ರಾಷ್ಟ್ರಪತಿಗೆ ಏಕವಚನ: ಸಿಎಂ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ

| Published : Jan 29 2024, 01:30 AM IST

ರಾಷ್ಟ್ರಪತಿಗೆ ಏಕವಚನ: ಸಿಎಂ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಢೋಂಗಿ ಪ್ರಜಾಪ್ರಭುತ್ವವಾದಿಯ ಅಸಲಿ ಮುಖ ಬೆಳಕಿಗೆ ಬಂದಿದೆ. ರಾಜೀನಾಮೆ ನೀಡದಿದ್ದರೆ ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ವಜಾಗೊಳಿಸಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ಚಿತ್ರದುರ್ಗದಲ್ಲಿ ನಡೆದ ಶೋಷಿತರ ಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ಸಂಬೋಧನೆ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.‘ಢೋಂಗಿ ಪ್ರಜಾಪ್ರಭುತ್ವವಾದಿಯ ಅಸಲಿ ಮುಖ ಕಳಚಿಬಿದ್ದಿದೆ. ಅವರು ಒಂದು ಕ್ಷಣವೂ ಮುಖ್ಯಮಂತ್ರಿ ಪದವಿಯಲ್ಲಿ ಇರಲು ಅರ್ಹರಲ್ಲ. ರಾಷ್ಟ್ರಪತಿಗಳಿಗೆ ಅಪಚಾರ ಎಸಗಿರುವ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಇಲ್ಲವೇ ಅವರನ್ನು ಆ ಸ್ಥಾನದಿಂದ ವಜಾ ಮಾಡಬೇಕು ಎಂದು ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.ದೇಶದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಅವರನ್ನು ಏಕವಚನದಲ್ಲಿ ತುಚ್ಛವಾಗಿ ಸಂಬೋಧಿಸಿದ ಕೀಳು, ವಿಕೃತ, ಹೀನ ನಾಲಗೆಯ ಸಿದ್ದರಾಮಯ್ಯ ಬಳಸಿರುವ ಪದವನ್ನು ಬರೆಯಲಾರೆ. ಆಚಾರಗೆಟ್ಟ ಮುಖ್ಯಮಂತ್ರಿ ಎಂದು ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.ಶೋಷಿತ ಬುಡಕಟ್ಟು ಸಮುದಾಯದಿಂದ ಬಂದ ದೇಶದ ಮೊದಲ ರಾಷ್ಟ್ರಪತಿಗಳು, ಅದರಲ್ಲಿಯೂ ಮಹಿಳೆಗೆ ಶೋಷಿತರ ಜಾಗೃತಿ ಸಮಾವೇಶದಲ್ಲೇ ಮುಖ್ಯಮಂತ್ರಿ ಅಪಮಾನ ಎಸಗಿದ್ದಾರೆ. ಅವರ ನಡವಳಿಕೆ ಕರ್ನಾಟಕಕ್ಕೆ ಅಂಟಿದ ಅಳಿಸಲಾಗದ ಕಳಂಕ. ದೇಶಕ್ಕೆ, ಸಂವಿಧಾನಕ್ಕೆ ಆಗಿರುವ ಘೋರ ಅಪಚಾರ ಎಂದು ಕುಮಾರಸ್ವಾಮಿ ಪ್ರಕಟಣೆಯಲ್ಲಿ ಹೇಳಿದ್ದಾರೆ.