ನಿಖಿಲ್ ಕಣ್ಣೀರಿಗೆ ಕುಮಾರಸ್ವಾಮಿಯೇ ಕಾರಣ: ಸುರೇಶ್

| Published : Nov 02 2024, 01:32 AM IST

ನಿಖಿಲ್ ಕಣ್ಣೀರಿಗೆ ಕುಮಾರಸ್ವಾಮಿಯೇ ಕಾರಣ: ಸುರೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ನಿಖಿಲ್ ಕಣ್ಣೀರಿಗೆ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಕಾರಣ. ಮಂಡ್ಯದಲ್ಲಿ ನಿಖಿಲ್ ಸೋಲಿನ ಅನುಕಂಪದ ಲಾಭ ಪಡೆದು ಕುಮಾರಸ್ವಾಮಿ ಗೆದ್ದರು. ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಕೆಲಸ ಮಾಡದೇ ನಿಖಿಲ್ ಸೋತರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ: ನಿಖಿಲ್ ಕಣ್ಣೀರಿಗೆ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಕಾರಣ. ಮಂಡ್ಯದಲ್ಲಿ ನಿಖಿಲ್ ಸೋಲಿನ ಅನುಕಂಪದ ಲಾಭ ಪಡೆದು ಕುಮಾರಸ್ವಾಮಿ ಗೆದ್ದರು. ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಕೆಲಸ ಮಾಡದೇ ನಿಖಿಲ್ ಸೋತರು ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.

ತಾಲೂಕು ಅಕ್ಕೂರು ಜಿಪಂ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಪ್ರಚಾರ ನಡೆಸಿದ ಅವರು, ಕುಮಾರಸ್ವಾಮಿ ಅವರ ಕಣ್ಣೀರಿಗೆ ಡಿ.ಕೆ.ಸುರೇಶ್, ಡಿ.ಕೆ.ಶಿವಕುಮಾರ್ ಕಾರಣ ಅನ್ನುತ್ತಾರೆ. ಆದರೆ ನಿಮ್ಮ ಪಾಪದ ಕೊಡದಿಂದ ನೀವು ಸೋತಿರೋದು. ನಮ್ಮ ಮೇಲೆ ದೂಷಣೆ ಮಾಡುವ ಅವಶ್ಯಕತೆ ಏನಿದೆ. ನಿಮ್ಮ ಮಗನ ಸೋಲಿಗೆ ನೀವೆ ಕಾರಣ, ನಿಮ್ಮ ಕುಟುಂಬದವರೇ ಕಾರಣ ಎಂದು ಆರೋಪಿಸಿದ ಅವರು, ಕ್ಷೇತ್ರದಿಂದ ಆಯ್ಕೆಯಾದ ಮೇಲೆ ಕುಮಾರಸ್ವಾಮಿ ಒಂದು ದಿನವೂ ಕ್ಷೇತ್ರಕ್ಕೆ ಬರಲಿಲ್ಲ. ಈಗ ಮಗನನ್ನ ನಿಮ್ಮ ಮಡಿಲಿಗೆ ಹಾಕಿದ್ದೇನೆ ಅಂದರೆ ಹೇಗೆ.? ಎಂದು ಪ್ರಶ್ನಿಸಿದರು.

ಸಿಪಿವೈ ಬೆಂಬಲಿಸಿ: ನಿಮ್ಮ ತಾಲೂಕಿನ ಋಣ ತೀರಿಸುವ ವ್ಯಕ್ತಿಗೆ ಆಶೀರ್ವಾದ ಮಾಡಿ. ಈ ತಾಲೂಕಿನ ಕೆರೆಗಳು ತುಂಬಲು ಯೋಗೇಶ್ವರ್ ಕಾರಣ. ಯೋಗೇಶ್ವರ್ ಯಾವಾಗಲೂ ನಿಮ್ಮ ಬಳಿ ಇರುವ ವ್ಯಕ್ತಿ. ಅವರನ್ನು ಉಳಿಸಿಕೊಂಡು ತಾಲೂಕಿನ ಅಭಿವೃದ್ಧಿಗೆ ಅವಕಾಶ ಕೊಡಿ. ನಾವು ನಿಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ ಅಂದರೆ ಮುಂದಿನ ಬಾರಿ ಮತ ಹಾಕಬೇಡಿ ಎಂದರು.

ಬಾಕ್ಸ್‌................

ಕಾಂಗ್ರೆಸ್‌ಗೆ ಜನಬೆಂಬಲ: ಸುರೇಶ್

ಚನ್ನಪಟ್ಟಣ: ಯೋಗೇಶ್ವರ್‌ಗೆ ಎರಡು ಬಾರಿ ಮೋಸ ಆಗಿದೆ. ಅವರು ಈ ಬಾರಿ ಮತ್ತೆ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಜನರ ಬೆಂಬಲ ಇದೆ. ಹೀಗಾಗಿ ಯೋಗೇಶ್ವರ್ ಗೆಲ್ಲುವ ವಿಶ್ವಾಸ ಇದೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ತಾಲೂಕಿನ ಸುಳ್ಳೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಕಣ್ಣೀರಿಗೆ ಡಿ.ಕೆ.ಬ್ರದರ್ಸ್ ಕಾರಣ ಎಂಬ ಹೆಚ್‌ಡಿಕೆ ಹೇಳಿಕೆಗೆ, ಕುಮಾರಸ್ವಾಮಿ ಅವರು ಯಾಕೆ ಈ ಹೇಳಿಕೆ ಕೊಟ್ಟರೋ ಗೊತ್ತಿಲ್ಲ. ಕುಮಾರಸ್ವಾಮಿ ಮಗ, ದೇವೇಗೌಡರ ಮೊಮ್ಮಗ ಅನ್ನೋದಕ್ಕೆ ನಿಖಿಲ್‌ನ ರಾಜ್ಯದ ಜನ ಗುರುತಿಸುತ್ತಿದ್ದಾರೆ. ಅದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಅವರ ಗುರುತಿನಿಂದ ಅವರಿಗೆ ಎಷ್ಟು ಅನನುಕೂಲ ಆಗಿದೆ. ಅನುಕೂಲ ಎಷ್ಟಾಗಿದೆ ಆಗಿದೆ ಅನ್ನೋದಕ್ಕಿಂತ ಆ ಹೆಸರೆ ನಿಖಿಲ್‌ಗೆ ಶಕ್ತಿಯಾಗಿದೆ ಎಂದರು.

ನಿಖಿಲ್ ಕುಮಾರಸ್ವಾಮಿ ಇವತ್ತಿನ ಪರಿಸ್ಥಿತಿಗೆ ಸುರೇಶ್ ಕಾರಣ ಎಂಬ ವಿಚಾರಕ್ಕೆ, ನಿಖಿಲ್ ಅಳುವಿಗೆ ಡಿ.ಕೆ.ಸಹೋದರರು ಕಾರಣ ಅಂತಾ ಕುಮಾರಸ್ವಾಮಿ ಹೇಳುತ್ತಿದ್ದಾರೆ. ನಿಖಿಲ್ ಮಂಡ್ಯದಲ್ಲಿ ಸ್ಪರ್ಧೆ ಮಾಡಿದರು. ಆಗ ಮಂಡ್ಯ ಜನರು ನಿಖಿಲ್‌ನ ತಿರಸ್ಕಾರ ಮಾಡಿದರು. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಶಾಸಕರಾಗಿದ್ದರು. ಅವರಿಗೆ ಅವಶ್ಯಕತೆ ಇತ್ತೋ ಇಲ್ವೋ ಗೊತ್ತಿಲ್ಲ. ಮಂಡ್ಯಕ್ಕೆ ಹೋಗಿ ಮಗನನ್ನ ಸೋಲಿಸಿದಿರಿ, ನನಗೆ ಮತ ಹಾಕಿ ಅಂತ ಕೇಳಿದರು. ಮಗನನ್ನ ನೀಲಿಸೋ ಬದಲು ಅವರು ಹೋಗಿ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದರು.

ಸುಳ್ಳಿಗೆ ಮಿತಿ ಇದೆ:

ಇದರಲ್ಲಿ ಅನ್ಯಾಯ ಏನ್ ಇದೆ?. ಸುಳ್ಳನ್ನ ಹೇಳೋಕೆ ಒಂದು ಇತಿಮಿತಿ ಇದೆ. ಮಗನ ಸೋಲಿಗೆ ಕುಮಾರಸ್ವಾಮಿ ಕಾರಣ. ಕುಮಾರಸ್ವಾಮಿಯೇ ಮಗನ ಸೋಲಿನ ಲಾಭ ಪಡೆಯುತ್ತಿದ್ದಾರೆ. ಇದರಲ್ಲಿ ಬೇರೆಯವರ ಪಾತ್ರ ಏನಿದೆ. ನಾನು ಕೂಡ ಸೋತಿದ್ದೇನೆ. ಅದಕ್ಕೆ ನಾನು ಆರೋಪ ಮಾಡೋಕೆ ಆಗುತ್ತಾ?. ಜನರು ತೀರ್ಪು ಕೊಟ್ಟಿದ್ದಾರೆ, ನಾನು ಸ್ವಾಗತ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ಕೊಡಬೇಕು ಅಷ್ಟೇ ಎಂದರು.

ರಾಮನಗರದಂತೆ ಚನ್ನಪಟ್ಟಣದಲ್ಲಿ ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬ ಆರೋಪಕ್ಕೆ, ಷಡ್ಯಂತ್ರ ಮಾಡಿ ನಿಖಿಲ್ ಚುನಾವಣೆಗೆ ನಿಲ್ಲಿಸಿರೋದು ಕುಮಾರಸ್ವಾಮಿ ಹಾಗೂ ದೇವೇಗೌಡರು. ಯೋಗೇಶ್ವರ್ ಆಚೆ ಓಡಿಸಿ ಮಗನನ್ನ ನಿಲ್ಲಿಸಿ ಷಡ್ಯಂತ್ರ ಮಾಡಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನನ್ನ ನಿಲ್ಲಿಸಿ ಗೆಲ್ಲಿಸಬೇಕಾಗಿತ್ತು ಎಂದರು.

ಚನ್ನಪಟ್ಟಣ ಮತದಾರರಿಗೆ ಆಮಿಷವೊಡ್ಡುತ್ತಿದ್ದಾರೆ ಎಂಬ ವಿಚಾರಕ್ಕೆ, ಕೋಳಿ, ಕಾಸು, ಸೀರೆ, ಪಂಚೆ ಕೊಟ್ರು ಅಂತ ಚನ್ನಪಟ್ಟಣ ಜನರು ಹೇಳುತ್ತಿದ್ದಾರೆ. ಇದನ್ನ ಚುನಾವಣಾ ಆಯೋಗ ಗಮನಿಸಬೇಕು ಅಂತ ಒತ್ತಾಯ ಮಾಡುತ್ತೇನೆ ಎಂದರು.

ಪೊಟೋ೧ಸಿಪಿಟಿ೫:

ಚನ್ನಪಟ್ಟಣ ತಾಲೂಕಿನ ಚಕ್ಕಲೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ಡಿ.ಕೆ.ಸುರೇಶ್ ಪ್ರಚಾರ ನಡೆಸಿದರು.