್ಲಿ ಪ್ರವಾಹ ಉಕ್ಕಿದ ಕಾರಣ ಸುಬ್ರಹ್ಮಣ್ಯದ ಕುಮಾರಧಾರದ ದೋಣಿಮಕ್ಕಿ ಪರಿಸರವು ಭಾಗಶಃ ದ್ವೀಪವಾಯಿತು. ಇಲ್ಲಿಗೆ ತೆರಳುವ ರಸ್ತೆಯು ಸಂಪೂರ್ಣವಾಗಿ ಜಲಾವೃತವಾಗಿ, ಇಲ್ಲಿನ ಮನೆಗಳಿಗೆ ನೀರು ನುಗ್ಗಿದೆ. ಇದರಿಂದಾಗಿ ಈ ಭಾಗದ ಸುಮಾರು ೪೦ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಡಿತಗೊಂಡಿದೆ.ಭಾರೀ ಮಳೆಗೆ ಶಾಲೆಗೆ ರಜೆ: ಸುಬ್ರಹ್ಮಣ್ಯದ ವಿದ್ಯಾಸಂಸ್ಥೆಗೆ ಗ್ರಾಮೀಣ ಭಾಗದ ದೂರ ದೂರುಗಳಿಂದ ವಿದ್ಯಾರ್ಥಿಗಳು ಆಗಮಿಸುವುದರಿಂದ ಮುಂಜಾಗ್ರತಾ ಕ್ರಮವಾಗಿ ಸುಬ್ರಹ್ಮಣ್ಯ ಪರಿಸರದ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು.
ಭಕ್ತರ ಸಂಖ್ಯೆ ವಿರಳ: ಭಾರೀ ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಭಕ್ತರ ಸಂಖ್ಯೆ ವಿರಳಗೊಂಡಿತ್ತು.ಪ್ರತಿನಿತ್ಯ ಭಕ್ತರಿಂದ ತುಂಬಿರುತ್ತಿದ್ದ ರಥಬೀದಿಯು ಜನರಿಲ್ಲದೆ ಬಿಕೋ ಅನ್ನುತ್ತಿತ್ತು. ಮಂಗಳವಾರ ಆಗಮಿಸಿದ ಅಲ್ಪ ಪ್ರಮಾಣದ ಭಕ್ತರು ಸಾರಾಗವಾಗಿ ಶ್ರೀ ದೇವರ ದರುಶನ ಪಡೆದು ಸೇವಾದಿಗಳನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿದರು.